More

    ಅಂಗವಿಕಲರ ಕಾಳಜಿಯತ್ತ ಗಮನಹರಿಸಿ

    ಮುದ್ದೇಬಿಹಾಳ: ವಿಶೇಷಚೇತನ ಮಕ್ಕಳು ದೇವರ ಮಕ್ಕಳು. ಅವರು ಅಂಗಾಂಗದಿಂದ ಊನರಾಗಿದ್ದರು ಅವರಲ್ಲಿನ ಮಾನಸಿಕ ಸಾಮರ್ಥ್ಯ ವಿಶೇಷವಾಗಿರುತ್ತದೆ. ವಿಶೇಷ ಜ್ಞಾನ ಅವರಲ್ಲಿರುತ್ತದೆ. ಇಂಥ ಮಕ್ಕಳ ಬಗ್ಗೆ ಅವರ ಪಾಲಕರು, ಪೋಷಕರು ಕೀಳರಿಮೆ ತೋರದೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.

    ಇಲ್ಲಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ, ಸಲಕರಣೆ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಹುಟ್ಟಿನಿಂದಲೇ ಅಂಧರಾಗಿದ್ದ ಪುಟ್ಟರಾಜ ಗವಾಯಿಗಳು ಅಂಧರಿಗೆ ಸಂಗೀತ ಶಾಲೆ ತೆರೆದು ಮಾಡಿದ ಸಾಧನೆ ವಿಶೇಷ ಚೇತನ ಮಕ್ಕಳಿಗೆ ಪ್ರೇರಣೆಯಾಗಿರಬೇಕು. ಸಮಾಜದಲ್ಲಿ ಎಷ್ಟೋ ವಿಶೇಷಚೇತನರು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅವರ ಸಾಧನೆಯನ್ನು ಶಿಕ್ಷಕರು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಬೇಕು ಎಂದರು.

    ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಘಾಟಿ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ದೊರಕಿಸಿಕೊಡಬೇಕು. ಇವರಿಗೆ ದೊರಕುವ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರ ಮತ್ತು ಸಮಾಜ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.

    ಕೆಬಿಎಂಪಿಎಸ್‌ನ ಎಸ್‌ಡಿಎಂಸಿ ಅಧ್ಯಕ್ಷ ಪಿ.ಎನ್. ನದಾಫ ಅಧ್ಯಕ್ಷತೆ ವಹಿಸಿದ್ದರು. ತಾಪಂ ಯೋಜನಾಧಿಕಾರಿ ಖುಬಾಸಿಂಗ್ ಜಾಧವ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಎಸ್. ಕವಡಿಮಟ್ಟಿ, ಭೂನ್ಯಾಯ ಮಂಡಳಿ ಸದಸ್ಯ ಬಾಪುರಾಯ ದೇಸಾಯಿ ಹಡಗಲಿ, ಅನುಷ್ಠಾನಾಧಿಕಾರಿ ಆರ್.ಡಿ. ಗೋರ್ಕಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮುದ್ನೂರ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ. ಪ್ರವೀಣ ಸುಣಕಲ್, ಬಿಆರ್‌ಪಿ ಸಿದ್ದನಗೌಡ ಬಿಜ್ಜೂರ ಹಾಗೂ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಅಂಗವಿಕಲ ಮಕ್ಕಳು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.

    ತಾಲೂಕಿನ 74 ಮಕ್ಕಳಿಗೆ ಟ್ರೈಸಿಕಲ್, ಕ್ರೇಚಸ್, ವೀಲ್‌ಚೇರ್, ಶ್ರವಣ ಸಾಧನ, ರೂಲೇಟರ್, ಎಂ.ಆರ್. ಕಿಟ್ ಸಾಮಗ್ರಿ ವಿತರಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಪ್ರಾಸ್ತಾವಿಕ ಮಾತನಾಡಿದರು. ಸಿಆರ್‌ಪಿ ಜಿ.ಎಚ್. ಚವ್ಹಾಣ ನಿರೂಪಿಸಿದರು. ಎಸ್.ಎಸ್. ರಾಮಥಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts