More

    ಕರಕುಚ್ಚಿ ಗ್ರಾಮಕ್ಕೆ ನೊಣಗಳ ಮುತ್ತಿಗೆ

    ತರೀಕೆರೆ: ತೆಲುಗು ಸಿನಿಮಾ ‘ಈಗ’ದಲ್ಲಿ ಗ್ರಾಫಿಕ್‌ನಿಂದ ಸೃಷ್ಟಿಸಿದ್ದ ನೊಣ ಖಳನಾಯಕನ ವಿರುದ್ಧ ಸೇಡು ತೀರಿಸಿಕೊಳ್ಳುವ ದೃಶ್ಯಗಳು ಆ ಕ್ಷಣದಲ್ಲಿ ಸಹಜ ಅನಿಸುತ್ತದೆ. ಆದರೆ ನಿಜ ಜೀವನದಲ್ಲಿ ನೊಣಗಳು ಅಷ್ಟೊಂದು ಉಪಟಳ ಕೊಡುವುದನ್ನು ತಾಲೂಕಿನ ಕರಕುಚ್ಚಿ ಗ್ರಾಮದ ಜನ ಅನುಭವಿಸುತ್ತಿದ್ದಾರೆ.

    ಹೌದು, ಹದಿನೈದು ದಿನಗಳಿಂದ ಕರಕುಚ್ಚಿ ಗ್ರಾಮದಿಂದ ಸಿದ್ದೇಗೌಡ ಸರ್ಕಲ್‌ವರೆಗೆ ನೊಣಗಳ ಹಾವಳಿ ಹೆಚ್ಚಿದ್ದು, ರಸ್ತೆ ಬದಿಯಲ್ಲಷ್ಟೇ ಅಲ್ಲ ಮನೆಯಲ್ಲೆಲ್ಲ ಆವರಿಸಿಕೊಳ್ಳುತ್ತಿರುವ ನೊಣಗಳ ಕಾಟಕ್ಕೆ ಜನ ಹೈರಾಣಾಗಿದ್ದಾರೆ.
    ಭದ್ರಾ ನದಿ ಪಾತ್ರದ ಕರಕುಚ್ಚಿ ಗ್ರಾಮದಲ್ಲಿ ಹಿಂದೆಂದೂ ಕಂಡರಿಯದ ನೊಣಗಳ ಹಾವಳಿ ಜನರನ್ನು ಕಂಗಾಲಾಗಿಸಿದೆ. ಗ್ರಾಮದಲ್ಲಿ ಹಾರಾಡುತ್ತಿರುವ ನೊಣಗಳನ್ನು ಹಿಡಿದು ಸಾಯಿಸಲು ಜನ ಪ್ಲಾಸ್ಟಿಕ್ ಕವರ್ ಮೊರೆ ಹೋಗುತ್ತಿದ್ದು, ಮನೆಗಳು, ಹೋಟೆಲ್, ಅಂಗಡಿ ಮುಂಗಟ್ಟುಗಳ ಮುಂದೆ ಪ್ಲಾಸ್ಟಿಕ್ ಕವರ್ ಕಟ್ಟಿದ್ದಾರೆ. ಆದರೂ ದಾಂಗುಡಿ ಇಡುತ್ತಿರುವ ನೊಣಗಳ ಗುಂಯ್‌ಗುಡುವ ಸದ್ದು ಕಿರಿಕಿರಿ ಉಂಟು ಮಾಡಿ ಜನರ ನೆಮ್ಮದಿ ಕಸಿಯುತ್ತಿದೆ.
    ಜನರು ಮನೆ ಮುಂಭಾಗದಲ್ಲಿ ಪ್ಲಾಸ್ಟಿಕ್ ಕವರ್ ಕಟ್ಟುವುದು, ಮನೆಯಂಗಳದಲ್ಲಿ ಉಪ್ಪು ನೀರು ಚೆಲ್ಲುವುದು, ಕೀಟನಾಶಕ ಸಿಂಪಡಿಸುತ್ತಿದ್ದರೂ ಉಪಟಳ ಮಾತ್ರ ತಪ್ಪುತ್ತಿಲ್ಲ. ಗ್ರಾಮದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೊಣಗಳು ಉತ್ಪತ್ತಿಯಾಗಲು ಕಾರಣ ಏನೆಂಬುದು ತಿಳಿದಿಲ್ಲ. ಗ್ರಾಮದ ತೋಟವೊಂದರಲ್ಲಿ ಶೌಚಗೃಹದ ಒಣತ್ಯಾಜ್ಯ ಹಾಕಿರುವುದರಿಂದ ನೊಣಗಳು ಹುಟ್ಟಿಕೊಂಡಿವೆ ಎಂದು ಹೇಳುತ್ತಿದ್ದರೂ ಸ್ಪಷ್ಟವಾಗಿ ಏನನ್ನೂ ಹೇಳಲಾಗದು.
    ಊರಿನಲ್ಲಿ ನೊಣಗಳ ಹಾವಳಿ ಜನರನ್ನು ಹೈರಾಣಾಸುತ್ತಿರುವ ವಿಷಯ ಗ್ರಾಮ ಪಂಚಾಯಿತಿ ಗಮನಕ್ಕೆ ಬಂದಿದ್ದರೂ ಅಲ್ಲಿನ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನೊಣಗಳ ಉಪಟಳಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತಿಲ್ಲ.
    ನೊಣಗಳ ಹಾವಳಿಯಿಂದ ಟೈಫಾಯಿಡ್, ಕಾಲರಾದಂಥ ರೋಗ ಹರಡುವ ಭೀತಿ ಉಂಟಾಗಿದೆ. ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ನೊಣಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
    ಊಟದ ತಟ್ಟೆಗೆ ದಾಳಿ: ಊರಿನಲ್ಲಿ ಮಿತಿ ಮೀರಿರುವ ನೊಣಗಳು ಅಲ್ಲಲ್ಲಿ ಮೊಟ್ಟೆ ಇಡುತ್ತಿರುವುದರಿಂದ ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಯೊಳಗೆ ಉಪಟಳ ನೀಡುತ್ತಿರುವ ನೊಣಗಳು ಊಟದ ತಟ್ಟೆಗೆ ದಾಳಿ ಇಡುತ್ತವೆ. ಅವುಗಳನ್ನು ಒಂದು ಕೈಯಲ್ಲಿ ಓಡಿಸುತ್ತ, ಇನ್ನೊಂದು ಕೈಯಲ್ಲಿ ಊಟ ಮಾಡುವ ಸ್ಥಿತಿ ಜನರದು.
    ಕ್ಯಾಂಟೀನ್‌ಗಳು ಖಾಲಿ: ನೊಣಗಳ ಹಾವಳಿಯಿಂದ ಜನ ರೋಸಿಹೋಗಿದ್ದರೆ ಕ್ಯಾಂಟೀನ್ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಗ್ರಾಮದಲ್ಲಿರುವ ಬಹುತೇಕ ಸಣ್ಣ ಸಣ್ಣ ಕ್ಯಾಂಟೀನ್‌ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ಕ್ಯಾಂಟೀನ್‌ಗಳಲ್ಲಿ ಸಿಹಿ ತಿನಿಸು, ಉಪಾಹಾರ, ಕಾಫಿ, ಟೀ ಲೋಟ, ಬಟ್ಟಲುಗಳ ಮೇಲೆ ನೊಣ ಮುತ್ತಿಕೊಳ್ಳುವುದರಿಂದ ಗ್ರಾಹಕರು ಕ್ಯಾಂಟೀನ್‌ಗೆ ಬರುವುದು ಕಡಿಮೆಯಾಗಿದೆ. ಇದು ಕ್ಯಾಂಟೀನ್ ಮಾಲೀಕರಿಗೆ ತಲೆನೋವು ತಂದಿದೆ.
    ನಿದ್ದೆ ಮಾಡಲೂ ಬಿಡುತ್ತಿಲ್ಲ: ನೊಣಗಳ ಹಾವಳಿಯಿಂದ ಜನರ ನಿದ್ರಾ ಭಂಗವಾಗುತ್ತಿದೆ. ಹಗಲಿನಲ್ಲಂತೂ ನೆಮ್ಮದಿಯಾಗಿ ಕೆಲ ಸಮಯ ನಿದ್ದೆ ಮಾಡುವಂತಿಲ್ಲ. ರಾತ್ರಿಯೂ ನಿದ್ದೆಗೆಡಿಸುತ್ತಿವೆ. ಮುಸುಕು ಮುಚ್ಚಿಕೊಂಡು ಮಲಗಿದರೂ ಸಂದಿಯಲ್ಲಿ ನುಸುಳಿ ನಿದ್ದೆ ಹಾಳು ಮಾಡುತ್ತಿವೆ. ನೊಣಗಳ ಹಾವಳಿಯಿಂದ ಆಗಾಗ ಎಚ್ಚರವಾಗಿ ನಿದ್ದೆಗೆಡುತ್ತಿದ್ದಾರೆ.
    ಕರಕುಚ್ಚಿ ಗ್ರಾಮದಲ್ಲಿ ನೊಣಗಳ ಕಾಟ ಹೆಚ್ಚಾಗಿರುವ ಮಾಹಿತಿ ಇದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ಜು.24ರಂದು ನಾನು ಭೇಟಿ ನೀಡಿ ಪರಿಶೀಲಿಸಿ ನೊಣಗಳ ಹಾವಳಿ ತಡೆಗೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಡೆಂಘೆ ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಸಹಾಯಕಿಯರು ನೀಡುತ್ತಿರುವ ಮಾಹಿತಿ ಅನ್ವಯ ವಲಸೆ ಬರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ ಎನ್ನುತ್ತಾರೆ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts