More

    ಅನಧಿಕೃತ ಫ್ಲೆಕ್ಸ್ ಅಪಾಯಕ್ಕೆ ಆಹ್ವಾನ

    ಗುರುಪುರ: ಹೆದ್ದಾರಿ, ರಸ್ತೆಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾವಳಿ ವ್ಯಾಪಕವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಫ್ಲೆಕ್ಸ್‌ಗಳು ಅಪಘಾತಕ್ಕೆ ದಾರಿ ಮಾಡಿಕೊಡುತ್ತಿವೆ.
    ಕುಲಶೇಖರದಿಂದ ಮೂಡುಬಿದಿರೆವರೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಲವು ಉದ್ಯಮ ಸಂಸ್ಥೆಗಳ ಫ್ಲೆಕ್ಸ್, ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಫ್ಲೆಕ್ಸ್ ಅಳವಡಿಕೆಗೆ ಹೆದ್ದಾರಿ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

    ಗುರುಪುರ ಕೈಕಂಬ ಕಾನ್ವೆಂಟ್ ತಿರುವಿನಲ್ಲಿ ಖಾಸಗಿ ಸಂಸ್ಥೆ ಜಾಹೀರಾತು, ಅದರೊಂದಿಗೆ ಇನ್ನೂ ಮೂರು ಜಾಹೀರಾತುಗಳು ಅಪಾಯಕಾರಿಯಾಗಿವೆ. ಕುಲಶೇಖರ, ವಾಮಂಜೂರು, ಕೆತ್ತಿಕಲ್, ಪರಾರಿ, ಗುರುಪುರ, ಕೈಕಂಬ, ಗಂಜಿಮಠ, ಮಿಜಾರು ಪ್ರದೇಶದಲ್ಲಿ ಈಗಾಗಲೇ ಅಪಘಾತಗಳು ಸಂಭವಿಸಿವೆ.

    ತೆರವಿಗೆ ಆಗ್ರಹ: ಹೆದ್ದಾರಿ ಪಕ್ಕ ಅಳವಡಿಸಲಾಗುವ ಅನಧಿಕೃತ ಫ್ಲೆಕ್ಸ್‌ಗಳು ತಿಂಗಳುಗಟ್ಟಲೆ ಹಾಗೆಯೇ ಉಳಿದುಕೊಳ್ಳುತ್ತವೆ. ಇಂತಹ ಜಾಹೀರಾತು ಫಲಕಗಳ ವಿರುದ್ಧ ಹೆದ್ದಾರಿ ವಿಭಾಗ, ಗ್ರಾಪಂ ಆಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

    ತಿರುವುಗಳಲ್ಲೇ ಅಳವಡಿಕೆ: ಹೆದ್ದಾರಿ ತಿರುವುಗಳಲ್ಲಿ ಅಳವಡಿಸಲಾದ ಬೃಹತ್ ಜಾಹೀರಾತು ಫ್ಲೆಕ್ಸ್‌ಗಳು ಹೆಚ್ಚು ಅಪಾಯಕಾರಿಯಾಗಿವೆ. ಮುಂದಿನಿಂದ ಬರುವ ವಾಹನಗಳು ಕಾಣದೆ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಜತೆಗೆ ಬೇಕಾಬಿಟ್ಟಿ ಫೆಕ್ಸ್‌ಗಳಿಂದ ಹೆದ್ದಾರಿ ಅಂದ ಕೆಡುತ್ತಿದೆ ಎಂಬುದು ಸಾಮಾನ್ಯ ಮಾತು.

    ಹೆದ್ದಾರಿಯಲ್ಲಿ ಜಾಹೀರಾತು ಫ್ಲೆಕ್ಸ್ ಅಳವಡಿಸುವಂತಿಲ್ಲ. ಹೆದ್ದಾರಿ ಪಕ್ಕದಲ್ಲಿ ವ್ಯಾಣಿಜ್ಯೋದ್ಯಮಗಳ ಫ್ಲೆಕ್ಸ್ ಅಳವಡಿಸಲು ಪರವಾನಗಿ ನೀಡುವ ಅಧಿಕಾರ ಸ್ಥಳೀಯ ಗ್ರಾಪಂ ಆಡಳಿತಕ್ಕೆ ಇಲ್ಲ. ಕೆಲ ಖಾಸಗಿ ಸಂಸ್ಥೆಯವರು ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದ್ದಾರೆ. ಅವುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಗ್ರಾಮ ಪಂಚಾಯತಿ ಪಿಡಿಒ ಮತ್ತು ಆಡಳಿತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ.
    – ಮುರುಗೇಶ್ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts