More

    ಅಭಿವೃದ್ಧಿ ಸಹಿಸದೆ ಅನಗತ್ಯ ಟೀಕೆ: ಅಮೃತಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ಸುನೀಲ್ ಹೇಳಿಕೆ

    ಕಾರ್ಕಳ: ಮಾರ್ಪಾಡಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ಮುಂದಾದ ದೇಶ ಭಕ್ತರ ಮೇಲೆ ಗುಂಡು ಹಾರಾಟ ನಡೆದಿತ್ತು. ಈ ಘಟನೆ ಮರೆತಿರುವ ಕಾಂಗ್ರೆಸ್ ಮುಖಂಡರು ಅಮೃತ ಮಹೋತ್ಸವ ವೇಳೆ ಕಾಲ್ನಡಿಗೆ ಜಾಥಾ ನಡೆಸಿ ಬಿಜೆಪಿಯನ್ನು ಟೀಕಿಸುತ್ತಿರುವುದು ಆ ಪಕ್ಷದ ಇಬ್ಬಗೆ ನೀತಿಗೆ ಸಾಕ್ಷಿ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ ಹೇಳಿದರು.

    ಕಾರ್ಕಳದಲ್ಲಿ ಅಮೃತಮಹೋತ್ಸವ ಪೂರ್ವಭಾವಿ ಸಭೆ ಬಳಿಕ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಇಂದು ಬಿಜೆಪಿ ಆಡಳಿತವನ್ನು ಪ್ರಶ್ನಿಸುತ್ತಿದೆ. ಕಾಂಗ್ರೆಸ್‌ಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿ ಅಗೌರವ ತೋರಿದೆ. ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಅನಗತ್ಯ ಟೀಕೆ ಮಾಡುತ್ತಿದೆ ಎಂದರು.
    ಸ್ವಾತಂತ್ರ್ಯದ ಬಳಿಕ 3 ಯುದ್ಧಗಳು ಸಂಭವಿಸಿವೆ. ಕಾಂಗ್ರೆಸ್ ಅಧಿಕಾರದ್ದಲ್ಲಿದ್ದಾಗ ನಡೆದ ಯುದ್ಧಗಳಲ್ಲಿ ಸೋಲು ಅನುಭವಿಸುವ ಸ್ಥಿತಿ ಎದುರಾಗಿತ್ತು. ಬಿಜೆಪಿ ಅಧಿಕಾರಲ್ಲಿದ್ದಾಗ ಕಾರ್ಗಿಲ್ ಯುದ್ಧ ನಡೆಯಿತು. ಒಂದಿಂಚು ಭೂಮಿಯನ್ನು ಬಿಟ್ಟು ಕೊಟ್ಟಿಲ್ಲ. ಸ್ವಾತಂತ್ರ್ಯ ನಂತರ ನಕಲಿ ಗಾಂಧಿ ಕುಟುಂಬಕ್ಕೆ ದೇಶವನ್ನು ಅಡವಿಟ್ಟವರು ಕಾಂಗ್ರೆಸ್ಸಿಗರು. ಅಮೃತ ಮಹೋತ್ಸವವನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಇವತ್ತು ಮೌನ ತ್ಯಜಿಸಿ ಮಾತನಾಡಬೇಕಾಯಿತು ಎಂದರು.

    ಹಾರಲಿ ರಾಷ್ಟ್ರಧ್ವಜ: ತಾಲೂಕಿನಲ್ಲಿ ಸುಮಾರು 50 ಸಾವಿರ ಮನೆ , 7 ಸಾವಿರ ಅಂಗಡಿ ಮುಂಗಟ್ಟುಗಳಿವೆ. ಎಲ್ಲ ಮನೆ, ಅಂಗಡಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಬಿಜೆಪಿ ಕಾರ್ಯಕರ್ತರು, ಜನಪ್ರತಿನಿಧಿಗಳು ಆ.9ಮತ್ತು 10 ರಂದು ತಿರಂಗಾ ಹಾರಿಸಬೇಕು. ಮನೆ ಮುಂದೆ ರಂಗೋಲಿ ಬಿಡಿಸಿ, ಸಿಹಿ ಹಂಚಿ ಎಲ್ಲರೂ ಸೇರಿ ಆಚರಿಸುವಂತೆ ಕರೆ ನೀಡಿದರು.ಯಾವೊಂದು ಮನೆಯೂ ಬಾಕಿಯಾಗದಂತೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕಾರ್ಕಳ ಇತಿಹಾಸದ ಪುಟಗಳಲ್ಲಿ ಸೇರಬೇಕು ಎಂದರು.

    ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಸ್ತಾವನೆಗೈದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹಿರಿಯರಾದ ಎಂ.ಕೆ. ವಿಜಯಕುಮಾರ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಮಡಿವಾಳ, ರೇಶ್ಮಾ ಉದಯ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ತಾಲೂಕು ಮಂಡಲ ಪ್ರ.ಕಾರ್ಯದರ್ಶಿ ಜಯರಾಮ್ ಸಾಲ್ಯಾನ್ ವೇದಿಕೆಯಲ್ಲಿದ್ದರು. ಬಿಜೆಪಿ ಪ್ರ. ಕಾರ್ಯದರ್ಶಿ ನವೀನ್ ನಾಯಕ್ ಸ್ವಾಗತಿಸಿದರು. ಜ್ಯೋತಿ ವಂದೆ ಮಾತರಂ ಹಾಡಿದರು. ಸುಹಾಸ್ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts