More

    ಹರಿಣಗಳಿಗೆ ಶಮಿ ಕಡಿವಾಣ, ಮೊದಲ ಟೆಸ್ಟ್‌ನಲ್ಲಿ ಭಾರತ ಬಿಗಿಹಿಡಿತ

    ಸೆಂಚುರಿಯನ್: ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಮಳೆಯಿಂದ ಆಟ ನಡೆಯದಿದ್ದರೆ, 3ನೇ ದಿನ ಆಟ ಆರಂಭಗೊಂಡಾಗ ವಿಕೆಟ್ ಮಳೆಯಾಯಿತು! 18 ವಿಕೆಟ್ ಪತನ ಕಂಡ ದಿನದಾಟದಲ್ಲಿ ಭಾರತ ತಂಡ ಮೊಹಮದ್ ಶಮಿ (44ಕ್ಕೆ 5) ಸಾರಥ್ಯದಲ್ಲಿ ವೇಗಿಗಳು ತೋರಿದ ಅಮೋಘ ನಿರ್ವಹಣೆಯ ಬಲದಿಂದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ 146 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗ ಉಳಿದೆರಡು ದಿನಗಳಲ್ಲಿ ಐತಿಹಾಸಿಕ ಗೆಲುವು ಒಲಿಸಿಕೊಳ್ಳುವ ಮೂಲಕ ಹರಿಣಗಳ ನಾಡಿನ ಪ್ರವಾಸದಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ. ಆದರೆ ಅಂತಿಮ ದಿನದಾಟಕ್ಕೂ ಮಳೆ ಅಡಚಣೆ ತರುವ ಭೀತಿ ಇರುವುದು ಭಾರತಕ್ಕೆ ಹಿನ್ನಡೆ ಎನಿಸಿದೆ.

    ಮಂಗಳವಾರ ಬೆಳಗ್ಗೆ 3 ವಿಕೆಟ್‌ಗೆ 272 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ದಿಢೀರ್ ಕುಸಿದು 327 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ಕೂಡ ಆರಂಭಿಕ ಆಘಾತ ಎದುರಿಸಿ ಒಂದು ಹಂತದಲ್ಲಿ ಕೇವಲ 32 ರನ್‌ಗೆ 4 ವಿಕೆಟ್ ಕಳೆದುಕೊಂಡು ಇಕ್ಕಟ್ಟಿನಲ್ಲಿತ್ತು. ಭಾರತೀಯ ವೇಗಿಗಳ ಬಿಗಿದಾಳಿಗೆ ಟೆಂಬಾ ಬವುಮಾ (52) ಪ್ರತಿರೋಧ ತೋರಿದರು. ಚಹಾ ವಿರಾಮದ ಬಳಿಕ ದಕ್ಷಿಣ ಆಫ್ರಿಕಾ 197 ರನ್‌ಗೆ ಆಲೌಟ್ ಆಯಿತು. ಇದರಿಂದ ಮೊದಲ ಇನಿಂಗ್ಸ್‌ನಲ್ಲಿ 130 ರನ್ ಮುನ್ನಡೆ ಕಂಡ ಭಾರತ, ದಿನದಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್ (4) ಔಟಾದರೆ, ಮತ್ತೋರ್ವ ಆರಂಭಿಕ ಕೆಎಲ್ ರಾಹುಲ್ (5*) ಜತೆಗೆ ನೈಟ್ ವಾಚ್‌ಮನ್ ಶಾರ್ದೂಲ್ ಠಾಕೂರ್ (4*) ಕ್ರೀಸ್‌ನಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾಕ್ಕೆ ಶಮಿ ಶಾಕ್
    ಬೆಳಗ್ಗೆ ಬ್ಯಾಟಿಂಗ್‌ನಲ್ಲಿ ದಿಢೀರ್ ಕುಸಿತ ಕಂಡರೂ ಧೃತಿಗೆಡದ ಟೀಮ್ ಇಂಡಿಯಾ, ಬೌಲಿಂಗ್‌ನಲ್ಲಿ ದಿಟ್ಟ ತಿರುಗೇಟು ನೀಡಿತು. ಬುಮ್ರಾ ಮೊದಲ ಓವರ್‌ನಲ್ಲೇ ಆಘಾತ ನೀಡಿದ್ದರೆ, ಭೋಜನ ವಿರಾಮದ ಬಳಿಕ ಶಮಿ ದಾಳಿಗೆ ಹರಿಣಗಳ ಪಡೆ ತತ್ತರಿಸಿತು. ಏಡನ್ ಮಾರ್ಕ್ರಮ್ (13) ಮತ್ತು ವನ್‌ಡೌನ್ ಬ್ಯಾಟರ್ ಕೀಗನ್ (15) ಶಮಿ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಬಳಿಕ ಮೊಹಮದ್ ಸಿರಾಜ್, ವಾನ್ ಡರ್ ಡುಸೆನ್‌ಗೆ (3) ಪೆವಿಲಿಯನ್ ದಾರಿ ತೋರಿದರು. ಆಗ ಜತೆಗೂಡಿದ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿಕಾಕ್ (34) ಕೆಲಕಾಲ ಪ್ರತಿರೋಧ ಒಡ್ಡಿದರು. ಅವರಿಬ್ಬರು 5ನೇ ವಿಕೆಟ್‌ಗೆ 72 ರನ್ ಸೇರಿಸಿದಾಗ ಭಾರತದ ಹಿಡಿತ ಸಡಿಲಗೊಳ್ಳುವ ಚಿಂತೆ ಕಾಡಿತ್ತು. ಡಿಕಾಕ್ ವಿಕೆಟ್ ಕಬಳಿಸುವ ಮೂಲಕ ಚಹಾ ವಿರಾಮಕ್ಕೆ ಮುನ್ನ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾದರು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ಬವುಮಾ, ಶಮಿ ಬಲೆಗೆ ಬಿದ್ದರೆ, ಬಾಲಂಗೋಚಿ ಕಗಿಸೊ ರಬಾಡ (25) ತಂಡದ ಮೊತ್ತವನ್ನು 200ರ ಸನಿಹಕ್ಕೇರಿಸಲು ಶ್ರಮಿಸಿದರು.

    ಎನ್‌ಗಿಡಿ ದಾಳಿಗೆ ಕುಸಿದ ಭಾರತ
    ಮೊದಲ ದಿನದಾಟದಲ್ಲಿ ದಿಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿದ್ದ ಭಾರತ ತಂಡ 3ನೇ ದಿನ ದಿಢೀರ್ ಕುಸಿತ ಕಂಡಿತು. ವೇಗಿಗಳಾದ ಲುಂಗಿ ಎನ್‌ಗಿಡಿ (71ಕ್ಕೆ 6) ಮತ್ತು ಕಗಿಸೊ ರಬಾಡ (72ಕ್ಕೆ 3) ಮಾರಕ ದಾಳಿ ಎದುರು ಭಾರತ ತಂಡ ಉಳಿದ 7 ವಿಕೆಟ್‌ಗಳಿಂದ ಮತ್ತೆ 55 ರನ್ ಪೇರಿಸಲಷ್ಟೇ ಶಕ್ತವಾಯಿತು. ಅದರಲ್ಲೂ 36 ರನ್ ಅಂತರದಲ್ಲಿ ಕೊನೇ 5 ವಿಕೆಟ್ ಉರುಳಿತು. ಶತಕವೀರ ಕೆಎಲ್ ರಾಹುಲ್ (123) ಮೊದಲ ದಿನದ ಗಳಿಕೆಗೆ ಕೇವಲ 1 ರನ್ ಸೇರಿಸಿ ದಿನದ 4ನೇ ಓವರ್‌ನಲ್ಲೇ ಔಟಾದರು. ಅನುಭವಿ ಅಜಿಂಕ್ಯ ರಹಾನೆ (48) ಕೂಡ ಅರ್ಧಶತಕದಂಚಿನಲ್ಲಿ ಔಟಾದರು. ಬಳಿಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (8) ಮತ್ತು ಆರ್. ಅಶ್ವಿನ್ (4) ಅವರಿಂದ ಉಪಯುಕ್ತ ಕೊಡುಗೆ ಬರಲಿಲ್ಲ. ಬಾಲಂಗೋಚಿಗಳ ಪೈಕಿ ಬುಮ್ರಾ (14) ತಂಡದ ಮೊತ್ತವನ್ನು 320ರ ಗಡಿ ದಾಟಿಸುವಲ್ಲಿ ಸಲರಾದರು.

    ಜಸ್‌ಪ್ರೀತ್ ಬುಮ್ರಾಗೆ ಗಾಯ
    ಭಾರತೀಯ ಬೌಲರ್‌ಗಳ ದಿಟ್ಟ ನಿರ್ವಹಣೆ ನಡುವೆ 3ನೇ ದಿನ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಗಾಯಗೊಂಡಿದ್ದು ಹಿನ್ನಡೆಯಾಯಿತು. ಮೊದಲ ಓವರ್‌ನಲ್ಲೇ ನಾಯಕ ಡೀನ್ ಎಲ್ಗರ್ (1) ವಿಕೆಟ್ ಕಬಳಿಸಿ ಭರ್ಜರಿ ಆರಂಭ ಒದಗಿಸಿದ್ದ ಬುಮ್ರಾ, ತನ್ನ 6ನೇ ಓವರ್‌ನ ಅಂತಿಮ ಎಸೆತದ ಬೌಲಿಂಗ್ ರನ್‌ಅಪ್‌ನ ಅಂತಿಮ ಹೆಜ್ಜೆಯ ವೇಳೆ ವೇಳೆ ಬಲಕಾಲು ಉಳುಕಿತು. ಇದರಿಂದ ತೀವ್ರ ನೋವು ಎದುರಿಸಿದ ಬುಮ್ರಾ ಬೌಲಿಂಗ್ ತ್ಯಜಿಸಿ ಮೈದಾನದಿಂದ ಹೊರನಡೆದರು. ಆಗ ಶ್ರೇಯಸ್ ಅಯ್ಯರ್ ಬದಲಿ ಫೀಲ್ಡರ್ ಆಗಿ ಮೈದಾನಕ್ಕಿಳಿದರು. ಬಳಿಕ ಕೊನೇ ಅವಧಿಯಲ್ಲಿ ಬುಮ್ರಾ ಬೌಲಿಂಗ್‌ಗೆ ಮರಳಿ ಇನಿಂಗ್ಸ್‌ನ ಕೊನೇ ವಿಕೆಟ್ ಪಡೆದರು.

    ಧೋನಿ ದಾಖಲೆ ಮುರಿದ ಪಂತ್
    ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ಬಲಿ ಪಡೆದ ಭಾರತೀಯ ವಿಕೆಟ್ ಕೀಪರ್ ಎನಿಸಿದ್ದಾರೆ. ಅವರು 26ನೇ ಟೆಸ್ಟ್ ಪಂದ್ಯದ 50ನೇ ಇನಿಂಗ್ಸ್‌ನಲ್ಲೇ ಈ ದಾಖಲೆ ಬರೆದಿದ್ದಾರೆ. ಎಂಎಸ್ ಧೋನಿ ಮತ್ತು ವೃದ್ಧಿಮಾನ್ ಸಾಹ 36 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆ.

    ಶಮಿ 200 ವಿಕೆಟ್ ಸಾಧನೆ
    ವೇಗಿ ಮೊಹಮದ್ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ 5ನೇ ಭಾರತೀಯ ವೇಗಿ ಮತ್ತು 11ನೇ ಬೌಲರ್ ಎನಿಸಿದರು. ಕಪಿಲ್ ದೇವ್ (434), ಇಶಾಂತ್ ಶರ್ಮ (311), ಜಹೀರ್ ಖಾನ್ (311) ಮತ್ತು ಜಾವಗಲ್ ಶ್ರೀನಾಥ್ (236) ಹಿಂದಿನ ಸಾಧಕ ವೇಗಿಗಳು. ಮೊಹಮದ್ ಶಮಿ ದಕ್ಷಿಣ ಆಫ್ರಿಕಾದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ 4ನೇ ಭಾರತೀಯ ಎನಿಸಿದರು. ಜಾವಗಲ್ ಶ್ರೀನಾಥ್ (3), ವೆಂಕಟೇಶ್ ಪ್ರಸಾದ್ (2) ಮತ್ತು ಎಸ್. ಶ್ರೀಶಾಂತ್ (2) ಹಿಂದಿನ ಸಾಧಕರು. ಶಮಿ ವೃತ್ತಿಜೀವನದಲ್ಲಿ 6ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು.

    2ನೇ ಮಗುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ, ಟ್ರೋಲ್ ಮಾಡಿದ್ರು ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts