More

    ಐವರು ದರೋಡೆಕೋರರ ಬಂಧನ

    ಬೆಳಗಾವಿ: ಸವದತ್ತಿಯಲ್ಲಿನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಐವರನ್ನು ಬಂಧಿಸಿ 40 ಸಾವಿರ ರೂ. ಮೌಲ್ಯದ ನಾಲ್ಕು ಮೊಬೈಲ್, ಕೃತ್ಯಕ್ಕೆ ಬಳಸಿರುವ 80 ಸಾವಿರ ರೂ.ಮೌಲ್ಯದ ಬೈಕ್ ಹಾಗೂ 1.25 ಲಕ್ಷ ರೂ. ಮೌಲ್ಯದ ಆಟೋ ರಿಕ್ಷಾ ಸೇರಿ ಒಟ್ಟು 8,68,165 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸವದತ್ತಿ ಪಟ್ಟಣದ ಶಾಂತಿ ನಗರದ ಮಹ್ಮದ ಇಮಾಮಸಾಬ್ ಕಲ್ಲೇದ, ಇಬ್ರಾಹಿಂ ಅಕ್ಬರ್ ಕುಡಚಿ, ರಾಯಚೂರ ಜಿಲ್ಲೆಯ ಲಿಂಗಸೂರಿನ ಮುತ್ತಣ್ಣ ಯಲ್ಲಪ್ಪ ಗುತ್ತೇದಾರ ಉರ್ ಗೌಂಡಿ, ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತೊಗ್ಗಲಡೋಣಿಯ ಲಾಲಸಾಬ್ ದಾವಲಸಾಬ್ ರಾಂಪುರ ಬಂಧಿತರು. ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಇರುವುದರಿಂದ ವೀಕ್ಷಣಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.
    2023 ಆ.24ರಂದು ಸವದತ್ತಿ ಯಲ್ಲಮ್ಮನ ಗುಡ್ಡ ಹಾಗೂ ಸವದತ್ತಿ ಮಧ್ಯೆ ಇರುವ ಶಾಂತಿ ನಗರದಲ್ಲಿ ಬೈಕ್ ಮೇಲೆ ಬರುತ್ತಿದ್ದ ಅಶೋಕ ಬಾಗೇವಾಡಿ ಎಂಬುವರನ್ನು ಅಡ್ಡಗಟ್ಟಿ ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಆತನ ಬಳಿಯಿದ್ದ 3,80,160 ಮೌಲ್ಯದ 58.260 ಗ್ರಾಂ ಬಂಗಾರದ ಚೈನ್, 2.30 ಲಕ್ಷ ರೂ. ಮೌಲ್ಯದ 35.100 ಗ್ರಾಂ ಬಂಗಾರದ ಕೈ ಖಡಗ, 1,3165 ಮೌಲ್ಯದ 2.100 ಗ್ರಾಂ ಬಂಗಾರದ ಲಾಕೆಟ್ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು.

    ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಐವರನ್ನು ಬಂಧಿಸಿದ್ದಾರೆ. ಸವದತ್ತಿ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಎಸ್.ಧರ್ಮಟ್ಟಿ ನೇತೃತ್ವದಲ್ಲಿ ಪಿಎಸ್‌ಐ ಆನಂದ ಕ್ಯಾರಕಟ್ಟಿ, ಜಗದೀಶ ಮಿರ್ಜಿ, ಎಚ್.ಎಲ್. ಭಜಂತ್ರಿ, ಎಂ.ಪಿ.ತೇರದಾಳ ಸೇರಿ ಇತರರು ಕಾರ್ಯಾಚರಣೆಯಲ್ಲಿದ್ದರು. ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

    ಕಷ್ಟದಲ್ಲಿ ಸಾಲ ಕೊಟ್ಟಿದ್ದೇ ತಪ್ಪಾಯ್ತಾ?: ಪ್ರಮುಖ ಆರೋಪಿ ಮಹಮ್ಮದ್ ಇಮಾಮಸಾಬ್ ಕಲ್ಲೆದ್ ದೂರುದಾರ ಅಶೋಕ ಬಾಗೇವಾಡಿಗೆ ಪರಿಚಯಸ್ಥ. ಮಹಮ್ಮದ್ ಕಲ್ಲೆದಗೆ ಅಶೋಕ 50 ಸಾವಿರ ರೂ.ಸಾಲ ಕೊಟ್ಟಿದ್ದ. ಇದರಿಂದ ಅಶೋಕನ ಬಳಿ ಸಾಕಷ್ಟು ಹಣ ಇದೆ ಎಂದು ದರೋಡೆ ಮಾಡುವ ಪ್ಲಾನ್ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts