More

    ಐಪಿಎಲ್ ತಂಡಗಳಿಗೆ ಫಿಟ್ನೆಸ್ ತಲೆನೋವು; ಸಿಎಸ್‌ಕೆ, ಡೆಲ್ಲಿ, ಮುಂಬೈಗೆ ಸಂಕಷ್ಟ!

    ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿರುವ ನಡುವೆ ಕೆಲ ತಂಡಗಳಿಗೆ ಪ್ರಮುಖ ಆಟಗಾರರ ಫಿಟ್ನೆಸ್ ಸಮಸ್ಯೆ ತಲೆನೋವು ತಂದಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್, 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಸ್ಟಾರ್ ಕ್ರಿಕೆಟಿಗರ ಗಾಯದ ಸಮಸ್ಯೆಯಿಂದಾಗಿ ಕಳವಳ ಎದುರಿಸುತ್ತಿವೆ. ತಂಡಗಳ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಲಭ್ಯರಾಗುವರೇ ಎಂಬ ಅನುಮಾನಗಳೂ ಇವೆ.

    ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 6.5 ಕೋಟಿ ರೂ. ಮೊತ್ತಕ್ಕೆ ರಿಟೇನ್ ಆಗಿದ್ದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋಕಿಯ ಸೊಂಟ ನೋವಿನಿಂದ ಬಳಲುತ್ತಿದ್ದು, ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ. ನೋಕಿಯ ಗಾಯದಿಂದಾಗಿ ಕಳೆದ ಭಾರತ ವಿರುದ್ಧದ ಸರಣಿ ತಪ್ಪಿಸಿಕೊಂಡಿದ್ದರು ಮತ್ತು ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೂ ದಕ್ಷಿಣ ಆಫ್ರಿಕಾ ತಂಡಕ್ಕೆ ಅಲಭ್ಯರಾಗಿದ್ದಾರೆ. ಅವರು ಡೆಲ್ಲಿ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಈಗಾಗಲೆ ತಂಡದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, 2ನೇ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ ಇದೆ.

    ಸನ್‌ಗೆ ನಾಯಕನೇ ಡೌಟ್
    ಇತರ ತಂಡಗಳಿಗೆ ಪ್ರಮುಖ ಆಟಗಾರರ ಫಿಟ್ನೆಸ್ ಕಾಡುತ್ತಿದ್ದರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಆಡುವ ಬಗ್ಗೆಯೇ ಅನುಮಾನಗಳಿವೆ. ಮೊಣಕೈ ನೋವಿನಿಂದಾಗಿ ಕೇನ್ ವಿಲಿಯಮ್ಸನ್ ಕಳೆದ ವರ್ಷದ ಭಾರತ ಪ್ರವಾಸದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದಾರೆ. ಸದ್ಯ ಸನ್‌ರೈಸರ್ಸ್‌ ತಂಡದ ಶಿಬಿರವನ್ನು ಅವರು ಕೂಡಿಕೊಂಡಿದ್ದರೂ, ಮೊದಲ ಪಂದ್ಯಕ್ಕೆ ಫಿಟ್ ಆಗುವರೇ ಎಂಬುದು ಸ್ಪಷ್ಟವಿಲ್ಲ. ಇಲ್ಲದಿದ್ದರೆ ಬದಲಿ ನಾಯಕನನ್ನೂ ನೇಮಿಸಬೇಕಾಗುತ್ತದೆ.

    ಸಿಎಸ್‌ಕೆಗೆ ಡಬಲ್ ಟ್ರಬಲ್!
    ಇತರೆಲ್ಲ ತಂಡಗಳಿಗೆ ಓರ್ವ ಆಟಗಾರನ ಫಿಟ್ನೆಸ್ ಕಾಡುತ್ತಿದ್ದರೆ, ಚೆನ್ನೈ ಸೂಪರ್‌ಕಿಂಗ್ಸ್ ಇಬ್ಬರು ಪ್ರಮುಖ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿದೆ. 6 ಕೋಟಿ ರೂ.ಗೆ ರಿಟೇನ್ ಆಗಿದ್ದ ಆರಂಭಿಕ ಋತುರಾಜ್ ಗಾಯಕ್ವಾಡ್ ಜತೆಗೆ ಕಳೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 14 ಕೋಟಿ ರೂ.ಗೆ ತಂಡಕ್ಕೆ ಮರಳಿರುವ ಆಲ್ರೌಂಡರ್ ದೀಪಕ್ ಚಹರ್ ಫಿಟ್ನೆಸ್ ಕೂಡ ತಲೆನೋವು ತಂದಿದೆ. ಕೈ ನೋವಿನಿಂದ ಬಳಲುತ್ತಿದ್ದ ಋತುರಾಜ್ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರ ಮುಗಿಸಿ ಈಗಾಗಲೆ ಸಿಎಸ್‌ಕೆ ಶಿಬಿರ ಕೂಡಿಕೊಂಡಿದ್ದರೂ, ಆರಂಭಿಕ ಕೆಲ ಪಂದ್ಯ ತಪ್ಪಿಸಿಕೊಳ್ಳುವ ಭೀತಿ ಇದೆ. ಗಂಭೀರವಾದ ಸ್ನಾಯು ಸೆಳೆತದಿಂದ ಬಳಲುತ್ತಿರುವ ದೀಪಕ್ ಚಹರ್, ಟೂರ್ನಿಯ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಗಳಿವೆ.

    ಹೊಸ ಪಾತ್ರದಲ್ಲಿ ಐಪಿಎಲ್‌ಗೆ ಮರಳುತ್ತಿದ್ದಾರೆ ಸುರೇಶ್ ರೈನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts