More

    ನಾಡದೋಣಿ ಮೀನುಗಾರಿಕೆಗೆ ಹಿಂದೇಟು

    ಉಡುಪಿ: ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಸಾಮಾಜಿಕ ಅಂತರ ಕಾಯ್ದು ಮೀನುಗಾರಿಕೆ ನಡೆಸಬಹುದು ಎಂಬ ಜಿಲ್ಲಾಧಿಕಾರಿ ಸೂಚನೆ ಇದ್ದರೂ ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ. ಮೀನು ಆಹಾರ ಪದಾರ್ಥವಾದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಮಾರಾಟಕ್ಕೂ ನಿರ್ಬಂಧ ಹೇರಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

    5 ಮಂದಿಗಿಂತ ಹೆಚ್ಚಿಲ್ಲದೆ ಸಣ್ಣ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವುದು. ಬಂದರಿನಲ್ಲಿ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಕಂತುಬಲೆ, ಬೊಳಂಜೀರ್ ಬಲೆ, ಬೀಸುಬಲೆ, ಪಟ್ಟಬಲೆ, ಗಾಳದ ದೋಣಿ, ಗಿಲ್‌ನೆಟ್ ಮೊದಲಾದ ಮೀನುಗಾರಿಕೆ ಪ್ರಕಾರಗಳಿಗೆ ಅವಕಾಶವಿದೆ. ಮೀನುಗಾರರು ಮನೆ ಸಮೀಪ ಹೊಳೆ ತೀರದಲ್ಲಿ ಮೀನು ವಿಲೇವಾರಿ ಮಾಡಬೇಕು. ಬೆಳಗ್ಗೆ 11ಗಂಟೆಯೊಳಗೆ ಮನೆ ಮನೆಗೆ ತೆರಳಿ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಯಾವ ವ್ಯವಸ್ಥೆಯೂ ಸರಿಯಾಗಿಲ್ಲ
    ಬಂದರು ಸ್ತಬ್ಧಗೊಂಡಿದ್ದರಿಂದ ಹಿಡಿದ ಮೀನನ್ನು ಯಾವ ರೀತಿ ವಿಲೇವಾರಿ ಮಾಡುವುದು ಎಂಬ ಗೊಂದಲ ಮೀನುಗಾರರದ್ದಾಗಿದೆ. ಈಗಾಗಲೆ ಎಲ್ಲ ಮಾದರಿಯ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿರುವುದರಿಂದ ಮೀನು ಇಳಿಸಲು ಜಾಗದ ವ್ಯವಸ್ಥೆ ಇಲ್ಲ. ಮಾರುಕಟ್ಟೆಗಳಿಗೆ ಸಾಗಿಸಲು ವಾಹನದ ವ್ಯವಸ್ಥೆಯೂ ಇಲ್ಲ. ನಾಡದೋಣಿಗೆ ಸೀಮೆಎಣ್ಣೆ ಸಾಗಿಸಲು ವಾಹನ ವ್ಯವಸ್ಥೆ ಇಲ್ಲದಿರುವುದು ಮೀನುಗಾರರು ಮೀನುಗಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ.

    ಮೀನು, ಮಾಂಸ ಮಾರಾಟ ನಿರ್ಬಂಧಿಸಿಲ್ಲ
    ಜಿಲ್ಲೆಯಲ್ಲಿ ಮೀನು ಹಿಡಿಯುವುದು, ಮಾರಾಟ ಮಾಡುವುದನ್ನು ನಿರ್ಬಂಧಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಪುಗುಂಪಾಗಿ ಮೀನುಗಾರಿಕೆ ಮಾಡುವುದು ಹಾಗೂ ಮಾರಾಟಕ್ಕೆ ನಿರ್ಬಂಧವಿದೆ. ಆದರೆ, ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ಮಾಡಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು, ಕೋಳಿ, ಮಾಂಸ ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದರು.
    ಜಿಲ್ಲೆಯ ರೈತರ ಬೆಳೆಗಳಿಗೆ ತೊಂದರೆಯಾಗದಂತೆ ಸಮರ್ಪಕ ರೀತಿ ಸಾಗಾಟ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆ ಮೂಲಕ ಅಗತ್ಯ ಕ್ರಮ ಕೈಗೊಂಡಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ, ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ, ಪಡಿತರ ವಿತರಣೆ ನಡೆಯುತ್ತಿದ್ದು, ಗೊಂದಲಗಳಿಗೆ ಆಸ್ಪದ ನೀಡದಂತೆ ಸಮರ್ಪಕ ರೀತಿಯಲ್ಲಿ ಪಡಿತರ ವಿತರಿಸಲಾಗುತ್ತಿದೆ. ಪಡಿತರ ದಾಸ್ತಾನು ಕೊರತೆಯಿಲ್ಲ ಎಂದರು.

    ನಾಡದೋಣಿ ಮೀನುಗಾರಿಕೆಗೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದರೂ, ವ್ಯವಸ್ಥೆಗಳು ಪೂರಕವಾಗಿಲ್ಲ. ಮೀನನ್ನು ವಿಲೇವಾರಿ ಹೇಗೆ ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ. ಬಂದರಿನಲ್ಲಿಯೂ ಬೋಟುಗಳು ಲಂಗರು ಹಾಕಿರುವುದರಿಂದ ಒತ್ತಡವಿದೆ. ಎಲ್ಲ ಮಾರುಕಟ್ಟೆಗಳು ಬಂದ್ ಆಗಿವೆ. ಮೀನು ಸಾಗಾಟಕ್ಕೆ ವಾಹನಗಳು ಇಲ್ಲ. ಮೀನು ಮಾರಾಟ ಮಾಡುವ ಮಹಿಳೆಯರ ಸಂಖ್ಯೆಯೂ ಕಡಿಮೆಯಾಗಿದೆ.
    -ಕೃಷ್ಣ ಸುವರ್ಣ
    ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

    ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ನಡೆಸಬಹುದು. ಸೀಮೆಎಣ್ಣೆ ಪೂರೈಸಲಾಗುವುದು. ಆದರೆ ಬಂದರಿನಲ್ಲಿ ಹರಾಜು ನಡೆಸಲು ಅವಕಾಶವಿಲ್ಲ. ಮೀನುಗಾರರು ತಾವು ಹಿಡಿದ ಮೀನನ್ನು ನದಿ ತೀರದಲ್ಲಿ ಅಥವಾ ತಮ್ಮ ಮನೆ ಸಮೀಪ ಖಾಲಿ ಮಾಡಿ, ಮಾರಾಟ ಮಾಡಬಹುದು.
    – ಕೆ. ಶಿವಕುಮಾರ್
    ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts