More

    ಕರಾವಳಿಯಲ್ಲಿ ತಾಜಾ ಮೀನು, ಗಾಳದ ಮೀನುಗಳಿಗೆ ಭಾರಿ ಬೇಡಿಕೆ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಧಿಸಲಾದ ಕಠಿಣ ನಿರ್ಬಂಧ, ಆಳ ಸಮುದ್ರ ಮೀನುಗಾರಿಕೆ ನಿಷೇಧ ನಡುವೆಯೂ ಕರಾವಳಿಯ ಮತ್ಸೃಪ್ರಿಯರಿಗೆ ತಾಜಾ ಮೀನುಗಳ ಖಾದ್ಯಗಳನ್ನು ಸವಿಯುವ ಭಾಗ್ಯ ದೊರೆತಿದೆ.

    ಕಡಲ ತೀರ ವಾಸಿಗಳು ಮತ್ತು ಆಸುಪಾಸಿನ ನಗರ ಮತ್ತು ಗ್ರಾಮಗಳ ಜನರ ಒಂದು ಹಂತದ ಬೇಡಿಕೆಯನ್ನು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಪೂರೈಸುತ್ತಿದ್ದಾರೆ. ಗಾಳ ಹಾಕಿ ಹಿಡಿಯುವ ಮೀನುಗಳಿಗೂ ಉತ್ತಮ ಬೇಡಿಕೆ ಉಂಟಾಗಿದೆ. ಮಂಗಳೂರು, ಪಣಂಬೂರು, ಬೈಕಂಪಾಡಿ, ಸಸಿಹಿತ್ಲು ಮುಂತಾದ ಕಡಲ ತೀರಗಳಲ್ಲಿ ತಲಾ 5- 6 ನಾಡದೋಣಿಗಳು ಮುಂಜಾನೆ 6ರಿಂದ 8 ಗಂಟೆ ತನಕ ಮೀನುಗಾರಿಕೆ ನಡೆಸುತ್ತವೆ.

    ಹೀಗೆ ಹಿಡಿದು ತಂದ ಮೀನುಗಳನ್ನು ಮೀನುಗಾರ ಮಹಿಳೆಯರು ಸ್ಥಳಕ್ಕೆ ಬಂದು ಕೊಂಡು ಹೋಗುವ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಸುರತ್ಕಲ್ ಮಾರುಕಟ್ಟೆ ಸಮೀಪ ಬೆಳಗ್ಗೆ 8.30ರಿಂದ 11.30ರ ತನಕ ಮೀನು ಮಾರಾಟ ನಡೆಯುತ್ತಿದೆ.

    ದುಬಾರಿ ದರ: ಬೇಡಿಕೆಗಿಂತ ಪೂರೈಕೆ ಅತ್ಯಂತ ಕಡಿಮೆ ಇರುವ ಕಾರಣ ಮೀನಿನ ದರ ಸಹಜ ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು, ಮೂರು ಪಟ್ಟು, ಕೆಲವೊಮ್ಮೆ ಅದಕ್ಕಿಂತಲೂ ಅಧಿಕ ಇರುತ್ತದೆ. ಬಂಗುಡೆ, ಕೊಡ್ಡೈ ಮುಂತಾದ ಮೀನುಗಳು ಕೆ.ಜಿ.ಗೆ ಸುಮಾರು 500 ರೂ.ಗೆ ಮಾರಾಟವಾಗುತ್ತದೆ. ಒಂದು ಬಂಗುಡೆ 100 ರೂ.ಗೆ ಮಾರಾಟ ಆಗುವುದೂ ಉಂಟು. ದರ ದುಬಾರಿಯಾಗಿದ್ದರೂ ಮೀನು ಮಾರಾಟಕ್ಕೆ ಬಂದ ತಾಸಿನೊಳಗೆ ಮಾರಾಟವಾಗುತ್ತಿದೆ.
    ಮೀನು ಖರೀದಿಗೆ ಮಾರುಕಟ್ಟೆಗೆ ತೆರಳಿದವರು ದರ ನೋಡಿ ಬೆಚ್ಚಿಬಿದ್ದು ಮನೆಗೆ ಮರಳುವಾಗ ಮೀನು ಬದಲು ಕೆ.ಜಿಗೆ 125 ಅಥವಾ 130 ರೂ.ಗೆ ಸಿಗುವ ಕೋಳಿ ಮಾಂಸ ತೆಗೆದುಕೊಳ್ಳುವುದು ಸಾಮಾನ್ಯ. ಎರಡು ವಾರದ ಹಿಂದೆ ಕೆ.ಜಿಗೆ ಕೇವಲ 30 ರೂ. ತನಕ ಇಳಿದಿದ್ದ ಕೋಳಿ ಮಾಂಸ ದರ ಈಗ ಸ್ಥಿರತೆ ಕಂಡಿದೆ.

     ಗಾಳದ ಮೀನಿಗೂ ಡಿಮ್ಯಾಂಡ್: ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿರುವ ಗುಂಪು ಈಗ ಚುರುಕಾಗಿದೆ. ಬೋಳಾರ ಮುಳಿಹಿತ್ಲು, ಮಳವೂರು ಡ್ಯಾಂ, ಪಾವಂಜೆ ಹೊಳೆ, ಮೂಲ್ಕಿ ಫಲ್ಗುಣಿ ನದಿ, ಬೆಂಗರೆ, ಸೋಮೇಶ್ವರ ಪ್ರದೇಶಗಳಲ್ಲಿ ಹವ್ಯಾಸಿ ಮೀನು ಬೇಟೆಗಾರರು ಕಂಡು ಬರುತ್ತಿದ್ದಾರೆ. ಗಾಳ ಹಾಕಿ ಹಿಡಿಯುವ ಏರಿ, ಕಡುವಾಯಿ, ಕಾಂಡಾಯಿ, ಕ್ಯಾವೇಜ್ ಮೀನುಗಳಿಗೆ ಒಳ್ಳೆಯ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಮೀನು ಕೊರತೆ ಕಾರಣ ಗಾಳದ ಮೀನುಗಳಿಗೆ ಉತ್ತಮ ಬೇಡಿಕೆ ಇದೆ. ಸಾಮಾನ್ಯ ದರಕ್ಕಿಂತ 2-3 ಪಟ್ಟು ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ಗಾಳದಲ್ಲಿ ಹಿಡಿದ ಮೀನಿನ ಫೋಟೋ ತೆಗೆದು ನಮ್ಮ ಲೋಕಲ್ ವಾಟ್ಸಪ್ ಗ್ರೂಪ್‌ನಲ್ಲಿ ಹಾಕಿದರೆ ಸಾಕು, ತಕ್ಷಣ ಒಳ್ಳೆಯ ಬೆಲೆಗೆ ಮೀನು ಖರೀದಿಸುವ ಗ್ರಾಹಕರು ಲಭ್ಯವಾಗುತ್ತಾರೆ ಎನ್ನುತ್ತಾರೆ ಗಾಳದ ಮೀನು ಹಿಡಿಯುವ ಹವ್ಯಾಸಿ ಮಂಗಳೂರಿನ ನಿತಿನ್ ಕೋಟ್ಯಾನ್.

    ಕಡಲ ತೀರದ ಕೆಲ ಸಾಂಪ್ರದಾಯಿಕ ನಾಡದೋಣಿಗಳು ಮುಂಜಾನೆ ಸುಮಾರು ಒಂದೆರಡು ತಾಸು ಮೀನುಗಾರಿಕೆ ನಡೆಸುತ್ತವೆ. ಹಿಡಿದ ಮೀನುಗಳನ್ನು ಸ್ಥಳೀಯವಾಗಿ ಮಹಿಳೆಯರೇ ಮಾರಾಟ ಮಾಡುತ್ತಾರೆ. ದೊರೆಯುವ ಮೀನಿನ ಪ್ರಮಾಣ ಕಡಿಮೆ ಇರುವುದರಿಂದ ಉತ್ತಮ ಬೆಲೆ ದೊರೆಯುತ್ತದೆ.
    – ಬಿ.ಕೆ.ವಾಸು, ಮಾಜಿ ಅಧ್ಯಕ್ಷರು, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ(ನವಮಂಗಳೂರು ಬಂದರು ವಲಯ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts