More

    ಹೊರಗಿನಿಂದ ಸೋಂಕು ಭೀತಿ, ಮುಂಬೈ ಮೀನು ಲಾರಿಗಳಲ್ಲಿ ಉಡುಪಿ ಚಾಲಕರು

    ಉಡುಪಿ: ಕರೊನಾ ಸೋಂಕು ನಿಯಂತ್ರಣದಲ್ಲಿ ಯಶಸ್ವಿಯಾಗಿ ಹಸಿರು ವಲಯದಲ್ಲಿರುವ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರ ಭಾಗದಿಂದ ಬರುತ್ತಿರುವ ಮೀನಿನ ಲಾರಿಗಳು ಆತಂಕ ತಂದಿಟ್ಟಿದ್ದು, ಹೊರರಾಜ್ಯದ ಮೀನು ಲಾರಿಗಳಿಗೆ ನಿಷೇಧ ಹೇರಬೇಕು ಎಂಬ ಆಗ್ರಹ ಕೇಳಿಬಂದಿದೆ.

    ಮಹಾರಾಷ್ಟ್ರದ ರತ್ನಗಿರಿ, ಗೋವಾ ಕಡಲತೀರದಲ್ಲಿ ಅವೈಜ್ಞಾನಿಕ ಲೈಟ್‌ಫಿಶಿಂಗ್ ನಡೆಯುತ್ತಿದ್ದು, ಹೇರಳ ಮೀನು ದೊರೆಯುತ್ತಿದೆ. ಸದ್ಯ ಈ ಮೀನಿಗಾಗಿ ಜಿಲ್ಲೆಯ ಮೀನಿನ ವ್ಯಾಪಾರಿಗಳು ಮುಗಿಬೀಳುತ್ತಿದ್ದಾರೆ. ಹೊರರಾಜ್ಯಗಳಿಗೆ ಕುಂದಾಪುರ, ತ್ರಾಸಿ, ಗಂಗೊಳ್ಳಿ, ಉಡುಪಿಯಿಂದ ಟ್ರಕ್‌ಗಳು ತೆರಳಿ ಮೀನು ತಂದು ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಿಗೆ ತಲುಪಿಸುತ್ತವೆ. ಇದರ ಚಾಲಕ ಮತ್ತು ಕ್ಲೀನರ್‌ಗಳು ಸ್ಥಳೀಯರಾಗಿದ್ದು, ಅವರ ಮೂಲಕ ಸೋಂಕು ಬರಬಹುದು ಎನ್ನುವುದು ಸ್ಥಳೀಯರ ಆತಂಕ.

    ಮಹಾರಾಷ್ಟ್ರದಿಂದ ಬರುವ ಮೀನು ಸಾಗಾಟ ವಾಹನಕ್ಕೆ ಗೋವಾ ರಾಜ್ಯದಲ್ಲಿ ತಡೆ ನೀಡಲಾಗಿದೆ. ಈಗ ಲಾರಿಗಳು ಕೊಲ್ಲಾಪುರ ಜಿಲ್ಲೆ ಮೂಲಕ ಹುಬ್ಬಳ್ಳಿ- ಯಲ್ಲಾಪುರ – ಅಂಕೋಲ -ಭಟ್ಕಳದಿಂದ ಶಿರೂರಿನಿಂದಾಗಿ ಉಡುಪಿ ಪ್ರವೇಶಿಸುತ್ತವೆ. ಗೋವಾ ಮೀನು ಲಾರಿಗಳು ಕಾರವಾರ ಮೂಲಕ ಜಿಲ್ಲೆಗೆ ಪ್ರವೇಶಿಸುತ್ತಿವೆ. ಮಹಾರಾಷ್ಟ್ರದ 15-20 ಟ್ರಕ್ ಸೇರಿದಂತೆ ಪ್ರತಿನಿತ್ಯ 50ರಿಂದ 60 ಟ್ರಕ್‌ಗಳು ಜಿಲ್ಲೆಗೆ ಬರುತ್ತಿವೆ.

    ಮಹಾರಾಷ್ಟ್ರದಲ್ಲಿ ಗುರುವಾರದವರೆಗೆ 9,915 ಮಂದಿಗೆ ಕರೊನಾ ಸೋಂಕು ತಗುಲಿದೆ. ಮೀನು ಸಾಗಾಟ ಮಾಡುವ ಟ್ರಕ್‌ನ ಸ್ಥಳೀಯ ಚಾಲಕ-ಕ್ಲೀನರ್‌ಗಳು ಹಗಲುಹೊತ್ತು ಐಸ್‌ಪ್ಲಾಂಟ್‌ನಲ್ಲಿದ್ದು, ರಾತ್ರಿ ವೇಳೆ ಮನೆಗೆ ಬಂದು, ಹೋಗುತ್ತಿದ್ದಾರೆ. ಈ ಬಗ್ಗೆ ಕೆಲವು ಗ್ರಾಮಗಳಲ್ಲಿ ಮಾತಿನ ಚಕಮಕಿ, ಗಲಾಟೆಯೂ ನಡೆದಿದೆ. ಲಾಕ್‌ಡೌನ್ ಇರುವುದರಿಂದ ಸ್ಥಳೀಯ ಚಾಲಕರು ಆರಂಭದಲ್ಲಿ ಹಿಂದೇಟು ಹಾಕಿದ್ದು, ಲಾರಿ ಮಾಲೀಕರು, ವ್ಯಾಪಾರಿಗಳು ಚಾಲಕರಿಗೆ ದುಪ್ಪಟ್ಟು ದಿನ ಭತ್ಯೆ, ಸಂಬಳ, ಊಟ, ತಿಂಡಿ ದರ ಹೆಚ್ಚಳ ಮಾಡಿ ನೀಡುತ್ತಿರುವುದರಿಂದ ಹಣದಾಸೆಗೆ ಚಾಲಕರು ಒಪ್ಪಿಕೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

    ನಾಡದೋಣಿ ಮೀನು ಸಾಕು: ಕರೊನಾ ತಾಂಡವವಾಡುತ್ತಿರುವ ಮಹಾರಾಷ್ಟ್ರದಂತಹ ರೆಡ್‌ಜೋನ್ ರಾಜ್ಯದೊಂದಿಗೆ ಎಲ್ಲ ರೀತಿಯ ಸಂಪರ್ಕ ಕಡಿತಗೊಳಿಸಬೇಕು. ಜಿಲ್ಲೆಯಲ್ಲಿಯೇ ನಾಡದೋಣಿ ಮೀನುಗಾರಿಕೆ ನಡೆಯುತ್ತಿದೆ. ಸ್ಥಳೀಯ ಬಳಕೆಗೆ ಈ ಮೀನು ಸಾಕು. ಹೊರರಾಜ್ಯಗಳಿಂದ ಮೀನು ತರುವ ಲಾರಿಗಳ ಸ್ಥಳೀಯ ಚಾಲಕರಿಂದ ಆತಂಕ ಹೆಚ್ಚಿದ್ದು, ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಜಿಲ್ಲೆಯೊಳಗೆ ಮುಂಬೈ ಮೀನು ಸಾಗಾಟ ವಾಹನವನ್ನು ನಿರ್ಬಂಧಿಸಬೇಕು ಎಂದು ಗುಜ್ಜಾಡಿ ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಗಾಣಿಗ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts