More

    ಕರಾವಳಿಯಲ್ಲಿ ಅಂಜಲ್ ಮೀನು ಸುಗ್ಗಿ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಸುಮಾರು ಎರಡು ವರ್ಷ ಬಳಿಕ ಮೀನುಗಾರರ ಮೊಗದಲ್ಲಿ ನಗು ಕಾಣಿಸಿಕೊಳ್ಳಲು ಆರಂಭಿಸಿದೆ. ಮತ್ಸೃಪ್ರಿಯರ ಮೊಗದಲ್ಲಿ ಕೂಡ. ಸಾಮಾನ್ಯವಾಗಿ ಐಷಾರಾಮಿ ಔತಣ ಕೂಟ ಹಾಗೂ ಒಂದಿಷ್ಟು ಅನುಕೂಲಸ್ಥರ ಮನೆಗಳ ಅಡುಗೆ ಕೋಣೆಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಅಂಜಲ್, ಮಾಂಜಿ ತವಾ ಫ್ರೈ, ಮಸಾಲ ಫ್ರೈ, ಗೀ (ತುಪ್ಪ) ಫ್ರೈ ಘಮಘಮ ಬಡವನ ಮನೆಗಳಿಂದಲೂ ಬರಲು ಆರಂಭಿಸಿದೆ!

    ಕಡಲಿಗೆ ಇಳಿದ ಬಹುತೇಕ ಯಾಂತ್ರೀಕೃತ ಪರ್ಸೀನ್ ಬೋಟು ಹಾಗೂ ಯಾಂತ್ರೀಕೃತ ಟ್ರಾಲ್ ಬೋಟ್‌ಗಳು ಟನ್ನುಗಟ್ಟಳೆ ಅಂಜಲ್ ಹೇರಿಕೊಂಡು ದಡಕ್ಕೆ ವಾಪಸಾಗುತ್ತಿರುವುದು ಇದಕ್ಕೆ ಕಾರಣ. ಒಂದು ಬೋಟು 4- 5 ಟನ್ ಮೀನು ಹಿಡಿಯುತ್ತಿದೆ.

    ಕೆಲ ವಾರಗಳ ಹಿಂದಿನ ತನಕ ಕೆಜಿಗೆ 700 ರೂ. ಇದ್ದ ಅಂಜಲ್ ಮೀನು ದರ ಏಕಾಏಕಿ 300 ರೂ. ತನಕ ಇಳಿದಿದೆ. ಕೆ.ಜಿ.ಗೆ 400 ರೂ. ಇದ್ದ ಮಾಂಜಿ ಮೀನಿನ ದರ ಕೂಡ 220 ರೂ.ವಿಗೆ ಇಳಿದಿದೆ. ಇದರಿಂದ ಒಂದು ಭಾಗದಿಂದ ಮೀನುಗಾರರ ಆದಾಯಕ್ಕೆ ಸಣ್ಣ ಹೊಡೆತ ಇದೆ. ಆದರೆ ಊರಿನ ಸಣ್ಣ ಕೇರಿಗಳಲ್ಲಿ ಅಗ್ಗದ ಬೂತಾಯಿ, ಬಂಗುಡೆ, ಕಲ್ಲೂರುನಂತಹ ಮೀನುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಕೂಡ ಈಗ ಅಂಜಲ್ ಮೀನುಗಳನ್ನು ಮಾರಾಟ ಮಾಡುತ್ತಿದ್ದಾನೆ. ಇದರಿಂದ ಈ ಮೀನುಗಳಿಗೆ ಸ್ಥಳೀಯವಾಗಿ ಕೂಡ ಮಾರುಕಟ್ಟೆ ವಿಸ್ತರಣೆಯಾಗಿದೆ.

    ಅನುಕೂಕರ ಪರಿಸ್ಥಿತಿ: ಕಡಲಲ್ಲಿ ಮೀನಿನ ಬೆಳೆ ಯಥೇಚ್ಛವಾಗಿ ದೊರೆಯುತ್ತಿರುವುದು ಹಾಗೂ ಕೆಲಕಾಲ ನಿಷೇಧಕ್ಕೆ ಒಳಗಾಗಿದ್ದ ಬುಲ್ ಟ್ರಾಲ್ ಬೋಟ್ ಹಾಗೂ ಲೈಟ್ ಫಿಶಿಂಗ್ ನಡೆಸಲು ವರ್ಷದಲ್ಲಿ ಎರಡು ತಿಂಗಳು ಅನುಮತಿ ನೀಡಿರುವುದು ಕೂಡ ಮೀನು ಸಂಗ್ರಹ ಹೆಚ್ಚಲು ಒಂದು ಪ್ರಮುಖ ಕಾರಣ. ಇತರ ಬೋಟ್‌ಗಳಿಗೆ ಹೋಲಿಸಿದರೆ ನಾಡ ದೋಣಿಗಳ ಮೀನಿನ ಬೇಟೆ ಹೆಚ್ಚು ಲಾಭಕರವಾಗಿಲ್ಲ.

    ಭರ್ಜರಿ ಬೇಟೆ: ಅಂಜಲ್, ಮಾಂಜಿ ಮಾತ್ರವಲ್ಲದೆ ರಫ್ತು ಗುಣಮಟ್ಟದ ಬೊಂಡಾಸ್, ರಿಬ್ಬನ್ ಫಿಶ್, ಬಂಗುಡೆ ಇಳುವರಿಯೂ ಸಖತ್ ಇದೆ. ಆದರೆ ಈಗ ಮೀನು ರಫ್ತು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ ರಫ್ತು ಮೌಲ್ಯ ಇರುವ ಈ ಮೀನುಗಳನ್ನು ದೊಡ್ಡ ವ್ಯಾಪಾರಿಗಳು ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹಿಸಿಡುತ್ತಿದ್ದಾರೆ. ಒಳ್ಳೆಯ ದರ ಸಿಗುವಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಸಾಧ್ಯವಾಗಬಹುದು ಎನ್ನುವುದು ಅವರ ಲೆಕ್ಕಾಚಾರ ಎಂದು ಸ್ಥಳೀಯ ಮುಖಂಡರೋರ್ವರು ಅಭಿಪ್ರಾಯ ಹಂಚಿಕೊಂಡರು.

    ಸುಮಾರು 12 ವರ್ಷಗಳ ಬಳಿಕ ಕರಾವಳಿಯಲ್ಲಿ ಅಂಜಲ್ ಮೀನಿನ ಅತ್ಯುತ್ತಮ ಇಳುವರಿ ಲಭ್ಯವಾಗಿದೆ. ಕೆಲವರಿಗೆ ಲಾಕ್‌ಡೌನ್ ಸಂದರ್ಭ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಕೂಡ ಇದರಿಂದ ಸಾಧ್ಯವಾಗಿದೆ.
    ದಿವಾಕರ ಉಳ್ಳಾಲ, ಮೀನುಗಾರ ಮುಖಂಡ, ಮಂಗಳೂರು

    ಅಧಿಕ ಬೋಟುಗಳಿಂದ ಮೀನುಗಾರಿಕೆ ಮತ್ತು ಅನುಕೂಲಕರ ವಾತಾವರಣದಿಂದ ಅಂಜಲ್‌ನಂತಹ ಮೀನುಗಳ ಬೆಲೆ ಇಳಿದಿದೆ. ಈ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಲಾಭದಲ್ಲಿದೆ ಎಂದು ಹೇಳುವುದು ಕಷ್ಟ. ಹಿಂದೆ 4 ಲಕ್ಷ ರೂ. ಮೀನು ಹಿಡಿದ ಬೋಟುಗಳಿಗೆ 50 ಸಾವಿರ ರೂ. ತನಕ ಉಳಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗದ ಡೀಸೆಲ್ ದರದಲ್ಲಿ 5 ಲಕ್ಷ ರೂ. ಮೀನು ಹಿಡಿದರೂ 25 ಸಾವಿರ ರೂ. ಉಳಿಸಲು ಸಾಧ್ಯವಾಗುತ್ತಿಲ್ಲ.
    – ಸತೀಶ್ ಕುಂದರ್, ಸಲಹಾ ಸಮಿತಿ ಸದಸ್ಯರು, ಮಲ್ಪೆ ಮೀನುಗಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts