More

    ಇಂದು ಮುಂಬೈ-ಡೆಲ್ಲಿ ನಡುವೆ ಮೊದಲ ಕ್ವಾಲಿಫೈಯರ್ ಹಣಾಹಣಿ, ಗೆದ್ದವರು ಫೈನಲ್‌ಗೆ

    ದುಬೈ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-13ರ ಮೊದಲ ಕ್ವಾಲಿಫೈಯರ್ ಹಣಾಹಣಿಯಲ್ಲಿ ಗುರುವಾರ ಎದುರಾಗಲಿವೆ. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಚುಟುಕು ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದೆ. ಲೀಗ್ ಹಂತದ ಕಡೇ ಪಂದ್ಯದಲ್ಲಿ ಪ್ರಮುಖ ಆಟಗಾರರ ಗೈರಿನಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಶರಣಾಗಿತ್ತು. ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವತ್ತ ದೃಷ್ಟಿ ಹರಿಸಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿದೆ.
    * ಆತ್ಮ ವಿಶ್ವಾಸದಲ್ಲಿ ಮುಂಬೈ
    ನಾಯಕ ರೋಹಿತ್ ಶರ್ಮ ಆಗಮನದಿಂದಾಗಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ತಂಡ 6ನೇ ಬಾರಿ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ. ಸ್ಟಾರ್ ಬ್ಯಾಟ್ಸ್‌ಮನ್ ಸನ್‌ರೈಸರ್ಸ್‌ ಎದುರು ಮಿಂಚಲು ವಿಫಲವಾಗಿದ್ದರು. ನಾಲ್ಕು ಪಂದ್ಯಗಳ ಬಳಿಕ ಕಣಕ್ಕಿಳಿದಿದ್ದ ರೋಹಿತ್ ಶರ್ಮ ಕೇವಲ 4 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಪ್ರಮುಖ ಆಟಗಾರರಾದ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್‌ಗೆ ಸನ್‌ರೈಸರ್ಸ್‌ ಎದುರು ವಿಶ್ರಾಂತಿ ನೀಡಲಾಗಿತ್ತು. ಇಶಾನ್ ಕಿಶನ್ (428), ಕ್ವಿಂಟನ್ ಡಿ ಕಾಕ್ (443) , ಸೂರ್ಯಕುಮಾರ್ ಯಾದವ್ (410) ಅಗ್ರ ಕ್ರಮಾಂಕದ ಶಕ್ತಿಯಾಗಿದ್ದಾರೆ. ಕೈರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಸಿಡಿಯುತ್ತಿದ್ದರೆ, ಕೃನಾಲ್ ಪಾಂಡ್ಯ ಇನ್ನು ಲಯಕ್ಕೆ ಬಂದಿಲ್ಲ. ಜಸ್‌ಪ್ರೀತ್ ಬುಮ್ರಾ (23 ವಿಕೆಟ್), ಟ್ರೆಂಟ್ ಬೌಲ್ಟ್ (20 ವಿಕೆಟ್), ರಾಹುಲ್ ಚಹರ್ (15ವಿಕೆಟ್) ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾ ಬಂದಿದೆ.

    * ಸೇಡಿನ ತವಕದಲ್ಲಿ ಡೆಲ್ಲಿ
    ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಮುಂಬೈಗೆ ಶರಣಾಗಿರುವ ಡೆಲ್ಲಿ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅಜಿಂಕ್ಯ ರಹಾನೆ, ಶಿಖರ್ ಧವನ್ ಲೀಗ್ ಹಂತದ ಕಡೇ ಪಂದ್ಯ ಆರ್‌ಸಿಬಿ ಎದುರು ಫಾರ್ಮ್‌ಗೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಎರಡು ಶತಕ, 3 ಅರ್ಧಶತಕ ಒಳಗೊಂಡಂತೆ ಧವನ್ ಇದುವರೆಗೆ 525 ರನ್ ಗಳಿಸಿದ್ದಾರೆ. ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಷಾ (228) ಹಾಗೂ ರಿಷಭ್ ಪಂತ್ (282) ನಿರ್ವಹಣೆ ಪಂದ್ಯದಿಂದ ಪಂದ್ಯಕ್ಕೆ ಕುಸಿಯುತ್ತಿದೆ. ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಕೂಡ ಮಿಂಚುತ್ತಿಲ್ಲ. ತಂಡಕ್ಕೆ ಮಧ್ಯಮ ಕ್ರಮಾಂಕದ್ದೇ ದೊಡ್ಡ ಚಿಂತೆಯಾಗಿದೆ. ನಾಯಕ ಶ್ರೇಯಸ್ ಅಯ್ಯರ್ (421) ಬ್ಯಾಟಿಂಗ್ ವಿಭಾಗದ ಸಾರಥ್ಯದ ವಹಿಸಬೇಕಿದೆ. ಕಗಿಸೊ ರಬಾಡ (25ವಿಕೆಟ್), ಅನ್ರಿಚ್ ನೋರ್ಜೆ (19 ವಿಕೆಟ್) ಜೋಡಿ ಮಿಂಚುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಆರ್.ಅಶ್ವಿನ್, ಅಕ್ಷರ್ ಪಟೇಲ್ ಜೋಡಿ ಕೂಡ ಉಪಯುಕ್ತ ವಿಕೆಟ್ ಕಬಳಿಸುತ್ತ ಬಂದಿದೆ.

    ಮುಂಬೈ ಇಂಡಿಯನ್ಸ್: ಲೀಗ್ ಹಂತದ ಕಡೇ ಪಂದ್ಯದಲ್ಲಿ ಆಡಿದ ತಂಡದಲ್ಲಿ ಕನಿಷ್ಠ ಮೂರು ಬದಲಾವಣೆ ನಿರೀಕ್ಷಿಸಬಹುದು. ವಿಶ್ರಾಂತಿಯಲ್ಲಿ ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸಾದರೆ, ಧವಳ್ ಕುಲಕರ್ಣಿ, ಜೇಮ್ಸ್ ಪ್ಯಾಟಿನ್ ಸನ್, ಸೌರಭ್ ತಿವಾರಿ ಹೊರಗುಳಿಯಲಿದ್ದಾರೆ. ಪ್ಯಾಟಿನ್‌ಸನ್ ಅಥವಾ ನಥಾನ್ ಕೌಲ್ಟರ್ ನಿಲ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವರು.

    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್/ನಥಾನ್ ಕೌಲ್ಟರ್ ನಿಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

    ಡೆಲ್ಲಿ ಕ್ಯಾಪಿಟಲ್ಸ್: ಆರ್‌ಸಿಬಿ ಎದುರು ಭರ್ಜರಿ ಜಯ ದಾಖಲಿಸಿದ ತಂಡವನ್ನೇ ಡೆಲ್ಲಿ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಲೀಗ್‌ನಲ್ಲಿ ಡೆಲ್ಲಿ ಸತತ 4 ಸೋಲುಗಳ ಬಳಿಕ ಗೆಲುವಿನ ದಾರಿಗೆ ಮರಳಿತ್ತು.

    ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಷಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಬ್ ಪಂತ್ (ವಿಕೀ), ಮಾರ್ಕಸ್ ಸ್ಟೋಯಿನಿಸ್, ಡೇನಿಯಲ್ ಸ್ಯಾಮ್ಸ್, ಅಕ್ಷರ್ ಪಟೇಲ್, ಆರ್.ಅಶ್ವಿನ್, ಅನ್ರಿಚ್ ನೋರ್ಜೆ, ಕಗಿಸೊ ರಬಾಡ.

    ಮುಖಾಮುಖಿ: 26, ಮುಂಬೈ ಇಂಡಿಯನ್ಸ್: 14, ಡೆಲ್ಲಿ: 12

    ಲೀಗ್ ಮುಖಾಮುಖಿ
    1. ಮುಂಬೈ ತಂಡಕ್ಕೆ 5 ವಿಕೆಟ್ ಜಯ
    2. ಮುಂಬೈ ತಂಡಕ್ಕೆ 9 ವಿಕೆಟ್ ಜಯ

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts