More

    ಪೆಟ್ರೋಲ್ ಬಂಕ್​ನಲ್ಲಿ ಒಮ್ನಿಗೆ ಬೆಂಕಿ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂಡಿ ಪೆಟ್ರೋಲ್ ಬಂಕ್​ನಲ್ಲಿ ಶನಿವಾರ ರಾತ್ರಿ ಮಾರುತಿ ಒಮ್ನಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಾಗೂ ಸ್ಥಳೀಯರ ಮುನ್ನೆಚ್ಚರಿಕೆಯಿಂದ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ.

    ಒಮ್ನಿ ಚಾಲಕ ಬಂಕ್​ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡು ವಾಹನ ಚಾಲು ಮಾಡುತ್ತಿದ್ದಂತೆ ಇಂಜಿನ್​ನಲ್ಲಿ ಬೆಂಕಿ ಹೊತ್ತಿಕೊಂಡಿತು. ಕೂಡಲೆ ಎಚ್ಚೆತ್ತುಕೊಂಡ ಚಾಲಕ ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬರೊಂದಿಗೆ ಕೆಳಗೆ ಇಳಿದನು.

    ಬಂಕ್ ಸಿಬ್ಬಂದಿ ಆಕ್ಸಿಜನ್ ಟ್ಯಾಂಕ್​ನಿಂದ ಬೆಂಕಿ ನಂದಿಸಲು ಮುಂದಾದರು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪಕ್ಕದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಠಾಣೆಯಲ್ಲಿದ್ದ ಆಕ್ಸಿಜನ್ ಟ್ಯಾಂಕ್​ಗಳನ್ನು ತಂದು ಬೆಂಕಿ ನಂದಿಸಲು ಮುಂದಾದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಜತೆ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

    ಸ್ಥಳದಲ್ಲಿ ಆತಂಕ

    ಒಮ್ನಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ಛಾಯೆ ಮೂಡಿತ್ತು. ಕೆಲವೇ ಕ್ಷಣದಲ್ಲಿ ಬೆಂಕಿಯ ಕೆನ್ನಾಲಗೆ ಅತ್ತಿತ್ತ ಚಾಚತೊಡಗಿತ್ತು. ನಂತರ ವಾಹನದಿಂದ ಢಂ ಢಂ ಎಂಬ ಸ್ಪೋಟದ ಶಬ್ದ ಕೇಳಿಬಂದಿದ್ದರಿಂದ ಸಮೀಪದಲ್ಲಿದ್ದವರು ಬೆಚ್ಚಿ ಬಿದ್ದರು.

    ಒಮ್ನಿ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕೃಷ್ಣಾ ನಾಯಕ ಎಂಬುವರ ಹೆಸರಲ್ಲಿ ನೋಂದಾವಣೆಯಾಗಿದೆ ಎಂದು ತಿಳಿದುಬಂದಿದೆ.

    ವಿದ್ಯುತ್ ನಿಲುಗಡೆ

    ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪೊಲೀಸರು ಹೆಸ್ಕಾಂ ಸಿಬ್ಬಂದಿಗೆ ಸೂಚಿಸಿ ಬಂಕ್ ಸುತ್ತಮುತ್ತ ಕೆಲಕಾಲ ವಿದ್ಯುತ್ ನಿಲುಗಡೆ ಮಾಡಿಸಿದರು. ಬೆಂಕಿಯನ್ನು ಸಂಪೂರ್ಣ ನಂದಿಸಿದ ನಂತರ ಸುಮಾರು ಅರ್ಧ ಗಂಟೆ ಬಳಿಕ ವಿದ್ಯುತ್ ಸಂಪರ್ಕ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts