More

    ಕನಿಶೆಟ್ಟಿಹಳ್ಳಿ ಕಸದ ಗುಡ್ಡಕ್ಕೆ ಬೆಂಕಿ ; ತ್ಯಾಜ್ಯ ಗುಡ್ಡ ಕರಗಿಸಲು ಸಿಬ್ಬಂದಿಯೇ ಬೆಂಕಿಯಿಟ್ಟಿರುವ ಶಂಕೆ

    ಚಿಂತಾಮಣಿ : ತಾಲೂಕಿನ ಕನಿಶೆಟ್ಟಿಹಳ್ಳಿ ಬಳಿಯ ನಗರಸಭೆಗೆ ಕಸ ವೀಲೇವಾರಿ (ಡಂಪಿಂಗ್ ಯಾರ್ಡ) ಘಟಕದಲ್ಲಿನ ಕಸದ ರಾಶಿಗೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರಾದರೂ ಇನ್ನೂ ಹೊಗೆಯಾಡುತ್ತಲೇ ಇದೆ.

    ಡಂಪಿಂಗ್ ಯಾಡ್‌ನಲ್ಲಿ ಕಳೆದೆರಡು ದಿನಗಳಿಂದ ಬೆಂಕಿ ಉರಿಯುತ್ತಿದ್ದು, ಘಟಕದ ಸುತ್ತಲೂ ಬೆಳೆಸಿರುವ ಗಿಡಗಳು ಆಹುತಿಯಾಗಿರುವ ಜತೆಗೆ ಘಟಕದ ಕಾಂಪೌಂಡ ಗೋಡೆ ಸಹ ಉರುಳಿಬಿದ್ದಿದೆ. ಕಸದ ಗುಡ್ಡ ಕರಗಿಸಲು ಸಿಬ್ಬಂದಿಯೇ ಬೆಂಕಿಯಿಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಪ್ರತಿದಿನ ನಗರದಲ್ಲಿ ಸಂಗ್ರಹವಾಗುವ 25 ರಿಂದ 30 ಟನ್ ಕಸವನ್ನು ನಗರದ ಹೊರವಲಯದ ಕನಿಶೆಟ್ಟಿಹಳ್ಳಿನ 10 ಎಕರೆ ಪ್ರದೇಶದಲ್ಲಿರುವ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಕಸದ ಗುಡ್ಡಗಳೇ ನಿರ್ಮಾಣವಾಗಿವೆ.

    ಹಸಿಕಸ, ಒಣಕಸ ಹಾಗೂ ನಿರುಪಯುಕ್ತ ತ್ಯಾಜ್ಯ ಎಂಬ ಮೂರು ವಿಧದಲ್ಲಿ ಕಸ ವಿಂಗಡಣೆ ಮಾಡಬೇಕು, ಆದರೆ ಈ ಪ್ರಕ್ರಿಯೆಗೆ ತಿಲಾಂಜಲಿ ಹಾಡಿದ್ದರಿಂದ ಕಸದ ಪರ್ವತಗಳೇ ನಿರ್ಮಾಣವಾಗಿದ್ದು, ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಸುರಿಯಲೂ ಘಟಕದಲ್ಲಿ ಜಾಗ ಇಲ್ಲದಾಗಿದ್ದು, ಕಸ ಕರಗಿಸಲು ಸಿಬ್ಬಂದಿಯೇ ಬೆಂಕಿ ಹಚ್ಚಿರುವ ಅಥವಾ ಬಿಸಿಲಿನ ಝಳದ ಜತೆಗೆ ತ್ಯಾಜ್ಯದ ತಾಪಕ್ಕೆ ಬೆಂಕಿ ಬಿದ್ದಿರಬಹುದು ಎನ್ನಲಾಗಿದೆ.

    ಬೆಂಕಿಯಿಟ್ಟರಾ ಸಿಬ್ಬಂದಿ!? : ಈ ಹಿಂದೆ ಘಟಕದ ಸಿಬ್ಬಂದಿ ಪ್ಲಾಸ್ಟಿಕ್ ಪೇಪರ್, ಕವರ್, ನ್ಯೂಸ್ ಪೇಪರ್ ಮತ್ತಿತರ ವಸ್ತುಗಳನ್ನು ಬೆಂಕಿಗೆ ಹಾಕುತ್ತಿದ್ದದ್ದು ಕಂಡು ಬಂದಿತ್ತು, ವಿಚಾರಿಸಿದಾಗ ಅಧಿಕಾರಿಗಳೇ ಹೇಳಿದ್ದಾರೆ ಎಂದು ಮರುಉತ್ತಿರಿಸಿದ್ದರು, ಈ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ನಗರಸಭೆ ಅಧಿಕಾರಿಗಳ ಅಣತಿಯಂತಿ ಸಿಬ್ಬಂದಿಗೆ ಬೆಂಕಿಯಿಟ್ಟಿರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಸ್ಥಳೀಯರು.

    ಗಿಡ ಮರಗಳು ನಾಶ : ಕಸ ವಿಲೇವಾರಿ ಘಟಕದ ಸುತ್ತಲೂ ಉತ್ತಮ ಪರಿಸರ ನಿರ್ಮಾಣ ಮಾಡಲು ನೂರಾರು ಗಿಡ-ಮರಗಳನ್ನು ಬೆಳೆಸಲಾಗಿತ್ತು, ಆದರೆ ವೈಜ್ಞಾನಿಕ ವಿಲೇವಾರಿ ಕಣೆಸಿದ್ದರಿಂದ ಜಾಗ ಸಾಲದೆ ಗಿಡಗಳ ಮೇಲೂ ಕಸ ಸುರಿದಿದ್ದರಿಂದ ಹಲವು ಗಿಡಗಳು ನಾಶವಾಗಿದ್ದರೆ, ಈಗ ಬೆಂಕಿಗೆ ಆಹುತಿಯಾಗಿವೆ.

    ತುಕ್ಕು ಹಿಡಿಯುತ್ತಿವೆ ಯಂತ್ರಗಳು : ಕಸ ವಿಂಗಣೆ ಮಾಡಿ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಮೂಲಕ ಆದಾಯದ ಮೂಲ ಕಂಡುಕೊಳ್ಳಬೇಕೆಂಬ ನಿಯಮ ಜಾರಿಯಲ್ಲಿದೆ, ಆದರೆ ಇಲ್ಲಿ ಅದೆಲ್ಲವನ್ನೂ ಗಾಳಿಗೆ ತೂರಲಾಗಿದೆ. ಕಸ ವಿಂಗಡೆಗೆಂದು ಲಕ್ಷಾಂತರ ರೂ. ಕೊಟ್ಟು ಖರೀದಿಸಿರುವ ಯಂತ್ರಗಳು ತುಕ್ಕು ಹಿಡಿಯುತ್ತಿದ್ದು, ನಷ್ಟದ ಹೊರೆ ನಗರಸಭೆ ಬೆನ್ನುಹತ್ತಿದೆ.

    ಒಣಕಸ, ಹಸಿಕಸ, ಹೊಟೆಲ್‌ಗಳ ತ್ಯಾಜ್ಯ, ಪ್ಲಾಸ್ಟಿಕ್ ಕವರ್ ಬಾಟಲ್, ಪೇಪರ್ ಎಲ್ಲವನ್ನು ತಂದು ಸುರಿಯುವುದಾದರೆ ಕಸ ವಿಂಗಡಣೆಗೆಂದು ಯಂತ್ರಗಳನ್ನೇತಕ್ಕೆ ಖರೀದಿಸಬೇಕಿತ್ತು? ಯಂತ್ರಗಳಿಗೆ ಬಂಡವಾಳ ಹಾಕಿ ನಗರಸಭೆಗೆ ನಷ್ಟ ಉಂಟುಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
    ನಾಗಾರ್ಜುನರೆಡ್ಡಿ ಪರಿಸರಪ್ರೇಮಿ

    ಡಂಪಿಂಗ್ ಯಾರ್ಡನಲ್ಲಿ ಭಾರೀ ಪ್ರಮಾಣದ ತಂತಿಗಳು ಹಾದು ಹೋಗಿದ್ದು ಅದರಿಂದ ಬೆಂಕಿ ಕಿಡಿ ಬಿದ್ದು ಕಸಕ್ಕೆ ಬೆಂಕಿ ಬಿದ್ದಿರಬಹುದೆಂದು. ಬೆಂಕಿಯನ್ನು ನಂದಿಸುವ ಕೆಸಲ ನಡೆದಿದ್ದು, ತಹಬಂದಿಗೆ ತಂದಿದ್ದೇವೆ.
    ಉಮಾಶಂಕರ್ ನಗರಸಭೆ ಕಾರ್ಯನಿರ್ವಾಹಕ ಪರಿಸರ ಅಭಿಯಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts