More

    ಬೆಂಕಿ ನಂದಿಸುವ ವಾಹನಗಳ ಕೊರತೆ, ನಾಲ್ಕು ಇದ್ದರೂ ಒಂದೇ ಬಳಕೆ

    ಹೂವಿನಹಡಗಲಿ: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದಾರೆ. ಆದರೆ, ಎಲ್ಲಾದರೂ ಅವಘಡ ನಡೆದರೆ ಬೇಕಾದ ರಕ್ಷಣಾ ಸಾಮಗ್ರಿ ಹಾಗೂ ಬೆಂಕಿ ನಂದಿಸುವ ವಾಹನಗಳು ಇಲ್ಲ. ಎಲ್ಲದಕ್ಕೂ ಕೇವಲ ಒಂದೇ ವಾಹನ ಬಳಸಲಾಗುತ್ತಿದೆ.

    ತಾಲೂಕಿನ 26 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಭವಿಸುವ ಅಗ್ನಿ ಅವಘಡ ಹಾಗೂ ತುಂಗಭದ್ರಾ ನದಿ ಪ್ರದೇಶದಲ್ಲಿನ ನೆರೆ ಹಾವಳಿ, ಇತರ ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇವೆ ಅಗತ್ಯವಾಗಿ ಬೇಕು. ತಾಲೂಕಿಗೆ ಹೊಂದಿಕೊಂಡಂತೆ ಸುಮಾರು 80 ಕಿಮೀ ಕ್ಕಿಂತ ಹೆಚ್ಚು ಉದ್ದ ತುಂಗಭದ್ರಾ ನದಿ ಹರಿಯುತ್ತದೆ.

    ಕೆಲ ಸಂದರ್ಭದಲ್ಲಿ ಪ್ರವಾಹ ಉಂಟಾದಾಗ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಜೀವ ಪಣಕ್ಕಿಟ್ಟು ಕಾರ್ಯಾಚರಣೆಗೆ ಇಳಿಯುತ್ತಾರೆ. ಆದರೆ, ಅಗ್ನಿ ಅವಘಡ, ಜಾತ್ರೆ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಠಾಣೆಯ ಬಳಕೆಗೆ ಕೇವಲ ಒಂದು ವಾಹನ ಲಭ್ಯವಿದ್ದು, ರಕ್ಷಣಾ ಪರಿಕರಗಳ ಕೊರತೆಯೂ ಕಾಡುತ್ತಿದೆ.

    ಠಾಣೆಯಲ್ಲಿ ಒಟ್ಟು 27 ಹುದ್ದೆಗಳ ಪೈಕಿ 24 ಭರ್ತಿಯಾಗಿದ್ದು, ಎರಡು ಪ್ರಮುಖ ಅಗ್ನಿಶಾಮಕ, ಒಂದು ಚಾಲಕ ಹುದ್ದೆ ಖಾಲಿ ಇವೆ. ಹೆಸರಿಗೆ ನಾಲ್ಕು ತುರ್ತು ಸೇವಾ ಅಗ್ನಿಶಾಮಕ ವಾಹನಗಳಿವೆ. ಆದರೆ ಅವುಗಳಲ್ಲಿ ಕೇವಲ ಒಂದು ವಾಹನ ಬಳಕೆಯಾಗುತ್ತಿದೆ. ಉಳಿದ ಮೂರರಲ್ಲಿ ಒಂದು ಕೋರ್ಟ್ ಕೇಸ್ ಕಾರಣಕ್ಕೆ ಕಾರ್ಯಾಚರಣೆ ನಿಲ್ಲಿಸಿದೆ.

    ಇನ್ನೆರಡು ವಾಹನಗಳು 15 ವರ್ಷ ಬಳಸಿದ್ದು, ಮತ್ತೆ ಚಲಾಯಿಸಲು ಎಫ್‌ಸಿ (ಫಿಟ್ನೆಸ್ ಸರ್ಟಿಫಿಕೆಟ್) ಸಿಗದೇ ಮೂಲೆ ಸೇರಿದ್ದು, ಎಲ್ಲವೂ ಧೂಳು ತಿನ್ನುತ್ತಿವೆ. ಬಳ್ಳಾರಿಯಿಂದ ಕಳಿಸಿದ ಹಳೆಯ ಅಗ್ನಿಶಾಮಕ ವಾಹನವೇ ಆಧಾರವಾಗಿದ್ದು, ಇದರ ಅವಧಿಯೂ ಇದೇ ತಿಂಗಳು ಅಂತ್ಯಗೊಳ್ಳಲಿದೆ. 40 ವರ್ಷ ಕ್ಕಿಂತ ಹಳೆಯದಾದ ವಾಹನದಲ್ಲಿಯೇ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.

    ಬೋಟ್‌ಗಳ ವ್ಯವಸ್ಥೆ ಇಲ್ಲ

    ತಾಲೂಕಿನ ನದಿ ಪಾತ್ರದ ಪ್ರದೇಶದಲ್ಲಿ ಮಳೆಗಾಲದ ಸಂದರ್ಭ ಪ್ರವಾಹವಾದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಕಾರ್ಯಕ್ಕೆ ಇಳಿಯುತ್ತಾರೆ. ಆದರೆ, ಠಾಣೆಯಲ್ಲಿ ಬೋಟ್‌ಗಳ ವ್ಯವಸ್ಥೆ ಇಲ್ಲ. ನದಿ ಭಾಗದಲ್ಲಿನ ಮೀನುಗಾರರ ತೆಪ್ಪಗಳ ಸಹಾಯ ಪಡೆಯಬೇಕಾದ ಸ್ಥಿತಿ ಇದೆ.

    ಒಂದೇ ದಿನ ಒಂದೇ ಸಮಯದಲ್ಲಿ ಎರಡು ಕಡೆ ಅಗ್ನಿ ಅನಾಹುತ, ಬೇರೆ ಅವಘಡಗಳು ನಡೆದರೆ ರಕ್ಷಣೆ ಕಷ್ಟಸಾಧ್ಯ. ಒಂದು ಸ್ಥಳಕ್ಕೆ ಅಗ್ನಿಶಾಮಕ ವಾಹನ ಹೋಗಿ ಬರಲು ಕನಿಷ್ಠ 2 ಗಂಟೆ ಬೇಕಾಗುತ್ತದೆ. ಅಷ್ಟರೊಳಗೆ ಇನ್ನೊಂದೆಡೆ ಹೆಚ್ಚಿನ ಅನಾಹುತ ನಡೆದು ಹೋಗಿರುತ್ತದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಗ್ನಿಶಾಮಕ ಠಾಣೆಗೆ ಅಗತ್ಯ ಸುರಕ್ಷಾ ಪರಿಕರಗಳು ಹಾಗೂ ಹೆಚ್ಚಿನ ವಾಹನಗಳನ್ನು ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಸಂಪರ್ಕ ರಸ್ತೆ ಸಂಪೂರ್ಣ ಹಾಳು

    ಎಲ್ಲಿಯಾದರೂ ಅಪಘಾತ ಅಥವಾ ಅಗ್ನಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನ ತಕ್ಷಣ ತೆರಳಬೇಕು. ಹೂವಿನಹಡಗಲಿ ಪಟ್ಟಣದಿಂದ ಠಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು, ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಅಗ್ನಿ ಶಾಮಕ ಠಾಣೆಯ ಜತೆಗೆ ಅರಣ್ಯಾಧಿಕಾರಿ ಕಚೇರಿ, ಬಿಇಒ, ಜಿಪಂ ಉಪವಿಭಾಗ ಕಚೇರಿಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

    ಮಳೆಗಾಲ ಸಂದರ್ಭದಲ್ಲಂತೂ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿರುತ್ತದೆ. ಹೀಗಾಗಿ ಅವಘಡ ಸಂಭವಿಸಿದ ಸ್ಥಳಕ್ಕೆ ತೆರಳಲು ವಿಳಂಬವಾಗುತ್ತಿದೆ. ಹೀಗಾಗಿ ಠಾಣಾಧಿಕಾರಿಗಳೇ ರೈತರೊಬ್ಬರ ಜಮೀನಿನಲ್ಲಿ ರಸ್ತೆ ಮಾಡಿಕೊಂಡಿದ್ದಾರೆ. ರಸ್ತೆ ದುರಸ್ತಿಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

    ಹೂವಿನಹಡಗಲಿ ತಾಲೂಕಿನಲ್ಲಿ ಅಗ್ನಿ ಅವಘಡ, ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಬಂದು ರಕ್ಷಣೆ ಮಾಡುವ ಅಗ್ನಿಶಾಮಕ ಸಿಬ್ಬಂದಿಗೆ ರಕ್ಷಣೆ ಕಾರ್ಯಾಚರಣೆ ನಡೆಸಲು ಅಗತ್ಯ ಪರಿಕರಗಳು ಇಲ್ಲವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಠಾಣೆಗೆ ವಾಹನ ಹಾಗೂ ಅಗತ್ಯ ರಕ್ಷಣಾ ಸಾಮಗ್ರಿ ಪೂರೈಕೆ ಮಾಡಬೇಕು.
    | ಮಂಜುನಾಥ ದೇಸಾಯಿ, ಸ್ಥಳೀಯ ನಿವಾಸಿ, ಹೂವಿನಹಡಗಲಿ

    ಈಗಾಗಲೇ ಪೊಲೀಸ್ ಇಲಾಖೆಯಿಂದ ಬೋಟ್‌ಗಳನ್ನು ಪೂರೈಸಲಾಗುತ್ತಿದೆ. ಹೂವಿನಹಡಗಲಿ ಸೇರಿದಂತೆ ಇತರ ತಾಲೂಕುಗಳ ಠಾಣೆಗಳಿಗೂ ಸರಬರಾಜು ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಆದೇಶದಂತೆ 15 ವರ್ಷ ಪೂರ್ಣಗೊಳಿಸಿದ ವಾಹನಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಒಂದು ವಾಹನದ ಮೇಲೆ ಅಪಘಾತ ಪ್ರಕರಣವಿರುವ ಕಾರಣ ಬಳಕೆ ಮಾಡುತ್ತಿಲ್ಲ.
    | ಕೆ.ತಿಮ್ಮಾರೆಡ್ಡಿ., ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಬಳ್ಳಾರಿ

    ಪುರಸಭೆ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು.
    | ಕೆ.ಶರಣಮ್ಮ, ತಹಸೀಲ್ದಾರ್, ಹೂವಿನಹಡಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts