More

    ಶೌಚಾಲಯ ಬಳಕೆಗೆ ವಿದ್ಯಾರ್ಥಿಗಳನ್ನು ಬಳಸಿದರೆ ಎಫ್ಐಆರ್: ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ

    ಬೆಂಗಳೂರು ಇತ್ತೀಚೆಗೆ ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಶೌಚ ಗೃಹ ಶುಚಿಗೊಳಿಸಲು ಬಳಸಿಕೊಂಡಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ, ಶೌಚ ಗೃಹ ಸ್ವಚ್ಛತೆಗೆ ಶಾಲಾ ಮಕ್ಕಳನ್ನು ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

    ಒಂದು ವೇಳೆ ನಿಯಮ ಮೀರಿ ಇಲಾಖೆ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಶಾಲಾ ಶೌಚ ಗೃಹ ಸ್ವಚ್ಛತೆಗೆ ಬಳಸಿಕೊಂಡಲ್ಲಿ, ಅಂತಹವರ ವಿರುದ್ಧ ಇಲಾಖೆ ವತಿಯಿಂದ ಶಿಸ್ತುಕ್ರಮ ಹಾಗೂ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ ಶಾಲೆಗಳ ಶೌಚ ಗೃಹ ಸ್ವಚ್ಛತೆಗೆ ಮಾರ್ಗದರ್ಶಿ ಪ್ರಕಟಿಸಿ ನಿರ್ದೇಶನ ನೀಡಿದ್ದಾರೆ.

    ಈಗಾಗಲೇ ಇಲಾಖೆ ಎಲ್ಲ ಸರ್ಕಾರಿ ಶಾಲೆಗಳಿಗೂ ಪ್ರಸಕ್ತ ಸಾಲಿಗೆ ಶಾಲಾ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಆದ್ಯತೆ ಮೇರೆಗೆ ಶೌಚ ಗೃಹದ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಂಡು, ಆಯಾ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದೆ.

    ಶೌಚ ಗೃಹದ ಸ್ವಚ್ಛತೆ ಕುರಿತು ಎಸ್‌ಡಿಎಂಸಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸಬೇಕು. ಆದರೆ, ಅಧಿಕಾರಿಗಳು ಮತ್ತು ಶಿಕ್ಷಕರು ತಮ್ಮ ಹೊಣೆಗಾರಿಕೆ ಮರೆತು ವಿದ್ಯಾರ್ಥಿಗಳನ್ನು ಸ್ವಚ್ಛತೆ ಚಟುವಟಿಕೆಗಳಲ್ಲಿ ತೊಡಗಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

    ಅಧಿಕಾರಿಗಳ ಭೇಟಿಗೆ ಸೂಚನೆ:

    ಅಧಿಕಾರಿಗಳು ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಬಳಕೆಗೆ ಯೋಗ್ಯವಾದ ಶೌಚ ಗೃಹಗಳು ಲಭ್ಯವಿರುವುದನ್ನು ಪರಿಶೀಲಿಸಬೇಕು. ಜತೆಗೆ, ಅನುದಾನಿತ ಹಾಗೂ ಶಾಸಗಿ ಶಾಲೆಗಳಲ್ಲಿಯೂ ಇಂತಹ ಪ್ರಕರಣಗಳು ಜರುಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ, ಪ್ರಕರಣಗಳು ಮರುಕಳಿಸಿದರೆ ಸಂಬಂಧಪಟ್ಟ ಬಿಇಒ ಹಾಗೂ ಡಿಡಿಪಿಐಗಳ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts