More

     ಮುಚ್ಚಿದ ಸಹಕಾರಿ ಸಂಘಕ್ಕಾಗಿ ಹಣ ವಸೂಲಿ: ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಭಾರಿ ಅವ್ಯವಹಾರ ಬೆಳಕಿಗೆ

    -ಶ್ರವಣ್‌ಕುಮಾರ್ ನಾಳ ಪುತ್ತೂರು

    ಬಂದ್ ಆಗಿರುವ ಸಹಕಾರಿ ಸಂಘದ ಹೆಸರಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜು ಈಗಲೂ ವಿದ್ಯಾರ್ಥಿಗಳಿಂದ ಸಹಕಾರಿ ಹಣ ವಸೂಲಿ ಮಾಡುತ್ತಿದೆ!

    ವಿದ್ಯಾರ್ಥಿಗಳ ಕಾರ್ಯಚಟುವಟಿಕೆ ಹಾಗೂ ಶೈಕ್ಷಣಿಕ ವಿಷಯಗಳಿಗೆ ಉತ್ತೇಜನ ನೀಡಲು ಸ್ವಾತಂತ್ರೃಪೂರ್ವದಲ್ಲಿ ಮದ್ರಾಸ್ ಪ್ರಾಂತ್ಯದ ಸಹಕಾರಿ ಕಾಯ್ದೆಯನ್ವಯ ವಿದ್ಯಾರ್ಥಿ ಸಹಕಾರಿ ಸಂಘ ರೂಪುಗೊಂಡಿತ್ತು. ಅಂದಿನ ಕಾಲಘಟ್ಟದಲ್ಲಿ ಮಂಗಳೂರು ಸರ್ಕಾರಿ ಕಾಲೇಜು ದೇಶದ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದುದರಿಂದ ಮದ್ರಾಸ್ ಸರ್ಕಾರ ಈ ಕಾಲೇಜಿನಲ್ಲಿ ವಿದ್ಯಾರ್ಥಿ ಸಹಕಾರಿ ಸಂಘ ಸ್ಥಾಪಿಸಲು ಅವಕಾಶ ನೀಡಿತ್ತು. ಆದರೆ, ಕಾರಣಾಂತರಗಳಿಂದ ಸಹಕಾರಿ ಸಂಘಕ್ಕೆ ಬೀಗ ಹಾಕಲಾಯಿದರೂ, ವಿವಿ ಕಾಲೇಜು ಈಗಲೂ ಹಣ ವಸೂಲಿ ಮಾಡುತ್ತಿದೆ.

    1931ರಲ್ಲಿ ಸ್ಥಾಪನೆಗೊಂಡಿದ್ದ ಸಂಘ: 1937ರ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ದೇಶದ ಮೊದಲ ಹಾಗೂ ಏಕೈಕ ವಿದ್ಯಾರ್ಥಿ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಪಡೆದಿದ್ದ ವಿದ್ಯಾರ್ಥಿ ಸಹಕಾರಿ ಸಂಘ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ(ಹಳೇ ಸರ್ಕಾರಿ ಕಾಲೇಜು) ಕಾರ್ಯನಿರ್ವಹಿಸುತ್ತಿತ್ತು. 1937ರಿಂದ ಮದ್ರಾಸ್ ಸಹಕಾರಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ವಿದ್ಯಾರ್ಥಿ ಸಹಕಾರಿ ಸಂಘ, ಕರ್ನಾಟಕ ಪ್ರತ್ಯೇಕ ರಾಜ್ಯವಾದ ಬಳಿಕ 1959ರಲ್ಲಿ ಕರ್ನಾಟಕ ಸರ್ಕಾರ ಸಹಕಾರಿ ಕಾಯ್ದೆಯನ್ವಯ ನಡೆಯುತ್ತಿತ್ತು.

    ಈ ಮಧ್ಯೆ ಪ್ರಾಧ್ಯಾಪಕರೊಳಗಿನ ಆಂತರಿಕ ಕಲಹದಿಂದ 2007ರಲ್ಲಿ ಏಕಾಏಕಿ ಮುಚ್ಚಿತು. ಆದರೂ ಸಹಕಾರಿ ಸಂಘದ ಹೆಸರಲ್ಲೇ ವಿದ್ಯಾರ್ಥಿಗಳಿಂದ ವಿವಿ ಕಾಲೇಜು ಈಗಲೂ ಹಣ ವಸೂಲಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

    5 ವರ್ಷಗಳಿಗೊಮ್ಮೆ ನಿರ್ದೇಶಕರ ಆಯ್ಕೆ: ಸ್ವಾತಂತ್ರೃಪೂರ್ವದಲ್ಲಿ ಮದ್ರಾಸ್ ಪ್ರಾಂತ್ಯದ ಸಹಕಾರಿ ಕಾಯ್ದೆ ಪ್ರಕಾರ, ವಿದ್ಯಾರ್ಥಿಗಳಿಂದ 10 ಪೈಸೆ ಸಹಕಾರಿ ಹಣ ವಸೂಲಿ ಮಾಡುವ ಅವಕಾಶವಿತ್ತು. ಮಂಗಳೂರು ಸರ್ಕಾರಿ ಕಾಲೇಜು ಪ್ರಾಚಾರ್ಯರೇ ಈ ಸಹಕಾರಿ ಸಂಘದ ಅಧ್ಯಕ್ಷರು. ಪ್ರತಿ ವರ್ಷ ಚುನಾವಣೆ ನಡೆಸಿ ನಿರ್ದೇಶಕರ ಆಯ್ಕೆ ಮಾಡಲಾಗುತ್ತಿತ್ತು.

    1959ರ ನಂತರ ಕರ್ನಾಟಕ ಸರ್ಕಾರ ಸಹಕಾರಿ ಕಾಯ್ದೆಯನ್ವಯ 5 ವರ್ಷಗಳಿಗೊಮ್ಮೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸರ್ಕಾರಿ ಕಾಲೇಜು ಪ್ರಾಚಾರ್ಯರೇ ಈ ಸಹಕಾರಿ ಸಂಘದ ಅಧ್ಯಕ್ಷ, 8 ವಿದ್ಯಾರ್ಥಿ ಪ್ರತಿನಿಧಿಗಳು, ಇಬ್ಬರು ಪ್ರಾಧ್ಯಾಪಕರು ಹಾಗೂ ಓರ್ವ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು, ಜಿಲ್ಲಾ ಸಹಕಾರಿ ಉಪನಿಬಂಧಕರು ಚುನಾವಣಾಧಿಕಾರಿಯಾಗಿರುತ್ತಿದ್ದರು.

    ಆಡಿಟ್ ಕೂಡ ಆಗಿಲ್ಲ! : 2005ರಲ್ಲಿ ವಿವಿ ವಿದ್ಯಾರ್ಥಿ ಸಹಕಾರಿ ಸಂಘದ ಚುನಾವಣೆ ನಡೆದು, 2 ವರ್ಷದಲ್ಲೇ ಸಹಕಾರಿ ಸಂಘ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿತ್ತು. ಆದರೆ 2021ರ ಶೈಕ್ಷಣಿಕ ಅವಧಿವರೆಗೂ ಕಾಲೇಜು ತನ್ನ ವಿದ್ಯಾರ್ಥಿಗಳಿಂದ ಪ್ರತಿ ವರ್ಷ 20 ರೂ. ಸಹಕಾರಿ ಶುಲ್ಕ ವಸೂಲಿ ಮಾಡಿದೆ. 2005ರಿಂದ 2021ರವರೆಗಿನ ಆರ್ಥಿಕ ವ್ಯವಹಾರ, ಲೆಕ್ಕಪರಿಶೋಧನೆ ಸಲ್ಲಿಕೆ ಆಗಿಲ್ಲ. 1937ರಿಂದ ಈವರೆಗಿನ ಹಣ ಎಲ್ಲಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿಲ್ಲ.

    ಮುಚ್ಚಿದ ಸಹಕಾರಿ ಸಂಘದ ಹೆಸರಲ್ಲೇ ವಿವಿ ಕಾಲೇಜು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವುದು ಬಹಿರಂಗಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ 1937ರಿಂದ ಈವರೆಗಿನ ಹಣ ಎಲ್ಲಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಲು ವಿವಿ ಸಿಂಡಿಕೇಟ್ ತನಿಖಾ ಸಮಿತಿ ರಚಿಸಿದೆ. ತನಿಖೆ ಪ್ರಗತಿಯಲ್ಲಿದೆ.
    ರಮೇಶ್ ಕೌಡೂರು
    -ಸಿಂಡಿಕೇಟ್ ಸದಸ್ಯ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts