More

    ಕೊನೆಗೂ ಡಿಸಿ ಕಚೇರಿ ಸ್ಥಳಾಂತರ

    ಅಂತೂ ಇಂತೂ ಸಿದ್ಧಾರ್ಥನಗರದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಬರೋಬ್ಬರಿ 5 ವರ್ಷಗಳ ಬಳಿಕ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ.
    ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುತ್ತಿದ್ದಂತೆ, 2018ರಲ್ಲಿ ಅವರೇ ಉದ್ಘಾಟಿಸಿದ್ದ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದ್ದು, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಗುರುವಾರ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದರು.


    ಸಿದ್ದಾರ್ಥನಗರದ ಜರ್ಮನ್ ಪ್ರೆಸ್ ಆವರಣದಲ್ಲಿ ನಿರ್ಮಿಸಿರುವ ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ಉದ್ಘಾಟನೆಗೊಂಡು 5 ವರ್ಷ ತುಂಬಿದೆ. ಆದರೂ ಇಲ್ಲಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿರಲಿಲ್ಲ. ಇದೀಗ ಹೊಸ ಸಂಕೀರ್ಣಕ್ಕೆ ಅನೇಕ ವರ್ಷಗಳ ಬಳಿಕ ‘ಬಳಕೆ ಭಾಗ್ಯ’ ದೊರೆತಂತಾಗಿದೆ. ಈ ಮೂಲಕ ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಹಲವು ದಶಕಗಳಿಂದ ಜಿಲ್ಲಾಧಿಕಾರಿ ಕಚೇರಿಯಾಗಿದ್ದ ಹಠಾರ ಕಚೇರಿ, ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತುಸಂಗ್ರಹಾಲಯವಾಗಿ ಮಾರ್ಪಡಲಿದೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ 2016ರಲ್ಲಿ ತಿ.ನರಸೀಪುರ ಮುಖ್ಯ ರಸ್ತೆಯಲ್ಲಿರುವ ಸಿದ್ದಾರ್ಥನಗರ ಬಡಾವಣೆಯ 15 ಎಕರೆ ವಿಶಾಲ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. 108 ಕೋಟಿ ರೂ. ವೆಚ್ಚದಲ್ಲಿ 2018ರ ಹೊತ್ತಿಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಎರಡು ಅಂತಸ್ತಿನ ಈ ಭವ್ಯ ಕಟ್ಟಡ 5 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿತ್ತು. ಮೊದಲ ಅಂತಸ್ತಿಗೆ 56 ಕೋಟಿ ರೂ. ಹಾಗೂ 2ನೇ ಅಂತಸ್ತು ನಿರ್ಮಾಣಕ್ಕೆ 52 ಕೋಟಿ ರೂ. ವೆಚ್ಚವಾಗಿತ್ತು. 2018ರ ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಅವರು ನೂತನ ಕಟ್ಟಡ ಉದ್ಘಾಟಿಸಿದ್ದರು. ಆದರೆ ಕಚೇರಿ ಈ ಕಟ್ಟಡಕ್ಕೆ ಸ್ಥಳಾಂತರವಾಗಿರಲಿಲ್ಲ. ಅಷ್ಟರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೋಗಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ತದನಂತರ ಬಿಜೆಪಿ ಸರ್ಕಾರ ಬಂದರೂ ಜಿಲ್ಲಾಧಿಕಾರಿ ಕಚೇರಿ

    ಸ್ಥಳಾಂತರವಾಗಿರಲಿಲ್ಲ

    ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಮೈಸೂರಿನವರೇ ಆದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಎರಡು ವಾರ ಕಳೆಯುತ್ತಿದ್ದಂತೆ ಹೊಸ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ. ಈ ಮೂಲಕ ಉದ್ಘಾಟನೆಗೊಂಡು ಅನುಪಯುಕ್ತವಾಗಿ ಉಳಿದಿದ್ದ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕೆಲಸ ಆರಂಭ ಮಾಡಿದ್ದಾರೆ.
    ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿ ಡಾ.ಕೆ.ವಿ. ರಾಜೇಂದ್ರ ಅವರು, ಜಿಲ್ಲಾಧಿಕಾರಿ ಕಚೇರಿಯ ಹೊಸ ಕಟ್ಟಡವನ್ನು 2018ರಲ್ಲಿ ನಿರ್ಮಿಸಲಾಗಿತ್ತು. ಬಹಳ ದಿನಗಳ ಹಿಂದೆಯೇ ಇಲ್ಲಿಗೆ ಕಚೇರಿ ಸ್ಥಳಾಂತರವಾಗಬೇಕಿತ್ತು. ವಿಧಾನಸಭೆ ಚುನಾವಣೆ ಕಾರಣದಿಂದ ಸಾಧ್ಯವಾಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಅವರ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಅಧಿಕೃತವಾಗಿ ಕಚೇರಿ ಸ್ಥಳಾಂತರಿಸಲಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ, ಭೂಮಾಪನ ಮತ್ತು ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು, ಹಿಂದುಳಿದ ವರ್ಗಗಳ ಇಲಾಖೆ ಕಚೇರಿಗಳನ್ನು ಹಿಂದೆಯೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಗುರುವಾರ ಜಿಲ್ಲಾಧಿಕಾರಿಯ ಬಹುತೇಕ ಕಚೇರಿಗಳು ಸ್ಥಳಾಂತರವಾಗಿವೆ ಎಂದು ವಿವರಿಸಿದರು.

    ಸಿದ್ದರಾಮಯ್ಯ ಆಗಮಕ್ಕೂ ಮುನ್ನವೇ ಸ್ಥಳಾಂತರ


    ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳು ಹೊಸ ಕಟ್ಟಡದಲ್ಲೇ ಕೆಲಸ ನಿರ್ವಹಿಸಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು. ಒಂದೇ ಕಟ್ಟಡದಲ್ಲಿ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಿದರೆ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಉದ್ದೇಶ. ಆದರೂ ಐದು ವರ್ಷಗಳ ಕಾಲ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರವಾಗಿರಲಿಲ್ಲ. ಇದೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಜೂನ್ 10ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ಅದಕ್ಕೆ ಮುನ್ನ ಅಧಿಕಾರಿಗಳು ಕಚೇರಿ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗಿದೆ.

    ಹೊಸ ಕಟ್ಟಡದಲ್ಲಿ ಸಾರ್ವಜನಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ಬಸ್ ಸೌಲಭ್ಯಕ್ಕಾಗಿ ಕೆಎಸ್‌ಆರ್‌ಟಿಸಿ ಜತೆ ಚರ್ಚಿಸಿ, ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ತಿಳಿಸಲಾಗುತ್ತದೆ. ಸಾರ್ವಜನಿಕರಿಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗುವುದು.
    ಡಾ.ಡಿ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ

    ವಸ್ತುಸಂಗ್ರಹಾಲಯವಾಗಿ ಬಳಕೆ
    ಹಲವು ದಶಕಗಳಿಂದ ಜಿಲ್ಲಾಧಿಕಾರಿ ಕಚೇರಿಯಾಗಿದ್ದ ಪಾರಂಪರಿಕ ಕಟ್ಟಡ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತು ಸಂಗ್ರಹಾಲಯವಾಗಿ ಮಾರ್ಪಡಲಿದೆ. 128 ವರ್ಷಗಳಷ್ಟು ಹಳೆಯದಾಗಿರುವ ಈ ಕಟ್ಟಡವನ್ನು ಕೃಷ್ಣರಾಜ ಬುಲೇವಾರ್ಡ್ ಅವರು 1895ರಲ್ಲಿ ನಿರ್ಮಾಣ ಮಾಡಿದ್ದರು. ಅಂದಿನ ಮೈಸೂರು ಅರಸರಾಗಿದ್ದ 10ನೇ ಚಾಮರಾಜ ಒಡೆಯರ್ ಅವರು ಈ ಕಟ್ಟಡವನ್ನು ಪ್ರಜಾಪ್ರತಿನಿಧಿಗಳ ಸಭೆ ನಡೆಸಲು ಬಳಸುತ್ತಿದ್ದರು. ನಂತರ ಈ ಕಟ್ಟಡವನ್ನು ಮೈಸೂರು ಪ್ರಾಂತ್ಯದ ಅಂದಿನ ಅರಸರ ಮುಖ್ಯ ಆಯುಕ್ತರ ಕಚೇರಿಯಾಗಿ ಬಳಕೆ ಮಾಡಿಕೊಳ್ಳಲಾಯಿತು. ಬಳಿಕ ಸ್ವತಂತ್ರ ಭಾರತದಲ್ಲಿ ವಿಭಾಗಾಧಿಕಾರಿ ಕಚೇರಿ ಈ ಕಟ್ಟಡದಲ್ಲಿತ್ತು. ಬಳಿಕ ಜಿಲ್ಲಾಧಿಕಾರಿ ಕಚೇರಿಯಾಗಿ ಮಾರ್ಪಟ್ಟಿತು. ಪಾರಂಪರಿಕ ಕಟ್ಟಡವಾಗಿರುವ ಜಿಲ್ಲಾಧಿಕಾರಿ ಕಚೇರಿಯ ಹಳೆಯ ಕಟ್ಟಡವನ್ನು ಸದ್ಯಕ್ಕೆ ವಸ್ತುಸಂಗ್ರಹಾಲಯ ಮಾಡಿ, ಕಂದಾಯ ಇಲಾಖೆಯ ಹಳೇ ದಾಖಲೆಗಳು, ಇಲಾಖೆ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts