More

    ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸಿ

    ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟ ವತಿಯಿಂದ ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಯಿತು.

    ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ತಾಲೂಕಿನ ನಲ್ಲೂರು ಅಮಾನಿ ಕೆರೆಯ ಬದಿಯಲ್ಲಿರುವ ಬನ್ನಿತಾಳಪುರ ಮಹದೇಶ್ವರ ದೇವಾಲಯದಿಂದ ಬೈಕ್ ರ‌್ಯಾಲಿ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ರೈತ ಸಂಘದ ನೂರಾರು ಕಾರ್ಯಕರ್ತರು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

    ತಾಲೂಕು ನೈಸರ್ಗಿಕ ಸಂಪತ್ತುಗಳಿಂದ ಕೂಡಿದೆ. ಜತೆಗೆ ಹುಲಿ ಸಂರಕ್ಷಿತ ಯೋಜನೆ ಇದ್ದರೂ ಇಲ್ಲಿನ ನೈರ್ಸಗಿಕ ಸಂಪತ್ತನ್ನು ಕೆಲವೇ ವ್ಯಕ್ತಿಗಳು ಲೂಟಿ ಹೊಡೆಯುತ್ತಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ಭಾರಿ ಬೆಲೆ ತರಬೇಕಾಗುತ್ತದೆ. ಗಣಿಗಾರಿಕೆಯಿಂದ ಹಾಗೂ ಭೀಕರ ಬರದಿಂದ ರೈತರ ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲಾಡಳಿತ ತಾಲೂಕಿನಲ್ಲಿ ನಡೆಯುವ ಎಲ್ಲ ಅಕ್ರಮ ಗಣಿಗಾರಿಕೆಯನ್ನು ಕೂಡಲೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

    ಟಿಪ್ಪರ್‌ಗಳು ಒಂದು ಕಡೆಯಿಂದ ಒಂದು ಕಡೆಗೆ ಸಾಗಿಸುತ್ತಿರುವಾಗ ಎಂ ಸ್ಯಾಂಡ್ ಹಾಗೂ ಇಟ್ಟಿಗೆಯಿಂದ ರಸ್ತೆಯಲ್ಲಿ ಧೂಳು ಬರುತ್ತಿದ್ದು, ಇದನ್ನೂ ತಡೆಯಬೇಕು. ಅರಣ್ಯ ಪ್ರದೇಶದೊಳಗೆ ಇರುವ ರೆಸಾರ್ಟ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ಅಕ್ರಮವಾಗಿ ಹೊರ ರಾಜ್ಯಕ್ಕೆ ಇಟ್ಟಿಗೆ, ಎಂ ಸ್ಯಾಂಡ್ ಹೋಗುವುದನ್ನು ನಿಲ್ಲಸಬೇಕು. ಮೂಲೆಹೊಳೆ ನೀರು ನಮ್ಮಲ್ಲೇ ಬಳಕೆ ಆಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ನೂರಾರು ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ನೀಡಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯ ಎಲ್ಲ ಕೆರೆಗಳಿಗೂ ಅದರಲ್ಲಿಯೂ ತಾಲೂಕಿನ ನಲ್ಲೂರು ಅಮಾನಿ ಜಲಾಶಯ ಮತ್ತು ಮಲ್ಲಯ್ಯನಪುರ ಕೆರೆಗೆ ನೀರು ತುಂಬಿಸಬೇಕು. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗೋ ಶಾಲೆ ತೆರೆಯಬೇಕು. ನರೇಗಾ ಯೋಜನೆಯನ್ನು ವೈಯಕ್ತಿಕ ಕಾಮಗಾರಿಗೂ ವಿಸ್ತರಿಸಬೇಕು. ಗ್ರಾಮೀಣ ಪ್ರದೇಶಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಒದಗಿಸಬೇಕು. ತಾಲೂಕಿನ ಆಯಾ ಪಂಚಾಯಿತಿಗಳಲ್ಲಿ ಜಾನವಾರುಗಳಿಗೆ ಮೇವು, ನೀರು, ಒದಗಿಸುವುದರ ಜತೆಗೆ ರೈತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕೊಡಿಸ ಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ಮಂಜುನಾಥ್ ಅವರಿಗೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts