More

    ಕೆರೆ ತುಂಬಿಸಿ ಕುಡಿಯುವ ನೀರು ಪೂರೈಸಿ

    ಹಿರೇಕೆರೂರ: ಜಿಲ್ಲೆಯಲ್ಲಿ ನದಿಗಳ ಮೂಲದಿಂದ ನೀರು ಹರಿಸಿ ಕೆರೆ ತುಂಬಿಸಿ ಜಿಲ್ಲೆಯ ಜನರು ಹಾಗೂ ರೈತರಿಗೆ ನೀರು ಒದಗಿಸಿದರೆ ಅದುವೇ ಅವರಿಗೆ ಬಹುದೊಡ್ಡ ವರದಾನವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಮಾಹಿತಿ ನೀಡಿದ ಜಿಪಂ ಎಡಬ್ಲ್ಯುಇ ಶ್ರೀನಿವಾಸ, ರಟ್ಟಿಹಳ್ಳಿ ತಾಲೂಕಿನ ಬೈರನಪಾದದ ಬಳಿ ಈ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಪೈಪ್​ಲೈನ್ ಅಳವಡಿಸಲಾಗಿತ್ತು. ಖಾಸಗಿ ಕಂಪನಿಯವರು ಆ ಸ್ಥಳವನ್ನು ಲೀಸ್ ಪಡೆದು ಶುಗರ್ ಫ್ಯಾಕ್ಟರಿ ಪ್ರಾರಂಭಿಸುವ ಭರದಲ್ಲಿ ಪೈಪ್​ಲೈನ್ ಹಾಳು ಮಾಡಿದ್ದಾರೆ. ಇದರಿಂದ ಶೇ. 50ರಷ್ಟು ನೀರು ಪೋಲಾಗುತ್ತಿದೆ. ಹೀಗಾಗಿ, ನೀರು ಪೂರೈಸಲು ಸಮಸ್ಯೆಯಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

    ಆಗ ಜಿಪಂ ಸಿಇಒ ಅಕ್ಷಯ ಶ್ರೀಧರ್ ಮಾತನಾಡಿ, ಈ ಕುರಿತು ಶುಗರ್ ಫ್ಯಾಕ್ಟರಿ ಮಾಲೀಕರಿಗೆ ತಿಳಿಸಲಾಗಿದ್ದು, ತಿಂಗಳೊಳಗೆ ಸರಿಪಡಿಸುವುದಾಗಿ ತಿಳಿಸಿದ್ದಾರೆ ಎಂದರು. ಆಗ ಗರಂ ಆದ ಸಚಿವರು, ಕೂಡಲೇ ಅವರಿಗೆ ನೋಟಿಸ್ ಕಳುಹಿಸಿ, ಪೈಪ್​ಲೈನ್ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

    ಸರ್ವಜ್ಞ ಏತ ನೀರಾವರಿ ಯೋಜನೆಯಡಿ ಕುಡಿಯುವ ನೀರು ಒದಗಿಸಲು ತಾಲೂಕಿನ ಹಂಸಭಾವಿ ಬಳಿ ಜಾಕ್​ವೆಲ್ ಮತ್ತು ರಸ್ತೆ ನಿರ್ವಿುಸಲು ಅಲ್ಲಿನ ಕೆಲ ರೈತರು ಅಡ್ಡಿಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೆಚ್ಚುವರಿ ಎಸ್ಪಿ ಗೋಪಾಲ ಅವರಿಗೆ ಸೂಚಿಸಿದರು.

    ನೀರಾವರಿ ಇಲಾಖೆ ಅಧಿಕಾರಿ ಮಾತನಾಡಿ, ಸರ್ವಜ್ಞ ಏತ ನೀರಾವರಿ ಯೋಜನೆ 350 ಕೋಟಿ ರೂ. ಗಳಾಗಿದ್ದು, ಈಗಾಗಲೇ 100 ಕೋಟಿ ರೂ. ಬಿಲ್ ಆಗಿದೆ. ಡಿಸೆಂಬರ್​ವರೆಗೆ ಕಾಮಗಾರಿ ಮುಗಿಸಲು ಅವಧಿ ತೆಗೆದುಕೊಳ್ಳಲಾಗಿದೆ ಎಂದರು. ಗರಂ ಆದ ಸಚಿವರು, ಸ್ಥಳೀಯ ಶಾಸಕರ ಸಮ್ಮತಿ ಹಾಗೂ ಗಮನಕ್ಕೆ ತಾರದೇ ನೀವೇ ಅವಧಿ ವಿಸ್ತರಿಸಿಕೊಂಡಿದ್ದರೆ, ನಿರ್ದಾಕ್ಷಿಣ್ಯವಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರನ್ನು ತರಾಟೆ ತೆಗೆದುಕೊಂಡ ಪಾಟೀಲ, ಕೂಡಲೇ ಬಾಕಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದರು.

    ಎಲ್ಲ ಗ್ರಾಪಂ ಪಿಡಿಒಗಳು ಕನಿಷ್ಠ ಜೂನ್​ವರೆಗೆ ಮೊಬೈಲ್​ಫೋನ್ ಚಾಲನೆಯಲ್ಲಿರುವಂತೆ ತಾಪಂ ಇಒ ನೋಡಿಕೊಳ್ಳಬೇಕು. ಇಲ್ಲದೆ ಹೋದರೆ ಮೊಬೈಲ್​ಫೋನ್ ಸಂಪರ್ಕಕ್ಕೆ ಸಿಗದ ಪಿಡಿಒ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಶಾಸಕ ಯು.ಬಿ. ಬಣಕಾರ ಮಾತನಾಡಿ, ಸಚಿವ ಪಾಟೀಲ ಅವರ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಯಾವುದೇ ಗ್ರಾಮ ಮತ್ತು ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜನರ ಜತೆಗೆ ಸರ್ಕಾರ ಇರಲಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

    ಜಾನುವಾರು, ಟ್ರ್ಯಾಕ್ಟರ್ ಟ್ರ್ಯಾಲಿ, ರೈತರ ಪಂಪ್​ಸೆಟ್​ಗಳ ಪೈಪ್​ಗಳು, ಬೋರ್ಡ್, ವಿದ್ಯುತ್ ತಂತಿ ಸೇರಿ ಅನೇಕ ಕಳವು ಪ್ರಕರಣಗಳು ನಡೆಯುತ್ತಿವೆ. ಎಷ್ಟು ತನಿಖೆ ನಡೆಸಿದ್ದೀರಿ ಎಂದು ಸ್ಥಳದಲ್ಲಿದ್ದ ಹೆಚ್ಚುವರಿ ಎಸ್ಪಿ ಗೋಪಾಲ ಅವರನ್ನು ಶಾಸಕ ಬಣಕಾರ ಹಾಗೂ ಸಚಿವ ಪಾಟೀಲ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಈಗಾಗಲೇ 9 ತಂಡಗಳನ್ನು ನೇಮಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದರು.

    ಎಪಿಎಂಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಅಕ್ಷರದಾಸೋಹ, ಕೆಎಸ್​ಆರ್​ಟಿಸಿ ಸೇರಿ ವಿವಿಧ ಇಲಾಖೆಗಳ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

    ಜಿಲ್ಲಾಧಿಕಾರಿ ರಘುನಂದನಮೂರ್ತಿ, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ., ಬಿಇಒ ಎನ್. ಶ್ರೀಧರ್, ಹಿತೇಂದ್ರ ಗೌಡಪ್ಪಳವರ, ಎಸ್.ಎಂ. ಟಿಪ್ಪು, ಮಾರುತೆಪ್ಪ ಕೆ.ಎಚ್., ನೂರಅಹ್ಮದ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts