More

    ಚನ್ನಮ್ಮ ವೃತ್ತದಲ್ಲಿ ಹೋರಾಟ

    ಹುಬ್ಬಳ್ಳಿ: ಭಾರತ ಬಂದ್ ಕರೆಗೆ ಧಾರವಾಡ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಸ್ಪಂದನ ವ್ಯಕ್ತವಾಗದೇ, ಪ್ರತಿಭಟನೆಗಳಿಗೆ ಸೀಮಿತವಾಯಿತು. ಮಂಗಳವಾರದ ಜನಜೀವನದಲ್ಲಿ ಕೆಲವು ಗಂಟೆ ಮಾತ್ರ ವ್ಯತ್ಯಯ ಉಂಟಾಗಿತ್ತು.

    ಹುಬ್ಬಳ್ಳಿಯಲ್ಲಿ ಪ್ರಮುಖ ಚನ್ನಮ್ಮ ವೃತ್ತದ ಸುತ್ತಮುತ್ತಲಿನ ಪ್ರದೇಶದಲ್ಲಷ್ಟೇ ಹಸಿರು ಶಾಲು ತೊಟ್ಟವರ ದಟ್ಟಣೆ, ತರಹೇವಾರಿ ಪ್ರತಿಭಟನೆ, ಘೊಷಣೆ, ಕೆಲವು ಅಂಗಡಿಗಳು ಮುಚ್ಚಿದ್ದು ಗೋಚರಿಸಿತು. ಪ್ರಮುಖ ಮಾರುಕಟ್ಟೆಗಳು, ಜಿಲ್ಲೆಯ ಉಳಿದ ಕಡೆಗೆ ಚಟುವಟಿಕೆಗಳು ಎಂದಿನಂತೆಯೇ ಇದ್ದವು.

    ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ್ದ ಜೆಡಿಎಸ್, ಕಾಂಗ್ರೆಸ್, ಎಎಪಿ ಮತ್ತಿತರ ಪಕ್ಷದವರು, ಇತರರು ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಕಳಸಾ-ಬಂಡೂರಿ ಯೋಜನೆ ಹೋರಾಟ ಸಮಿತಿಯವರು ಅರೆಬೆತ್ತಲೆ ಪ್ರತಿಭಟನೆ, ಉರುಳು ಸೇವೆ ನಡೆಸಿದರು. ಮಾನವ ಸರಪಳಿ ರಚಿಸಿ ಘೊಷಣೆ ಮೊಳಗಿಸಿದರು. ಕೆಲವರು ಎತ್ತಿನ ಗಾಡಿ ತಂದು ನಿಲ್ಲಿಸಿ ವಾಹನ ಸಂಚಾರ ತಡೆದರು.

    ಬೆಳಗ್ಗೆ 7 ಗಂಟೆಗೂ ಮೊದಲು ಸಾರಿಗೆ ಬಸ್​ಗಳ ಸಂಚಾರ ನಡೆದಿತ್ತು. ನಂತರ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು, ಸಾರಿಗೆ ಮತ್ತು ಬಿಆರ್​ಟಿಎಸ್ ಬಸ್​ಗಳನ್ನು ಡಿಪೋದಿಂದ ಹೊರಗೆ ಬಿಡಲಿಲ್ಲ.

    ಆಟೋ ಚಾಲಕ-ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಬೆಂಬಲ ನೀಡಿದ್ದರು. ಆಯಾ ಪಕ್ಷ ಮತ್ತು ಸಂಘದವರು ತಮ್ಮ ಪಾಡಿಗೆ ತಾವು ಎಂಬಂತೆ ಮತಪ್ರದರ್ಶನ ನಡೆಸಿದವೇ ಹೊರತು ಒಟ್ಟಿಗೆ ಬಲ ತೋರಿಸುವ ಪ್ರಯತ್ನ ಮಾಡಲಿಲ್ಲ. ಸರ್ಕಾರಿ

    ಕಚೇರಿ, ಬ್ಯಾಂಕ್, ಇತರ ಸಂಘ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

    ಕಾಂಗ್ರೆಸ್​ನ ಸದಾನಂದ ಡಂಗನವರ, ಬಾಬಾಜಾನ ಮುಧೋಳ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಅಲ್ತಾಫ ಹಳ್ಳೂರ, ಅನಿಲ ಪಾಟೀಲ, ಬಂಗಾರೇಶ ಹಿರೇಮಠ, ದೀಪಾ ಗೌರಿ, ಶರಣಪ್ಪ ಕೊಟಗಿ, ಶಾರುಖ್ ಮುಲ್ಲಾ; ಕಳಸಾ-ಬಂಡೂರಿ ಹೋರಾಟ ಸಮಿತಿಯ ಬಾಬಾಜಾನ ಮುಧೋಳ, ಸಿದ್ದು ತೇಜಿ, ಇತರರು; ಜೆಡಿಎಸ್, ಲೋಕತಾಂತ್ರಿಕ ಜನತಾದಳ; ಜಯಕರ್ನಾಟಕ, ಬಿಎಸ್​ಪಿ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೈ ನಾಯಕಿಯರು ಹಸಿರು ಸೇತುವೆ ನಿರ್ವಿುಸಿ ಚನ್ನಮ್ಮ ವೃತ್ತ ಸುತ್ತಿದರು.

    ಕಿಸಾನ್ ಹೋರಾಟದಲ್ಲಿ ಜವಾನ್: ರಜೆ ಮೇಲೆ ಊರಿಗೆ ಬಂದಿರುವ ಯೋಧ ಕುಂದಗೋಳ ತಾಲೂಕು ಬರದ್ವಾಡ ಗ್ರಾಮದ ರಮೇಶ ಮಾಡಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ಚನ್ನಮ್ಮ ವೃತ್ತಕ್ಕೆ ಬಂದಿದ್ದರು. ಅಸ್ಸಾಂನ ಆರ್.ಆರ್. ವಿಂಗ್​ನಲ್ಲಿ ಹವಾಲ್ದಾರ್ ಆಗಿರುವ ರಮೇಶ, ಸೇನಾ ಸಮವಸ್ತ್ರದಲ್ಲೇ ಬಂದಿದ್ದರು. ತಕ್ಷಣ ಗುರುತಿಸಿದ ಪೊಲೀಸರು, ಯೋಧನನ್ನು ತಡೆದರು. ಸೇನಾ ಸೇವೆಯಲ್ಲಿದ್ದು ಹೀಗೆ ಪ್ರತಿಭಟಿಸುವುದು ತರವಲ್ಲ ಎಂದು ತಿಳಿಸಿದ ಪೊಲೀಸರು, ಸೈನಿಕನನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ, ಮನೆಗೆ ಮರಳುವಂತೆ ತಿಳಿಸಿದರು.

    ದುಪ್ಪಟ್ಟು ವಸೂಲು: ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಆಟೋದವರು ಪ್ರಯಾಣಿಕರಿಂದ ಸಿಕ್ಕಾಪಟ್ಟೆ ಹಣ ವಸೂಲು ಮಾಡಿದರು. ಸ್ಥಳೀಯ ಬಡಾವಣೆಗಳಿಗೆ ತೆರಳಲು ಒಬ್ಬರಿಗೆ 100 ರೂ. ದರ ನಿಗದಿಪಡಿಸಿದ್ದರು.

    ಧಾರವಾಡದಲ್ಲಿ ರ‍್ಯಾಲಿ

    ಅ.ಭಾ. ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಧಾರವಾಡದ ಜ್ಯುಬಿಲಿ ವೃತ್ತದಿಂದ ರ‍್ಯಾಲಿ ಹೊರಟು ಮಾರುಕಟ್ಟೆ, ಬಸ್ ನಿಲ್ದಾಣ ಸೇರಿ ಇತರ ಕಡೆಗಳಲ್ಲಿ ಸಂಚರಿಸಲಾಯಿತು. ಪ್ರತಿಭಟನಾಕಾರರು ಬಸ್​ಗಳನ್ನು ತಡೆದರು. ಅಲ್ಲಲ್ಲಿ ಅಂಗಡಿಗಳು ತೆರೆದಿದ್ದವು. ಜಯ ಕರ್ನಾಟಕ ಸಂಘಟನೆಯವರು ಜ್ಯುಬಿಲಿ ವೃತ್ತಕ್ಕೆ ಚಕ್ಕಡಿ ಮೂಲಕ ಆಗಮಿಸಿ ಬಂದ್​ಗೆ ಬೆಂಬಲ ನೀಡಿದರು. ರೈತ ಕೃಷಿ ಕಾರ್ವಿುಕ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಎಐಯುಟಿಯುಸಿ ಸೇರಿ ವಿವಿಧ ಸಂಘಟನೆಗಳು ಭಾಗವಹಿಸಿದ್ದವು. ಜುಬಿಲಿ ವೃತ್ತದಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ನಾಲಿಗೆ ಹರಿಬಿಟ್ಟರು. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಷಾ ಅವರು, ತೆರಿಗೆ ವಂಚನೆ ಮಾಡಿದ ಅಂಬಾನಿ ಸಾಕಿದ ನಾಯಿಗಳು ಎಂದು ಟೀಕಿಸಿದರು. ಪ್ರಮುಖರಾದ ಎಸ್.ಆರ್. ಹಿರೇಮಠ, ನಾಗಪ್ಪ ಉಂಡಿ, ಲಕ್ಷ್ಮಣ ಜಡಗಣ್ಣವರ, ಡಾ. ವೆಂಕನಗೌಡ ಪಾಟೀಲ, ಭವಾನಿಶಂಕರ, ಶರಣು ಗೋನವಾರ, ಸಲೀಂ ಸಂಗನಮುಲ್ಲಾ, ಗುರುರಾಜ ಹುಣಸಿಮರದ, ಸುಧೀರ ಮುಧೋಳ, ವಸಂತ ಅರ್ಕಾಚಾರ, ಆನಂದ ಸಿಂಗನಾಥ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts