More

    ಸ್ವಾತಂತ್ರ್ಯ ಹಣತೆ ಪ್ರತಿಯೊಬ್ಬರ ಹೃದಯದಲ್ಲಿ ಪ್ರಜ್ವಲನ

    ಚಿಕ್ಕಮಗಳೂರು: ಕರೊನಾ ಸಂಕಷ್ಟದಿಂದ ಸಾಮೂಹಿಕವಾಗಿ ಸ್ವಾತಂತ್ರ್ಯ ದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಎಲ್ಲ ಭಾರತೀಯರೂ ತಮ್ಮ ಹೃದಯದಲ್ಲಿ ಸ್ವಾತಂತ್ರ್ಯ ಹಣತೆ ಹಚ್ಚಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೊತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಯಜ್ಞದಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ತ್ಯಾಗ ಜೀವಿಗಳ ಹರಕೆಗಳಿವೆ. ಈಗಲೂ ನಮ್ಮ ಹೆಮ್ಮೆಯ ಯೋಧರು ರಾಷ್ಟ್ರ ರಕ್ಷಣೆಗೆ ಅವಿರತ ಶ್ರಮ ವಹಿಸುತ್ತಿದ್ದಾರೆ. ಅವರೆಲ್ಲರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಬೇಕಿದೆ ಎಂದರು.

    ಭಾರತೀಯರ ನೈಜ ಚೈತನ್ಯ ರಾಷ್ಟ್ರಧ್ವಜ. ಅದು ದೇಶಪ್ರೇಮ, ಧೈರ್ಯ, ಸತ್ಯ, ಧರ್ಮ, ಶಾಂತಿಗಳ ಸಂಕೇತವೂ ಆಗಿದೆ. ಇಡೀ ಧ್ವಜದಲ್ಲಿ ಕಣ್ಣಿಗೆ ಕಾಣದಂತೆ ದೇಶಭಕ್ತರ ತ್ಯಾಗದ ನೆತ್ತರಿನ ಕೆಂಪು ಕೂಡ ಅಡಕವಾಗಿದ್ದು, ಆ ಪವಿತ್ರಾತ್ಮರೆಲ್ಲರಿಗೂ ಭಾವತರ್ಪಣ ಅರ್ಪಿಸಬೇಕಿದೆ ಎಂದರು.

    ಜಿಲ್ಲೆಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯ ರಸಕೊಪ್ಪ ಕೃಷ್ಣರಾಯರು 1912ರಲ್ಲಿ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಿದ್ದ ಮೊದಲಿಗರು. 1927ರ ಆ.18ರಂದು ಮಹಾತ್ಮ ಗಾಂಧೀಜಿ ಅವರು ಚಿಕ್ಕಮಗಳೂರು ಹಾಗೂ ಕಡೂರಿನಲ್ಲಿ ನಡೆಸಿದ ಸಾರ್ವಜನಿಕ ಸಭೆಗಳು, ಬಾಬು ರಾಜೇಂದ್ರ ಪ್ರಸಾದ್, ಎನ್.ವಿ.ರಂಗಾ ಆಜಾದ್ ಮೈದಾನದಲ್ಲಿ ನಡೆಸಿದ ಭಾಷಣಗಳ ಪ್ರೇರಣೆಯಿಂದ ಜಿಲ್ಲೆಯ ಬಿಸಿ ನೆತ್ತರಿನ ಯುವಕರ ಬಣ ಹೋರಾಟಕ್ಕೆ ಧುಮುಕಿತ್ತು ಎಂದು ಹೇಳಿದರು.

    ಸಿಎಂಎಸ್ ಶಾಸ್ತ್ರಿ ಮತ್ತವರ ಸಂಗಡಿಗರು, ಬಿ.ಕೇಶವಯ್ಯ, ಸಿ.ಆರ್.ಶಂಕರಪ್ಪ, ಬಿ.ಕೆ.ನರಸಿಂಹಮೂರ್ತಿ, ಟಿ.ಸೀತಾರಾಮಯ್ಯ, ಎಂ.ಕೆ.ದೊಡ್ಡಪ್ಪ ಗೌಡ, ಅಜ್ಜಂಪುರದ ಪುರಂದರಪ್ಪ, ಬೆಟ್ಟಗೆರೆ ಕೋದಂಡ ರಾಮ ಭಟ್ಟ, ಮಾಕೋನಹಳ್ಳಿ ಹುಚ್ಚೇಗೌಡ, ತರೀಕೆರೆ ಟಿ.ಸಿ.ಶಾಂತಪ್ಪ, ಎಸ್.ಅಣ್ಣಪ್ಪ ಶೆಟ್ಟಿ, ಡಿ.ಎಸ್.ಕೃಷ್ಣಪ್ಪ ಗೌಡ, ಕೆ.ಆರ್. ನಾರಾಯಣ ಶೆಟ್ಟಿ, ಮಾರ್ಗದ ಮಲ್ಲಪ್ಪ, ಬಿ.ಕೆ.ಲೋಕಪ್ಪ ಗೌಡ, ಸಿ.ವಿ.ಧ್ರುವರಾಜ್, ಬಿ.ಎಲ್.ಸುಬ್ಬಮ್ಮ, ಮುದಿಯಪ್ಪ, ಕೆ.ಎಂ.ತಿಮ್ಮಪ್ಪ, ಭಾಗಮನೆ ದೇವೇಗೌಡ, ಆಲೂರು ಬಿದ್ದಪ್ಪ ಹೀಗೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡ ಇತರ ಪ್ರಾತಃಸ್ಮರಣೀಯರನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts