More

    ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರು

    ಹಾವೇರಿ: ಅಂತಿಮ ವರ್ಷದ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ತರಗತಿ ಆರಂಭಕ್ಕೆ ಸರ್ಕಾರ ಸಮ್ಮತಿಸಿದ್ದು, ಮಂಗಳವಾರ ಕಾಲೇಜ್​ಗೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಆಗಮಿಸಿದ್ದರು.

    ಕರೊನಾ ಟೆಸ್ಟ್ ವರದಿ ಹಾಗೂ ಪಾಲಕರ ಒಪ್ಪಿಗೆ ಪತ್ರ ತರದ ವಿದ್ಯಾರ್ಥಿಗಳನ್ನು ವಾಪಸು ಕಳುಹಿಸಲಾಯಿತು. ದೀಪಾವಳಿ ಹಬ್ಬದ ಮರುದಿನವೇ ಕಾಲೇಜ್​ಗಳು ಆರಂಭಗೊಂಡಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ.

    ಜಿಲ್ಲೆಯ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜ್​ಗಳಲ್ಲಿ ಕರೊನಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಕಾಲೇಜ್​ಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಜಿಲ್ಲೆಯಲ್ಲಿ 14 ಸರ್ಕಾರಿ ಪದವಿ ಕಾಲೇಜ್, ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜ್, ಎರಡು ಇಂಜಿನಿಯರಿಂಗ್ ಕಾಲೇಜ್, ಡಿಪ್ಲೊಮಾ, ಬಿಇಡಿ, ಬಿಪಿಎಡ್ ಸೇರಿ 25 ಕಾಲೇಜುಗಳಿವೆ. ಅಂದಾಜು 6 ಸಾವಿರ ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ಓದುತ್ತಿದ್ದು, ಮೊದಲ ದಿನ ಶೇ. 10ರಷ್ಟು ವಿದ್ಯಾರ್ಥಿಗಳೂ ಕಾಲೇಜ್​ಗೆ ಬರಲಿಲ್ಲ.

    ಕಾಲೇಜ್ ಪ್ರವೇಶ ದ್ವಾರದ ಬಳಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಲಾಯಿತು. ಉಪನ್ಯಾಸಕರು, ಸಿಬ್ಬಂದಿ ಕೋವಿಡ್ ಪರೀಕ್ಷೆ ವರದಿ ತಂದು ಕರ್ತವ್ಯಕ್ಕೆ ಹಾಜರಾದರು. ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿದ್ದರು. ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಕ್ರಮವಹಿಸಲಾಗಿತ್ತು. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ವ್ಯವಸ್ಥೆ ಮಾಡಲಾಗಿತ್ತು.

    ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಲ್ಯಾಬ್​ಗೆ ವಿದ್ಯಾರ್ಥಿಗಳು ಅಲೆದಾಡುವಂತಾಯಿತು. ಟೆಸ್ಟ್ ವರದಿ ಬರಲು ಎರಡು ಮೂರು ದಿನ ಕಾಯಬೇಕಾಗಿರುವುದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಇನ್ನೂ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

    ಹಾಸ್ಟೇಲ್​ಗಳಿಗೆ ಬಾರದ ವಿದ್ಯಾರ್ಥಿಗಳು

    ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ನಿಲಯಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್​ಟಿಪಿಸಿಆರ್ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ಪಾಲಕರ ಒಪ್ಪಿಗೆ ಪತ್ರ ತರಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ಯಾರೂ ಬರಲಿಲ್ಲ.

    ಕೆಲ ಕಾಲೇಜ್​ಗಳಲ್ಲಿ ಶೇ. 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಹಾಜರಾಗಿದ್ದರು. ಹಾವೇರಿಯ ಗಾಂಧಿಪುರ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ 850 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಹಾಜರಾಗಿದ್ದರು. ನಗರದ ಮಹಿಳಾ ಪದವಿ ಕಾಲೇಜ್​ಗೆ ಒಬ್ಬರೂ ಬರಲಿಲ್ಲ. ಹಾವೇರಿ ಜಿಎಚ್ ಕಾಲೇಜ್, ಹುಕ್ಕೇರಿಮಠ ಕಾಲೇಜ್​ಗೆ ಕೆಲ ವಿದ್ಯಾರ್ಥಿಗಳು ಬಂದಿದ್ದರು. ಸಿಬಿ ಕೊಳ್ಳಿ ಪಾಲಿಟೆಕ್ನಿಕ್​ಗೆ ವಿದ್ಯಾರ್ಥಿಗಳು ಆಗಮಿಸಿದ್ದರು.

    ಬಹುದಿನಗಳ ನಂತರ ಕಾಲೇಜ್​ಗೆ ಆಗಮಿಸಿದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಕಾಣುತ್ತಿತ್ತು. ತರಗತಿಗೆ ಹಾಜರಾಗಲು ಅವಕಾಶ ಸಿಗದ ವಿದ್ಯಾರ್ಥಿಗಳು ಹೊರಗೆ ಗುಂಪುಗೂಡಿ ರ್ಚಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಬಸ್​ಪಾಸ್ ಸಮಸ್ಯೆ

    ಬಸ್​ಪಾಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಕಾಲೇಜ್​ಗೆ ಆಗಮಿಸಲಿಲ್ಲ. ಅಲ್ಲದೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ತಂದ ಬಳಿಕವೇ ಕಾಲೇಜ್​ಗೆ ಬರುವಂತೆ ವಾಟ್ಸ್ ಆಪ್ ಗ್ರುಪ್​ಗಳಲ್ಲಿ ಪ್ರಾಂಶುಪಾಲರು ಸೂಚನೆ ನೀಡಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಕಾಲೇಜ್​ನತ್ತ ಹೆಜ್ಜೆ ಹಾಕಲಿಲ್ಲ.

    ಮಂಗಳವಾರದಿಂದ ಪದವಿ ಅಂತಿಮ ವರ್ಷದ ತರಗತಿ ಆರಂಭಿಸಲು ಸೂಚನೆ ನೀಡಿದ್ದರಿಂದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜ್​ಗಳಲ್ಲಿ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದೆ. ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ.
    | ಬಿ.ಟಿ. ಲಮಾಣಿ, ಗಾಂಧಿಪುರ ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts