More

    ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

    ಶಿವಮೊಗ್ಗ: ಸಮಾಜದಲ್ಲಿ ಲಿಂಗಾನುಪಾತದ ಅಸಮತೋಲನ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಲು ಪಿಸಿಪಿಎನ್‌ಡಿಟಿ ಕಾಯ್ದೆ ಜಾರಿಗೆ ತರಲಾಗಿದ್ದು, ಇದನ್ನು ಪರಿಣಾಮಕಾರಿ ಅನುಷ್ಟಾನಗೊಳಿಸಬೇಕೆಂದು ಪಿಸಿಪಿಎನ್‌ಡಿಟಿ ಉಪನಿರ್ದೇಶಕ ಡಾ.ವಿವೇಕ್ ದೊರೈ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ, ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ-1994 ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭ್ರೂಣಲಿಂಗ ಪತ್ತೆ ಕಾನೂನಿಗೆ ವಿರುದ್ಧ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
    ಹುಟ್ಟುವ ಮಗು ಹೆಣ್ಣು ಆಗಬಾರದೆಂಬುದು ಸರಿಯಲ್ಲ. ಈ ಮನಸ್ಥಿತಿ ಬದಲಾಗಬೇಕು. ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾದರೆ ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು ಎಂದು ಹೇಳಿದರು.
    ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಯಾವ ಸಮಾಜದಲ್ಲಿ ಕೇವಲ ಗಂಡು ಪ್ರಾಧಾನ್ಯವಿರುತ್ತದೋ ಅಲ್ಲಿ ಆರ್ಥಿಕ, ಸಾಮಾಜಿಕ ಬೆಳವಣಿಗೆ ಕುಂಠಿತವಾಗಿರುತ್ತದೆ ಎಂದು ಗಾಂಧೀಜಿ ಹೇಳಿದ್ದಾರೆ. ಪುರುಷ-ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಹೆರಿಗೆಗೆ ಮುನ್ನ ಪ್ರಸವಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.
    ಜಿಲ್ಲಿಯಲ್ಲಿ ನೋಂದಾಯಿತ 118 ಸ್ಕಾೃನಿಂಗ್ ಸೆಂಟರ್‌ಗಳಿವೆ. ಗರ್ಭಿಣಿಯರು 12 ವಾರದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ತಾಯಿ ಕಾರ್ಡ್ ಪಡೆಯಬೇಕು. ಆರ್‌ಸಿಎಚ್ ಪೋರ್ಟಲ್‌ನಲ್ಲಿ ಪ್ರತಿ ತಿಂಗಳು ಅಪ್‌ಡೇಟ್ ಆಗಬೇಕು. ಈ ಕಾಯ್ದೆ ಉಲ್ಲಂಘಿಸಿದ್ದಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಜತೆಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
    ಸಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಟಿ.ಡಿ.ತಿಮ್ಮಪ್ಪ, ಪಿಸಿಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ಧನಂಜಯ ಸರ್ಜಿ, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಪಿಸಿಪಿಎನ್‌ಡಿಟಿ ಸದಸ್ಯ ಕಾರ್ಯದರ್ಶಿ ಡಾ.ಶಿವಾನಂದ, ಸಲಹೆಗಾರ ಡಾ.ವೆಂಕಟೇಶ್ ರಾವ್, ಆರ್‌ಸಿಎಚ್ ಡಾ.ನಾಗರಾಜ ನಾಯ್ಕ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಮೇಶ್, ಡಾ.ಶಮಾ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts