More

    ಏ.12ರಂದು ಶ್ರೀ ಮಹಾಗಣಪತಿ ದೇವರ ಜಾತ್ರೋತ್ಸವ: ಆರ್.ಯತೀಶ್

    ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ಏ.12ರಂದು ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ತಿಳಿಸಿದರು.
    ಬುಧವಾರ ಇಲ್ಲಿನ ಎಸಿ ಕಚೇರಿಯಲ್ಲಿ ಮಹಾಗಣಪತಿ ಜಾತ್ರೋತ್ಸವದ ಪ್ರಯುಕ್ತ ಕರೆಯಲಾಗಿದ್ದ ಪೂರ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ.9ರಿಂದ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 13ರಿಂದ 17ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
    ಚುನಾವಣೆ ನೀತಿ ಸಂಹಿತೆ ಇರುವುದರಿಂದ ಜಾತ್ರೆಗಾಗಿ ಯಾವುದೇ ಅಧಿಕೃತ ಸಮಿತಿ ರಚಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಜಾತ್ರೆ ಯಶಸ್ಸಿಗಾಗಿ ಸಮಿತಿಗಳನ್ನು ರಚಿಸಲಾಗುತ್ತದೆ. ಸಾರ್ವಜನಿಕರು ಎಂದಿನಂತೆ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಹಕರಿಸಬೇಕು. ಈ ವರ್ಷ ಮಾರಿಕಾಂಬಾ ಜಾತ್ರೆ ಇಲ್ಲದಿರುವುದರಿಂದ ಗಣಪತಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ ಎಂದರು.
    ಜಾತ್ರೆಗಾಗಿ 11.50 ಲಕ್ಷ ರೂ. ಬಜೆಟ್ ಸಿದ್ಧಪಡಿಸಿ ಮಂಜೂರಾತಿಗೆ ಸರ್ಕಾರಕ್ಕೆ ಕಳಿಸಲಾಗಿದೆ. ಜತೆಗೆ ಸ್ಟಾಲ್ ಹರಾಜು ಹಾಕಿ ದೇವಸ್ಥಾನಕ್ಕೆ ಆದಾಯ ಸಂಗ್ರಹಿಸಲಾಗುತ್ತದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲು ಸಿದ್ಧತೆ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುವುದು. ಜತೆಗೆ ಕಲಾತಂಡಗಳಿಂದ ಶೇ.100 ಮತದಾನ ಮಾಡುವ ಬಗ್ಗೆ ಜಾಗೃತಿ, ಬೀದಿ ನಾಟಕ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
    ಟಿ.ವಿ.ಪಾಂಡುರಂಗ ಮಾತನಾಡಿ, ಈ ಬಾರಿ ಅನ್ನ ಸಂತರ್ಪಣೆಯನ್ನು ದೇವಾಲಯದ ಸಮೀಪವಿರುವ ಸರ್ಕಾರಿ ಶಾಲೆಗೆ ತಾಗಿಕೊಂಡಂತೆ ಶಾಮಿಯಾನ ಹಾಗೂ ವಿಶೇಷ ವ್ಯವಸ್ಥೆ ಮಾಡಬೇಕು. ಬಿಸಿಲು ಹೆಚ್ಚಿರುವುದರಿಂದ ಶಾಮಿಯಾನದ ವ್ಯವಸ್ಥೆ ಹೆಚ್ಚಾಗಿ ಪೂರೈಸುವಂತೆ ಸಲಹೆ ನೀಡಿದರು. ಸಭೆ ಸಮ್ಮತಿಸಿತು.
    ರಥೋತ್ಸವದ ಸಂದರ್ಭ ನಿಗದಿತ ಮತ್ತು ಸಂಬಂಧಿಸಿದವರು ಮಾತ್ರ ರಥವನ್ನು ಹತ್ತಬೇಕು. ಜಾತ್ರೆಗೆ ಸಂಬಂಧಿಸಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಪೂರೈಸಬೇಕು ಎಂದು ಜನತೆ ಸಲಹೆ ನೀಡಿದರು. ತಹಸೀಲ್ದಾರ್ ಸೈಯದ್ ಕಲೀಂವುಲ್ಲಾ, ತಾಪಂ ಇಒ ನಾಗೇಶ್ ಬ್ಯಾಲದ್, ಪೌರಾಯುಕ್ತ ಲಿಂಗರಾಜ್, ಎಇಇ ಎಚ್.ಕೆ.ನಾಗಪ್ಪ, ದೇವಾಲಯದ ಅರ್ಚಕ ವಿದ್ವಾನ್ ಪಿ.ಎಲ್.ಗಜಾನನ ಭಟ್, ನವೀನ್ ಜೋಯಿಸ್, ಪ್ರಮುಖರಾದ ಪ್ರವೀಣ್ ಕುಮಾರಿ, ಪ್ರತಿಮಾ ಜೋಗಿ, ಕೆ.ಎನ್.ನಾಗೇಂದ್ರ ಇತರರಿದ್ದರು.

    ಪ್ರತೀ ವರ್ಷ ಅಧಿಕಾರಿಗಳ ವಿಳಂಬ ನೀತಿಯಿಂದ ಜಾತ್ರೆಗೆ ಅಂಗಡಿ ಹಾಕುವವರು ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಜಾತ್ರೆಯ ಹರಾಜು ಪ್ರಕ್ರಿಯೆ ಮಾಡಿ.
    ತಾರಾ ಮೂರ್ತಿ
    ಸಾಮಾಜಿಕ ಕಾರ್ಯಕರ್ತೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts