More

    ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ಉತ್ಸವ ಸಂಪನ್ನ

    ಗೋಣಿಕೊಪ್ಪ: ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವ ಬುಧವಾರ ಸಂಪನ್ನಗೊಂಡಿತು.

    ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಆರ್ವತೋಕ್ಲು ಹಾಗೂ ಈಚೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನವೆಂದು ಕರೆಯಲ್ಪಡುವ ಶ್ರೀ ಈಶ್ವರ ದೇಗುಲದಲ್ಲಿ ಫೆ.26ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡಿದ್ದ ಒಂಬತ್ತು ದಿನಗಳ ವಾರ್ಷಿಕೋತ್ಸವ ಮಾ.5ರಂದು ದೇವರ ಅವಭೃತ ಸ್ನಾನದ ಮೂಲಕ ತೆರೆಕಂಡಿತು.

    ಕಳೆದ ಸೋಮವಾರ ಕುಂದಾ ಮುಗುಟಗೇರಿ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನ ಸಮೀಪದ ಅಂಬಲದಲ್ಲಿ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರ್ವತೋಕ್ಲು ಹಾಗೂ ಈಚೂರು ಗ್ರಾಮಗಳ ತಕ್ಕಮುಖ್ಯಸ್ಥರು ಸೇರಿದಂತೆ ಶ್ರೀ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ಎತ್ತು ಪೊರಾಟದ ಮೂಲಕ ದೇವಸ್ಥಾನಕ್ಕೆ ತಂದರು. ಚೆಂಡೆ ಮದ್ದಳೆ ಹಾಗೂ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಎತ್ತು ಪೊರಾಟವನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆರು ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸಿದರು. ನಂತರ ನೆರ್ಪು ಪ್ರಯುಕ್ತ ವಿಶೇಷ ಪೂಜೆ ನಡೆದು ದೇವರ ಉತ್ಸವ ಮೂರ್ತಿಯನ್ನು ಹೊತ್ತು ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಚೆಂಡೆ ವಾದ್ಯಕ್ಕೆ ಹೆಜ್ಜೆ ಹಾಕಲಾಯಿತು. ನಂತರ ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಮಂಗಳವಾರ ದೇವರ ಅವಭೃತ ಸ್ನಾನ (ದೇವಕುಳಿಪೊ) ಪ್ರಯುಕ್ತ ಶ್ರೀ ಈಶ್ವರ ದೇವರ ಆಭರಣಗಳನ್ನು ಚೆಂಡೆ ಮದ್ದಳೆಯೊಂದಿಗೆ ತಕ್ಕಮುಖ್ಯಸ್ಥರು ಕೊಂಡೊಯ್ದು ಹತ್ತಿರದಲ್ಲಿರುವ ದಬ್ಬೆಚಮ್ಮ ದೇವಸ್ಥಾನದಲ್ಲಿ (ಪಾರ್ವತಿ) ಪಾರ್ವತಿ ದೇವಿಗೆ ತೊಡಿಸಿ ಅಲಂಕಾರ ಮಾಡುವ ಮೂಲಕ ಸಾಂಪ್ರದಾಯಿಕ ಅವಭೃತ ಸ್ನಾನಕ್ಕೆ ಚಾಲನೆ ನೀಡಲಾಯಿತು.

    ಸಂಜೆ 6 ಗಂಟೆಗೆ ಉತ್ಸವ ಮೂರ್ತಿಯನ್ನು ಹೊತ್ತು ಹತ್ತಿರದ ದೇವರ ಕೆರೆಗೆ ತೆರಳಿ ಅವಭೃತ ಸ್ನಾನದ ಬಳಿಕ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಚೆಂಡೆ ಮದ್ದಳೆ ಹಾಗೂ ಸಾಂಪ್ರದಾಯಿಕ ಕೊಡವ ವಾಲಗದೊಂದಿಗೆ ಹಾಗೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದಲ್ಲಿ 11 ಸುತ್ತು ಪ್ರದಕ್ಷಿಣೆ ಹಾಕಿ ಚಂಡೆಯ ನಾದಕ್ಕೆ ಉತ್ಸವ ಮೂರ್ತಿಯನ್ನು ಹೊತ್ತವರು ಹೆಜ್ಜೆ ಹಾಕಿದ ಪರಿ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಭಕ್ತರು ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಮಹಾಪೂಜೆಯ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts