More

    ಕಲೋತ್ಸವದಲ್ಲಿ ಪ್ರತಿಭೋತ್ಸವ

    ಮೈಸೂರು: ಅದು ಅಕ್ಷರಶಃ ಕಲಾಲೋಕ! ಯಾವುದೇ ವೃತ್ತಿಪರ ಕಲಾವಿದರಿಗೂ ಕಡಿಮೆಯಿಲ್ಲದ ಪ್ರತಿಭಾ ಪ್ರದರ್ಶನ, ತಮಗೆ ಸಿಕ್ಕ ವೇದಿಕೆಯನ್ನು ಪ್ರತಿಭೆ ಹೊರ ಹಾಕಲು ಸಮರ್ಥವಾಗಿ ಬಳಸಿಕೊಂಡ ಚಿಣ್ಣರು, ವಿವಿಧ ವೇಷಭೂಷಣದಿಂದ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ ಪರಿ ಅಮೋಘ…

    ಇಂಥ ಅವಿಸ್ಮರಣೀಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದು ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನ. ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಚಾಲನೆಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ’ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚಿದರು.
    ಒಂದೆಡೆ ಹೆಣ್ಣು ಮಕ್ಕಳ ಕೋಲಾಟ, ಜಾನಪದ ನೃತ್ಯಗಳ ಝಲಕ್, ಮತ್ತೊಂದೆಡೆ ಸಾಂಪ್ರದಾಯಿಕ ಉಡುಗೆಯಲ್ಲಿ ಗಂಡು ಮಕ್ಕಳ ಮಿಂಚು. ಇವುಗಳ ಮಧ್ಯೆಯೇ ಲಘು ಸಂಗೀತ, ಕಂಠಪಾಠ ಸ್ಪರ್ಧೆಗಳ ವೈಭವವು ಕಂಗೊಳಿಸಿತು.

    ಇದೇ ಮೊದಲ ಬಾರಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜತೆಗೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯ ಮೊದಲ ದಿನವಾದ ಸೋಮವಾರ ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಕಂಠಪಾಠ ಸ್ಪರ್ಧೆ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು ಕಂಠಪಾಠ ಸ್ಪರ್ಧೆ, ಧಾರ್ಮಿಕ ಪಠಣ ಸಂಸ್ಕೃತ, ಧಾರ್ಮಿಕ ಪಠಣ ಅರೇಬಿಕ್ ಸ್ಪರ್ಧೆ, ಲಘು ಸಂಗೀತ, ಜಾನಪದ ನೃತ್ಯ, ಅಭಿನಯ ಗೀತೆ, ಛದ್ಮವೇಷ ಸ್ಪರ್ಧೆ, ಕ್ಲೇ ಮಾಡಲಿಂಗ್, ಚಿತ್ರಕಲೆ, ಕಥೆ ಹೇಳುವುದು, ರಸಪ್ರಶ್ನೆ, ದೇಶಭಕ್ತಿ ಗೀತೆ ಸ್ಪರ್ಧೆ ಹೀಗೆ ನಾನಾ ಬಗೆಯ ಸ್ಪರ್ಧೆಗಳು ನಡೆದವು.

    ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ಸೇರಿದಂತೆ ಜಿಲ್ಲೆಯ ಹಲವೆಡೆಗಳಿಂದ ಆಗಮಿಸಿದ್ದ ನೂರಾರು ಮಕ್ಕಳು ತಮ್ಮಲ್ಲಿದ್ದ ಪ್ರತಿಭೆಯನ್ನು ಪ್ರದರ್ಶಿಸಿದರು. ಶಾರದಾವಿಲಾಸ ಆವರಣದಲ್ಲಿ ಸೇರಿದ್ದ ಸಾರ್ವಜನಿಕರು ಮುದ್ದು ಮಕ್ಕಳ ಮುಗ್ಧ ಅಭಿನಯ ನೋಡಿ ಖುಷಿಪಟ್ಟರು. ಒಟ್ಟು 9 ಬ್ಲಾಕ್‌ಗಳಿಂದ 747 ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಎಲ್ಲ ಮಕ್ಕಳಲ್ಲಿಯೂ ಇರುತ್ತದೆ. ಅದನ್ನು ಪಾಲಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಅಂತೆಯೆ, ಮಕ್ಕಳು ಕೂಡ ತಮಗೆ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕು. ಬಹುಮುಖಿ ಪ್ರತಿಭೆ ಹೊಂದಿರುವ ಮಕ್ಕಳಿಗೆ ಇದು ಉತ್ತಮ ವೇದಿಕೆ. ಇಂಥ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಬೆಳೆಸುವ ಜತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
    ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಇಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರು. ನಾನು, ನನ್ನ ಶಾಲೆ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ವಿವಿಧ ಕಲೆಗಳ ಅಭ್ಯಾಸವನ್ನು ಮಾಡಿರುತ್ತೀರಾ. ಗೆಲ್ಲಲೇಬೇಕು ಎಂಬ ಮನೋಭಾವ ಹಾಗೆ ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ದಿನಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಗೆಲ್ಲುವುದು ಮಾತ್ರವಲ್ಲದೇ ಬದುಕಿನಲ್ಲೂ ಗೆಲ್ಲಬೇಕು ಎಂದು ಕಿವಿಮಾತು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕೇವಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಕ್ಕೆ ಮಾತ್ರ ಸೀಮಿತವಾಗಿದ್ದ ಪ್ರತಿಭಾ ಕಾರಂಜಿಯನ್ನು ಈಗ ಪದವಿ ಪೂರ್ವ ವಿದ್ಯಾರ್ಥಿಗಳವರೆಗೂ ವಿಸ್ತರಣೆ ಮಾಡಿ ಪ್ರತಿಭೆಯ ಅನಾವರಣಕ್ಕೆ ಒಳ್ಳೆಯ ವೇದಿಕೆ ಕಲ್ಪಿಸಿದೆ. ಓದಿನ ಜತೆಗೆ ಪಠ್ಯೇತರ ಚಟುವಟಿಕೆ ಇದ್ದಾಗ ಮಾತ್ರ ವ್ಯಕ್ತಿತ್ವ ಗಟ್ಟಿಯಾಗುತ್ತದೆ. ಕಲಾ ಪ್ರಕಾರಗಳಿಗೆ ಒಂದು ಬಗೆಯ ಶಕ್ತಿ ಇದೆ. ಅದು ಹೃದಯಕ್ಕೆ ಹಿತ ನೀಡುತ್ತದೆ. ಇಲ್ಲಿ ಗೆದ್ದು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
    ಮೈಸೂರು ವಿಭಾಗದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮಂಡಳಿಯ ಪದನಿಮಿತ್ತ ಸಹ ನಿರ್ದೇಶಕಿ ಎಚ್.ಎಸ್.ಗೀತಾಂಬ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಪಾಂಡುರಂಗ, ಶಾರದವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts