More

    ಬರೋಬರಿ 26 ವರ್ಷದ ಬಳಿಕ ಮಂಡ್ಯ ಜಿಲ್ಲೆಯ ಈ ಗ್ರಾಮದಲ್ಲಿ ಹಬ್ಬದ ಸಂಭ್ರಮ: ಇಲ್ಲಿನ ಸಂಪ್ರದಾಯವೇ ವಿಶೇಷ

    ಮಂಡ್ಯ: ತಾಲೂಕಿನ ಈಚಗೆರೆ ಗ್ರಾಮದಲ್ಲಿ ಬರೋಬರಿ 26 ವರ್ಷದ ಬಳಿಕ ಮಾ.21ರಿಂದ ಎರಡು ದಿನದ ಹಿರಿಯಮ್ಮ, ಕಾಳಿಕಾಂಭ ದೇವಿಯ ಕೊಂಡ-ಬಂಡಿ ಉತ್ಸವ ಸಂಭ್ರಮದಿಂದ ನಡೆಯಲಿದೆ.
    ಈ ಹಬ್ಬದ ಆಚರಣೆಗೆ ನಿಗದಿತ ದಿನ ಅಥವಾ ಸಮಯವಿಲ್ಲ. ಹಿಂದಿನಿಂದಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿರುವುದು ವಿಶೇಷ. ಆದರೆ ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಗ್ರಾಮಸ್ಥರು ಹೇಳುವಂತೆ 1960, 1998ರಲ್ಲಿ ಹಬ್ಬದ ಆಚರಣೆಯಾಗಿತ್ತು. ಈಗ ಯುವಕರು ಹಿರಿಯರೊಂದಿಗೆ ಚರ್ಚಿಸಿ ಗ್ರಾಮಸ್ಥರೆಲ್ಲರ ಸಹಕಾರದೊಂದಿಗೆ ಹಬ್ಬ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
    21ರ ಮುಂಜಾನೆಯಿಂದಲೇ ಹಿರಿಯಮ್ಮ, ಕಾಳಿಕಾಂಭ ದೇವರಿಗೆ ಪೂಜಾ ಕೈಂಕರ್ಯ ಇರಲಿದೆ. ಸಂಜೆ 5ಗಂಟೆಗೆ ಗ್ರಾಮದ ಹುಚ್ಚಮ್ಮ ದೇವಸ್ಥಾನದಿಂದ ದೇವರ ಗುಡ್ಡರನ್ನು ಹೊತ್ತ ಬಂಡಿಗಳು ಹಿರಿಯಮ್ಮ ದೇವಸ್ಥಾನದ ಸುತ್ತ ಬಂಡಿ ಉತ್ಸವ ನಡೆಯಲಿದೆ. ಸುಮಾರು 6 ಗಂಟೆಗೆ ಹಿರಿಯಮ್ಮ ದೇವಸ್ಥಾನದ ಎದುರು ಹಾಕಿರುವ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ರಾತ್ರಿ 8ಗಂಟೆಗೆ ಶಿವಾರ ಉಮೇಶ್ ನೇತೃತ್ವದಲ್ಲಿ ಗೀತಗಾಯನ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ನಡೆಯಲಿದೆ.
    22ರ ಮುಂಜಾನೆ 4.30ಕ್ಕೆ ಗ್ರಾಮದ ಮಹಿಳೆಯರಿಂದ ಮಡೆ ಆರತಿ ಹಾಗೂ ಬಾಯಿಬೀಗ ಹರಕೆ ಹೊತ್ತ ಭಕ್ತರ ಸಮೇತ ಹೂ ಹೊಂಬಾಳೆ ನಡೆಸಿ ದೇವರ ಪೂಜೆಗಳನ್ನು ಹೊತ್ತ ಗುಡ್ಡರು ಕೊಂಡ ಹಾಯಲಿದ್ದಾರೆ. ಬಳಿಕ ದೇವರಿಗೆ ಮಹಾ ಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಗುವುದು. ಸಂಜೆ 7 ಗಂಟೆಗೆ ಹಿರಿಯಮ್ಮ, ಕಾಳಿಕಾಂಭ ದೇವರಿಗೆ ಹೂ ಹೊಂಬಾಳೆ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಹಬ್ಬ ಸಂಪನ್ನಗೊಳ್ಳಲಿದೆ.

    ಬರೋಬರಿ 26 ವರ್ಷದ ಬಳಿಕ ಮಂಡ್ಯ ಜಿಲ್ಲೆಯ ಈ ಗ್ರಾಮದಲ್ಲಿ ಹಬ್ಬದ ಸಂಭ್ರಮ: ಇಲ್ಲಿನ ಸಂಪ್ರದಾಯವೇ ವಿಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts