ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಹೂವಮ್ಮ ಪರಮೇಶ್ವರ ಗೌಡ, ಉಪಾಧ್ಯಕ್ಷರಾಗಿ ಫೈರೋಜಾ ಬಾನು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಮಹಮ್ಮದ್ ಹನೀಫ್, ಉಪಾಧ್ಯಕ್ಷೆ ರತ್ನಮ್ಮ ಪಕ್ಷದ ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಶುಕ್ರವಾರ ಗ್ರಾಪಂ ಸಭಾಂಗಣದಲ್ಲಿ ಚುನಾವಣೆ ನಿಗದಿಯಾಗಿತ್ತು. ಹೂವಮ್ಮ, ಫೈರೋಜಾ ಬಾನು ಹೊರತುಪಡಿಸಿ ಬೇರ್ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕೆ.ಎನ್.ಸತೀಶ್, ಸಹಾಯಕ ಅಧಿಕಾರಿ ನಾಗೇಂದ್ರ ಅವರು ಅವಿರೋಧ ಆಯ್ಕೆ ಘೊಷಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಮಾತನಾಡಿ, ಯಾವುದೆ ಪಕ್ಷಪಾತ ಮಾಡದೆ ಗ್ರಾಮದ ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಬೇಕು. ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಕುಡಿಯುವ ನೀರು ಮತ್ತಿತರೆ ಸೌಲಭ್ಯ ಕಲ್ಪಿಸಲು ಗಮನಹರಿಸಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಹೂವಮ್ಮ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಮಾದರಿ ಗ್ರಾಪಂ ನಿರ್ವಣಕ್ಕೆ ಹಾಗೂ ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಮುಗಿಸಲು, ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಪಂ ಸದಸ್ಯೆ ಚಂದ್ರಮ್ಮ, ಮಾಜಿ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಎಸ್.ಅರುಣೇಶ್, ರವಿಚಂದ್ರ, ಜಾನ್ ಡಿಸೋಜ, ಮಧುಸೂದನ್ ಇತರರಿದ್ದರು.