More

    ಸ್ತ್ರೀಯರಲ್ಲಿರಲಿ ಅನನ್ಯ ಕಲಾ ನೈಪುಣ್ಯ: ಸಾಹಿತಿ ಟಿ.ಗಿರಿಜಾ ಸಂಸ್ಮರಣೆಯಲ್ಲಿ ವಿಜಯಾ ಶ್ರೀಧರ್ ಅನಿಸಿಕೆ

    ದಾವಣಗೆರೆ: ಇಂದಿನ ಮಹಿಳೆಯರು ಸಾಹಿತ್ಯ ಕೃಷಿಯಲ್ಲಿ ತೊಡಗದಿದ್ದರೂ ಕರಕುಶಲ ಕಲೆ, ಅಡುಗೆ ಕಾರ್ಯಕ್ರಮ, ಸಂಗೀತ, ನೃತ್ಯ ತರಬೇತಿ, ಮನೆ ಪಾಠದ ಮೂಲಕ ಅನನ್ಯತೆ ಉಳಿಸಿಕೊಳ್ಳಬೇಕು ಎಂದು ಶಿವಮೊಗ್ಗದ ಸಾಹಿತಿ ವಿಜಯಾ ಶ್ರೀಧರ್ ಹೇಳಿದರು.

    ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜ, ಲೇಖಕಿಯರ ಸಂಘದ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಟಿ.ಗಿರಿಜಾ ಅವರ ಸಂಸ್ಮರಣೆ, ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಮೂರನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

    ಫೇಸ್‌ಬುಕ್, ವಾಟ್ಸ್‌ಆ್ಯಪ್ ಸಾಹಿತ್ಯ ಬರುತ್ತಿದೆ. ಪುಸ್ತಕೋದ್ಯಮವೂ ಬೆಳೆಯುತ್ತಿದೆ. ಹೀಗಾಗಿ ಮನೆಯ ಜವಾಬ್ದಾರಿ ನಡುವೆಯೂ ಬರವಣಿಗೆ ರೂಢಿಸಿಕೊಳ್ಳಬೇಕು. ಲೇಖಕಿಯರು ಇಂದಿನ ಕಾಲಕ್ಕೆ ತಕ್ಕಂತೆ ಕಂಪ್ಯೂಟರ್, ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳುವ ಅನಿವಾರ್ಯತೆ ಇದೆ. ಮನೆ ಕಾರ್ಯಕ್ರಮಗಳಲ್ಲಿ ರವಿಕೆ ಬಟ್ಟೆ ಬದಲಾಗಿ ಪುಸ್ತಕ ನೀಡುವ ಸಂಸ್ಕೃತಿ ಬರಲಿ ಎಂದರು.

    ವೀಣಾ ಕೃಷ್ಣಮೂರ್ತಿ ಸಂಪಾದಿತ ಪ್ರಬಂಧ ಸಂಕಲನ ‘ತವರೂರ ಸೊಬಗು’ ಕೃತಿಯನ್ನು ಬಿಡುಗಡೆಗೊಳಿಸಿದರು.

    ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್ ಮಾತನಾಡಿ, ದೈಹಿಕ ವಿಕಲತೆ ಹಾಗೂ ಅನೇಕ ಸಂಕಷ್ಟದ ನಡುವೆಯೂ ಸಾಹಿತ್ಯ ಕೃಷಿ ಮಾಡಿದ ಟಿ.ಗಿರಿಜಾ ಅವರನ್ನು ಉತ್ತಮ ಪ್ರಶಸ್ತಿಗಳು ಅರಸಿ ಬರಲಿಲ್ಲ. ಹೆಚ್ಚಾಗಿ ಗುರುತಿಸುವ ಕೆಲಸವಾಗಲಿಲ್ಲ ಎಂದು ವಿಷಾದಿಸಿದರು.

    ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ದರ್ಶಿನಿ ಪುಸ್ತಕಗಳನ್ನು ಹೊರತಂದಾಗ ಕೆಲ ಲೇಖಕರು ಪೂರ್ವಾಗ್ರಹ ಪೀಡಿತರಾಗಿ ಟೀಕಿಸಿದರು. ಆದರೆ, ಇವೆರಡೂ ಗ್ರಂಥಗಳು ಉತ್ಕೃಷ್ಟವಾದುವಾಗಿವೆ ಎಂದರು.

    ವನಿತಾ ಸಮಾಜದ ಅಧ್ಯಕ್ಷೆ ಎಸ್.ಎಂ. ಮಲ್ಲಮ್ಮ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಗಿರಿಜಾ ಸಿದ್ಧಲಿಂಗಪ್ಪ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಟಿ.ಎಸ್. ಶೈಲಜಾ, ಕೆ.ಆರ್. ಸುಮತೀಂದ್ರ ಇದ್ದರು. ಸುನೀತಾ ಪ್ರಕಾಶ್, ಅನ್ನಪೂರ್ಣ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts