More

    ಪತ್ರಕರ್ತನಾಗಿ 50 ವರ್ಷಗಳ ವೃತ್ತಿಜೀವನ; ಇದೇ ಪ್ರಪ್ರಥಮ ಸನ್ಮಾನ!

    ಬೆಂಗಳೂರು: ‘ಇದು ನನ್ನ ಜೀವನದ ಮರೆಯಲಾಗದ ಕ್ಷಣ. ಐವತ್ತು ವರ್ಷಗಳ ಕಾಲ ಪ್ರತಕರ್ತನಾಗಿ ವೃತ್ತಿಜೀವನದಲ್ಲಿದ್ದರೂ ನಾನೆಂದೂ ಶಾಲು ಹೊದೆಸಿಕೊಂಡಿರಲಿಲ್ಲ. ಆದರೆ ಇದು ಮೊದಲ ಶಾಲು-ಸನ್ಮಾನ, ಎಂಬತ್ತಾರನೇ ವಯಸ್ಸಿನಲ್ಲಿ ಹೀಗೊಂದು ಮರೆಯಲಾಗದ ಕ್ಷಣ ಸಿಕ್ಕಿದ್ದಕ್ಕೆ ಸಾರ್ಥಕ ಭಾವ ಮೂಡಿಸಿದೆ..’ – ಹೀಗೆಂದವರು ಹಿರಿಯ ಪತ್ರಕರ್ತ ಹಳೇಬೀಡು ಕೃಷ್ಣಮೂರ್ತಿ.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಿರಿಯ ಪತ್ರಕರ್ತರಿಗಾಗಿ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮನದುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರು ಕಲ್ಲಸಂದ್ರದ ರಾಮಾಂಜನೇಯನಗರದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

    ಐವತ್ತರ ದಶಕದಲ್ಲಿ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಸಂದರ್ಭಗಳನ್ನು ನೆನಪು ಮಾಡಿಕೊಂಡ ಅವರು, ಐದು ದಶಕಗಳ ಕಾಲ ಸುದ್ದಿಮನೆಯಲ್ಲಿ ಕೆಲಸ ಮಾಡಿದೆ. ನಾನೆಂದೂ ಸ್ವಾರ್ಥಕ್ಕಾಗಿ ವೃತ್ತಿಯನ್ನು ಬಳಸಲಿಲ್ಲ ಎಂದರು. ಮೇಷ್ಟ್ರಾದವರು ಕ್ಲಾಸ್ ರೂಮ್​ನಲ್ಲಿ ಮಾತ್ರ ಪಾಠ ಮಾಡಬಹುದು. ಆದರೆ ಪತ್ರಕರ್ತ ಸಮಾಜಕ್ಕೆ ಮೇಷ್ಟ್ರು ಎಂದು ಅವರು ಅಭಿಪ್ರಾಯಪಟ್ಟರು.

    ತೀ ತಾ ಶರ್ಮಾ ನನ್ನ ಗುರುಗಳು. ಖಾದ್ರಿ ಶಾಮಣ್ಣ, ಟಿಎಸ್​​ಆರ್, ಕೃ.ನ.ಮೂರ್ತಿ ಅವರ ಒಡನಾಟದಲ್ಲಿ ಕೆಲಸ ಮಾಡಿದ ಸಾರ್ಥಕತೆ ನನಗಿದೆ. ನಾನೆಂದೂ ಯಾವುದೇ ಪ್ರಶಸ್ತಿ ಹಿಂದೆ ಹೋಗಲಿಲ್ಲ, ರಾಜ್ಯೋತ್ಸವ ಪ್ರಶಸ್ತಿಯೂ ಬೇಡ ಎಂದು ಹೇಳಿದೆ. ಹಲವು ಸಂದರ್ಭಗಳಲ್ಲಿ ಮಠಗಳು, ಸಂಘ-ಸಂಸ್ಥೆಗಳು, ಜಿಲ್ಲಾಡಳಿತಗಳು ಸನ್ಮಾನ ಮಾಡಲು ಮುಂದೆ ಬಂದಾಗ ನಯವಾಗಿ ನಿರಾಕರಿಸಿದ್ದೇನೆ. ಪ್ರೀತಿಯಿಂದ ಒಂದು ಹೂ ಪಡೆದಿದ್ದೇನೆ. ನನ್ನ ಬದ್ಧತೆ ಉಳಿಸಿಕೊಂಡು ಜೀವನದುದ್ದಕ್ಕೂ ಪರಿಪಾಲಿಸಿದ್ದೇನೆ ಎಂದರು.

    ಪತ್ರಕರ್ತನಾಗಿ 50 ವರ್ಷಗಳ ವೃತ್ತಿಜೀವನ; ಇದೇ ಪ್ರಪ್ರಥಮ ಸನ್ಮಾನ!

    ಕೆಯುಡಬ್ಲ್ಯುಜೆ ವೃತ್ತಿ ಪರವಾದ ಸಂಘಟನೆ. ಡಿವಿಜಿ ಹುಟ್ಟುಹಾಕಿದ ಈ ಸಂಘದ ಗೌರವವನ್ನು ನನ್ನ ಮನೆಯಂಗಳದಲ್ಲಿ ನೀಡುತ್ತಿರುವುದು ನನ್ನ ಜೀವನದ ಮರೆಯಲಾಗದ ಕ್ಷಣ. ಕೆಯುಡಬ್ಲ್ಯುಜೆ ಹಮ್ಮಿಕೊಂಡಿರುವ ಹಿರಿಯರ ಮನೆಯಂಗಳದಲ್ಲಿ ಕಾರ್ಯಕ್ರಮ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ 54 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಜೀವ ಕೃಷ್ಣಮೂರ್ತಿ ಅವರನ್ನು 86ನೇ ವಸಂತ ತುಂಬಿದ ಸಂದರ್ಭದಲ್ಲಿ ಗೌರವಿಸುತ್ತಿರುವುದು ನಮ್ಮ ಅಭಿಮಾನದ ಸಂಗತಿ ಎಂದರು.

    ಹಾಸನ ಜಿಲ್ಲೆಯ ಹಳೇಬೀಡಿನಿಂದ ವೃತ್ತಿ ಜೀವನ ಪ್ರಾರಂಭಿಸಿದ ಅವರು ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಲ್ಲದೆ, ಹಾಸನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.

    ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಷ್ಟ್ರೀಯ ಮಂಡಳಿ ಸದಸ್ಯ ಕಿರಣ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

    ಸಮಯದೊಂದಿಗೇ ಸ್ಪರ್ಧೆಗೆ ಬಿದ್ದಿದ್ದರಾ ಎಸ್​.ಪಿ. ಬಾಲಸುಬ್ರಹ್ಮಣ್ಯಂ!

    ಮಗನಿಗೆ ಉಗ್ರರ ನಂಟು, ನೊಂದ ತಂದೆ ಹೃದಯಾಘಾತಕ್ಕೀಡಾಗಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts