ಹೈದರಾಬಾದ್: ಆಸ್ಪತ್ರೆಯ ಬೆಡ್ ಮೇಲೆ ಮಲಗಿ..ಸೆಲ್ಫಿ ವಿಡಿಯೋ ಮಾಡಿ, ಅದನ್ನು ತನ್ನ ಅಪ್ಪನಿಗೆ ಕಳಿಸಿದ ಕೊವಿಡ್-19 ಸೋಂಕಿತ 26 ವರ್ಷದ ಯುವಕನ ಜೀವ ಮರುಕ್ಷಣವೇ ಹೋಗಿದೆ.
ಹೈದರಾಬಾದ್ನಲ್ಲಿ ನಡೆದ ಮನಕಲಕುವ ಘಟನೆ ಇದು. ‘ ಅಪ್ಪಾ…ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ…ನನಗೆ ಅಳವಡಿಸಲಾಗಿದ್ದ ವೆಂಟಿಲೇಟರ್ನ್ನು ವೈದ್ಯರು ತೆಗೆದುಬಿಟ್ಟಿದ್ದಾರೆ..’ ಎಂಬ ಮಾತುಗಳನ್ನಾಡಿ, ಬೆಡ್ ಮೇಲೆ ಮಲಗಿದ್ದಂತೆಯೇ ವಿಡಿಯೋ ಮಾಡಿ ಕಳಿಸಿದ್ದ ಯುವಕ.
ಶುಕ್ರವಾರವೇ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಆನ್ಲೈನ್ನಲ್ಲಿ ಮದ್ಯ ಆರ್ಡರ್ ಮಾಡಿ ಭರ್ಜರಿ ಹಣ ಕಳೆದುಕೊಂಡ ಮಾಜಿ ಪ್ರಧಾನಿಯ ಮಾಜಿ ಮಾಧ್ಯಮ ಸಲಹೆಗಾರ
ನನಗೆ ಉಸಿರಾಟ ಕಷ್ಟವಾಗುತ್ತಿದೆ. ನನಗೆ ಆಕ್ಸಿಜನ್ ನೀಡುವಂತೆ ಮೂರು ತಾಸುಗಳಿಂದ ವೈದ್ಯರು, ನರ್ಸ್ಗಳ ಬಳಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ಹೃದಯ ಬಡಿತ ನಿಂತು ಹೋಗಿದೆ. ನನ್ನ ಶ್ವಾಸಕೋಶಗಳು ಕೆಲಸ ಮಾಡುತ್ತಿದ್ದರೂ ಉಸಿರಾಟ ಸಾಧ್ಯವಾಗುತ್ತಿಲ್ಲ. ಡ್ಯಾಡಿ..ಬೈ ಡ್ಯಾಡಿ, ಎಲ್ಲರಿಗೂ ಬೈ….ಎಂದು ಯುವಕ ಮಲಗಿದ್ದಲ್ಲಿಂದಲೇ ಕಷ್ಟಪಟ್ಟು ಹೇಳುತ್ತ ವಿಡಿಯೋ ಮಾಡಿದ್ದಾನೆ. ನಂತರ ಅದನ್ನು ತನ್ನ ಪ್ರೀತಿಯ ತಂದೆಗೆ ಕಳಿಸಿ, ಜೀವ ಬಿಟ್ಟಿದ್ದಾನೆ.
ವಿಡಿಯೋ ನೋಡಿ ತುಂಬ ನೋವಾಯಿತು. ನನಗೆ ವಿಡಿಯೋ ಕಳಿಸಿದ ಮರು ಕ್ಷಣ ನನ್ನ ಮಗ ಇನ್ನಿಲ್ಲವಾದ. ಆತನ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಿದ್ದೇವೆ ಎಂದು ತಂದೆ ತಿಳಿಸಿದ್ದಾರೆ. ಇದನ್ನೂ ಓದಿ: ಬೇಳೆ ಸಂಸ್ಕರಣಾ ಯಂತ್ರದಲ್ಲಿ ಬಿದ್ದು ಛಿದ್ರವಾಯ್ತು ಮಹಿಳೆಯ ದೇಹ…
ನನ್ನ ಪುತ್ರನಿಗೆ ಜೂ.24ರಂದು ವಿಪರೀತ ಜ್ವರ ಬರಲು ಶುರುವಾಯಿತು. ಹಲವು ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಲು ಯತ್ನಿಸಿದೆವು. ಆದರೆ ಹಲವು ಆಸ್ಪತ್ರೆಗಳಲ್ಲಿ ಸ್ಥಳಾವಕಾಶವೇ ಇರಲಿಲ್ಲ. ಅದಾದ ನಂತರ ಒಂದು ಎದೆರೋಗ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಎರಡೇ ದಿನಕ್ಕೆ, ಅಂದರೆ ಜೂ.26ರಂದು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಯುವಕನಿಗೆ ಹಾಕಲಾಗಿದ್ದ ವೆಂಟಿಲೇಟರ್ನ್ನು ಆತ ಉಸಿರಾಡಲು ಕಷ್ಟ ಪಡುತ್ತಿದ್ದರೂ ತೆಗೆಯಲಾಯಿತು ಎಂಬ ಆರೋಪವನ್ನು ಆಸ್ಪತ್ರೆಯ ಸೂಪರಿಟೆಂಡೆಂಟ್ ಮೆಹಬೂಬ್ ಖಾನ್ ಅಲ್ಲಗಳೆದಿದ್ದಾರೆ.
ನಾವು ವೆಂಟಿಲೇಟರ್ ತೆಗೆಯಲಿಲ್ಲ. ರೋಗಿಯ ಸ್ಥಿತಿ ಅಷ್ಟು ಗಂಭೀರವಾಗಿತ್ತು. ಆಕ್ಸಿಜನ್ ಕೊಟ್ಟರೂ ಪ್ರಯೋಜನ ಆಗಿರಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್)
ಕರೊನಾ ಸೋಂಕಿನ 3 ಹೊಸ ಲಕ್ಷಣಗಳು ಪತ್ತೆ; ಎಚ್ಚರ… ನಿಮ್ಮಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ