More

  ಪರಿಷತ್ ಸಭಾಂಗಣದಲ್ಲಿ ಭಯದ ವಾತಾವರಣವಿತ್ತು; ರಾಜ್ಯಪಾಲರಿಗೆ ವರದಿ ಸಲ್ಲಿಸಲು ಸಭಾಪತಿ ತಯಾರಿ

  ಬೆಂಗಳೂರು: ಬೆಲ್ ಆಫ್ ಮಾಡಲು ವಿಧಾನಪರಿಷತ್ ಕಾರ್ಯದರ್ಶಿಗೆ ಸೂಚಿಸಿ, ದಂಡನಾಯಕರ ರಕ್ಷಣೆಯೊಂದಿಗೆ ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ-ಜಗ್ಗಾಟ ಮುಂದುವರಿದಿತ್ತು. ಜತೆಗೆ ಪೀಠದ ಸುತ್ತಲೂ ಸದಸ್ಯರು ಸುತ್ತುವರಿದು ಭಯದ ವಾತಾವರಣವಿತ್ತು ಎಂದು ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ, ತಾವು ತಯಾರಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

  ರಾಜ್ಯಪಾಲರಿಗೆ ಸಲ್ಲಿಸಲೆಂದು ಈ ವರದಿಯನ್ನು ಸಿದ್ಧಪಡಿಸಿ ಕೊಂಡಿದ್ದು, ಪರಿಷತ್ ಅಧಿವೇಶನದಲ್ಲಿ ಮಂಗಳವಾರ ನಡೆದ ಘಟನಾವಳಿ ವಿವರಿಸಿ, ಸದನ ಅನಿರ್ದಿಷ್ಟಾವಧಿಗೆ ಮುಂದೂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಪೀಠದಿಂದ ಎಲ್ಲ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೆ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ವನಿಸಿದೆ ಎಂದು ಹೇಳಿದ್ದಾರೆ. ದೃಶ್ಯಾವಳಿಗಳಿಂದ ಘಟನೆಯ ಎಲ್ಲ ಅಂಶಗಳನ್ನು ಖಾತ್ರಿ ಪಡಿಸಿಕೊಳ್ಳಬಹುದು ಎಂದು ವರದಿಯಲ್ಲಿ ರಾಜ್ಯಪಾಲರಿಗೆ ನಿವೇದಿಸಿಕೊಂಡಿದ್ದಾರೆ. ಅಲ್ಲದೆ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಅಧಿಸೂಚನೆಗೆ ಅನುಮೋದನೆ ನೀಡಿರುವುದಾಗಿ ಸಭಾಪತಿ ವಿವರಿಸಿದ್ದಾರೆ.

  ವೀಕ್ಷಣೆಯ ವಿವರಣೆ: ಕೋರಂ ಬೆಲ್ ಆಫ್ ಆಗುವ ಮುನ್ನವೇ ಸದನದಲ್ಲಿದ್ದ ಉಪಸಭಾಪತಿ ಏಕಾಏಕಿ ಯಾವುದೇ ಸೂಚನೆ ಇಲ್ಲದೆ ಸಭಾಪತಿ ಪೀಠ ಅಲಂಕರಿಸಿದರು. ತಕ್ಷಣ ಸದನದಲ್ಲಿದ್ದ ಎಲ್ಲ ಸದಸ್ಯರು ಸಭಾಪತಿ ಪೀಠವನ್ನು ಸುತ್ತುವರಿದರು. ತಳ್ಳಾಟ-ಕೂಗಾಟಗಳಿಂದ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಒಬ್ಬರಿಗೊಬ್ಬರು ಕಿರುಚಾಡುತ್ತಾ ಕೈ-ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯಿತು. ಕೆಲವು ಸದಸ್ಯರು ಒಂದು ಹಂತದಲ್ಲಿ ಪೀಠದ ಮುಂದೆ ಇದ್ದ ಗ್ಲಾಸ್, ಮೈಕ್ ಇತ್ಯಾದಿಗಳನ್ನು ಧ್ವಂಸಗೊಳಿಸುವ ಜತೆಗೆ ಪೀಠದ ಮುಂದಿದ್ದ ಎಲ್ಲ ದಾಖಲೆಗಳನ್ನು ಹರಿದು ಹಾಕುತ್ತಿದ್ದರು.

  ಕೆಲ ಸದಸ್ಯರು ಸಭಾಪತಿ ಪ್ರವೇಶಿಸುವ ಬಾಗಿಲನ್ನು ಒಳಗಡೆ ಯಿಂದ ಚಿಲಕ ಹಾಕಿಕೊಂಡರು. ಈ ಎಲ್ಲ ಅಂಶಗಳನ್ನು ನಾನು ನನ್ನ ಕಚೇರಿಯಲ್ಲಿದ್ದ ಟಿ.ವಿ. ಮೂಲಕ ವೀಕ್ಷಿಸುತ್ತಿದ್ದೆ ಎಂದು ಪ್ರತಾಪ್ ಚಂದ್ರ ಶೆಟ್ಟಿ ವರದಿಯಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಪತಿ ಅವರನ್ನು ಕೆಲವು ಸದಸ್ಯರು ಬಲವಂತವಾಗಿ ತೆರವುಗೊಳಿಸಿದ್ದನ್ನು ಗಮನಿಸಿದೆ. ತದನಂತರವೂ ಗದ್ದಲ ಮುಂದುವರಿದಿತ್ತು. ಈ ಹಂತದಲ್ಲಿ ಪರಿಷತ್ ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಕಚೇರಿಗೆ ಬಂದು ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು, ಸದನದಲ್ಲಿ ಅಧಿಕಾರಿಗಳಿಗೂ ಭಯದ ವಾತಾವರಣವಿದೆ ಎಂದು ತಿಳಿಸಿದ್ದನ್ನೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

  ಪ್ರತಾಪ್​ಚಂದ್ರ ಶೆಟ್ಟಿ ರಾಜೀನಾಮೆ?

  ಪರಿಷತ್ ಸಭಾಂಗಣದಲ್ಲಿ ಭಯದ ವಾತಾವರಣವಿತ್ತು; ರಾಜ್ಯಪಾಲರಿಗೆ ವರದಿ ಸಲ್ಲಿಸಲು ಸಭಾಪತಿ ತಯಾರಿ

  ಸಭಾಪತಿಗೆ ಬೆಂಬಲವಿಲ್ಲವೆಂದು ಜೆಡಿಎಸ್ ಸದಸ್ಯರು ತಿಳಿಸಿ, ಪರಿಷತ್ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಸಲ್ಲಿಸಿದ ಬಳಿಕ ಪ್ರತಾಪ್ ಚಂದ್ರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ. ಬಹುಮತವಿಲ್ಲದೆ ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂಬುದು ಅವರ ಚಿಂತನೆಗೆ ಕಾರಣ. ಆದರೆ ಕಾಂಗ್ರೆಸ್​ನ ಕೆಲವು ಹಿರಿಯ ನಾಯಕರು ಒತ್ತಡ ಹೇರಿ ತಡೆಯೊಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯದ ಪತ್ರ ಸಲ್ಲಿಸಿದಾಗಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಜೆಡಿಎಸ್ ಧೋರಣೆ ರಾಜ್ಯದ ಜನರಿಗೆ ಗೊತ್ತುಪಡಿಸುವ ರಾಜಕೀಯ ತಂತ್ರಗಾರಿಕೆ ಹೂಡಿದ್ದ ಕಾಂಗ್ರೆಸ್ ನಾಯಕರು, ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡದಂತೆ ನೋಡಿಕೊಂಡಿದ್ದರೆಂದು ಹೇಳಲಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts