More

    ಆಟವಾಡುವ ಅಂಗಳದಲ್ಲೇ ಗದ್ದೆ ಬೇಸಾಯ

    ಸುಳ್ಯ: ಸನಿಹದಲ್ಲೇ ಹಡಿಲು ಬಿದ್ದ ಗದ್ದೆಯಲ್ಲಿ ಪೈರು ಮೊಳಕೆಯೊಡೆಯುವ ಪರಿಯನ್ನು ವೀಕ್ಷಿಸಿದ ಬಳಿಕ ಚಿಣ್ಣರಿಗೆ ತಮಗೂ ಗದ್ದೆ ಬೇಸಾಯ ಮಾಡಬೇಕೆಂದು ಮನಸ್ಸಾಗಿದೆ. ಮನೆಗೆ ಬಂದು ಪಾಲಕರಲ್ಲಿ ಮನದ ಆಸೆ ಹೇಳಿದಾಗ ಅವರಿಂದಲೂ ಉತ್ತಮ ಸ್ಪಂದನೆ ದೊರಕಿದೆ. ಪರಿಣಾಮ ಇಲ್ಲಿ ಆಟವಾಡುವ ಅಂಗಳವೇ ಬೇಸಾಯದ ಗದ್ದೆಯಾಗಿ ಪರಿವರ್ತನೆಯಾಗಿದೆ.

    ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿ ಬಳಿಯ ಪಡ್ಪು ದಿನಕರ ಗೌಡ ಹಾಗೂ ಧನಂಜಯ ಗೌಡರ ಮನೆಯಂಗಳವೇ ಈ ರೀತಿ ಭತ್ತ ಬೆಳೆಯುವ ಪ್ರಾತ್ಯಕ್ಷಿಕೆಗಾಗಿ ಗದ್ದೆಯಾಗಿ ಬದಲಾವಣೆಗೊಂಡಿರುವುದು. ಕೆಲ ದಿನಗಳ ಹಿಂದೆ ಇಲ್ಲೇ ಸನಿಹದ ಪೆರ್ದೋಡಿ ಎಂಬಲ್ಲಿ ಹಡಿಲು ಬಿದ್ದ ಗದ್ದೆಯಲ್ಲಿ ಬೇಸಾಯ ಮಾಡುವ ಸೊಬಗನ್ನು ಈ ಮನೆಯ ಮಕ್ಕಳಾದ ಜನನಿ, ಪುಷ್ಪಿನ್, ಹವಿಸ್ಸ್ ಹಾಗೂ ಜಸ್ವಿನ್ ನೋಡಿದ್ದಾರೆ. ಮನೆಗೆ ಬಂದಾಗ ಮಕ್ಕಳ ಅಜ್ಜಿ ತಮ್ಮ ಮನೆಯಲ್ಲೂ ಅದೇ ರೀತಿ ಭತ್ತ ಬೆಳೆಯುವ ಗದ್ದೆ ಇದ್ದುದಾಗಿಯೂ, ಈಗ ಆ ಜಾಗದಲ್ಲಿ ಅಡಕೆ ಬೆಳೆ ಬಂದುದಾಗಿಯೂ ಹೇಳಿದ್ದಾರೆ. ಭತ್ತದ ಗದ್ದೆ, ನೇಜಿ ನೆಡುವ ಸೊಬಗು, ಪೈರು ಕಟಾವು ಮಾಡುವಾಗಿನ ಸಂತಸ, ಭತ್ತ ಅಕ್ಕಿಯಾಗಿ ಪರಿವರ್ತನೆಗೊಳ್ಳುವುದು… ಹೀಗೆ ಬೇಸಾಯದ ಪ್ರತಿ ಚಟುವಟಿಕೆಗಳನ್ನೂ ಮಕ್ಕಳ ಮುಂದೆ ಹೇಳಿದಾಗ ಮಕ್ಕಳು ಕುತೂಹಲಗೊಂಡು ಮತ್ತೆ ಬೇಸಾಯ ಮಾಡುವಂತಾದರೆ ಎಷ್ಟು ಚಂದ ಎಂಬ ಅಭಿಪ್ರಾಯ ಹೊರಗೆಡಹಿದ್ದಾರೆ.

    ಮಕ್ಕಳ ಇಚ್ಛೆಗೆ ತಣ್ಣೀರೆರಚಲು ಮನಸ್ಸಾಗದ ಅಜ್ಜಿ ಲಕ್ಷ್ಮೀ ಹಾಗೂ ಮನೆಮಂದಿ ಬೇಸಾಯ ಮಾಡಲು ಮನಸ್ಸು ಮಾಡಿದರು. ಆದರೆ ಇದ್ದ ಜಾಗದಲ್ಲಿ ಅಡಕೆ ಕೃಷಿ ಇದ್ದು ಬೇರೆಲ್ಲೂ ಖಾಲಿ ಜಾಗ ಇಲ್ಲದ ಕಾರಣ ಮನೆಯಂಗಳವನ್ನೇ ಬೇಸಾಯದ ಗದ್ದೆಯಾಗಿ ಪರಿವರ್ತನೆ ಮಾಡುವ ನಿರ್ಧಾರ ತೆಗೆದುಕೊಂಡರು. ಯೋಚನೆ ಮನಸ್ಸಿಗೆ ಬಂದದ್ದೇ ತಡ. ಮಕ್ಕಳು ಹಾರೆ ಪಿಕ್ಕಾಸು ಹಿಡಿದು ಆಡುವ ಅಂಗಳವನ್ನೇ ಅಗೆಯಲು ಮುಂದಾದರು. ಚಿಕ್ಕ ಮಕ್ಕಳ ಉತ್ಸಾಹ ನೋಡಿ ದೊಡ್ಡವರೂ ಜತೆಯಾಗಿ ಅಂಗಳ ಅಗೆದು ಗದ್ದೆಯಾಗಿಸಿದರು.
    ಸನಿಹದ ಪೆರ್ದೋಡಿಯಲ್ಲಿ ನಾಟಿ ಮಾಡಿ ಉಳಿದ ನೇಜಿಯನ್ನು ತಂದು ಮನೆಯಂಗಳದಲ್ಲೇ ನೆಟ್ಟ ಕಾರಣದಿಂದ ಈಗ ಮನೆ ಮುಂದೆ ಭತ್ತದ ಪೈರು ಎದ್ದು ನಿಂತಿದೆ. ಕೆಲದಿನಗಳ ಹಿಂದೆ ಜೋರು ಮಳೆ ಇದ್ದರೂ ನೇಜಿ ನೆಟ್ಟ ಬಳಿಕ ಮಳೆಯಾಗದೆ ಇರುವುದರಿಂದ ಈಗ ಪಂಪ್‌ನಲ್ಲಿ ನೀರು ಹಾಯಿಸಿ ಪೈರಿಗೆ ನೀರು ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಇದರಿಂದಾಗಿ ಮಳೆ ಇಲ್ಲದಿದ್ದರೆ ಬೆಳೆಯೂ ಬೆಳೆಯದು ಎಂದು ರೈತರ ಸಂಕಷ್ಟವನ್ನು ಮಕ್ಕಳಿಗೆ ತಿಳಿಸುವಲ್ಲಿ ಸಹಕಾರಿಯಾಗಿದೆ.

    ಅಕ್ಕಿ ಅಂಗಡಿಯಿಂದ ತರುವುದು ಎಂದು ಮಾತ್ರ ತಿಳಿದಿತ್ತು. ಆದರೆ ಅದು ಎಲ್ಲೋ ಬೆಳೆದ ಭತ್ತದಿಂದ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಈಗ ನಮ್ಮ ಮನೆಯ ಅಂಗಳದಲ್ಲೇ ಭತ್ತದ ಪೈರು ಇರುವುದರಿಂದ ತುಂಬಾ ಖುಷಿಯಾಗುತ್ತಿದೆ. ಪೈರಿನಲ್ಲಿ ತೆನೆ ಮೂಡಿ ಭತ್ತವಾಗುವುದನ್ನೇ ನಾವೀಗ ಕಾಯುತ್ತಿದ್ದೇವೆ.
    – ಜನನಿ, ಮೂರನೇ ತರಗತಿ ವಿದ್ಯಾರ್ಥಿನಿ

    ಭತ್ತ ಬೇಸಾಯ ಮಾಡುವ ಸೊಬಗನ್ನು ವಿವರಿಸಲು ಸಾಧ್ಯವೇ ಇಲ್ಲ. ಈ ಬಾರಿ ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಅಂಗಳದ ಅರ್ಧ ಭಾಗದಲ್ಲಿ ಮಾತ್ರ ನೇಜಿ ನೆಟ್ಟು ಬೇಸಾಯ ಮಾಡಿದ್ದೇವೆ. ಮುಂದಿನ ಬಾರಿ ಇಡೀ ಅಂಗಳದಲ್ಲಿ ಬೇಸಾಯ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ.
    – ಲಕ್ಷ್ಮೀ ಪಡ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts