More

    ಎಂಎಆರ್ ರಸ್ತೆಗೆ ಜಮೀನು ನೀಡಲು ಒಪ್ಪಿದ ರೈತರು

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಚಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಾದುಹೋಗುವ ಮುಖ್ಯ ಆರ್ಟಿರಿಯಲ್ ರಸ್ತೆಗೆ (ಎಂಎಆರ್) ಜಮೀನು ಬಿಟ್ಟುಕೊಡುವ ಸಂಬಂಧ ಎರಡು ಗ್ರಾಮಗಳ ರೈತರು ಪ್ರಾಧಿಕಾರದ ಆಯುಕ್ತರಿಗೆ ಭರವಸೆ ನೀಡಿದ್ದಾರೆ.

    ಈ ಸಂಬಂಧ ಮಂಗಳವಾರ ಬಡಾವಣೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಬಿಡಿಎ ಆಯುಕ್ತ ಎನ್.ಜಯರಾಮ್ ಅವರ ಬಳಿ ಕನ್ನಲ್ಲಿ ಹಾಗೂ ಕೆಂಚನಪುರ ಗ್ರಾಮದ ಕೆಲ ರೈತರು ಸ್ಥಳದಲ್ಲೇ ಚರ್ಚೆ ನಡೆಸಿ ಜಮೀನು ಬಿಟ್ಟುಕೊಡಲು ಒಪ್ಪಿದರು. ಇದಕ್ಕೆ ಪ್ರತಿಯಾಗಿ ಆಯುಕ್ತರು ಪರಿಹಾರವನ್ನು ಕಾಲಮಿತಿಯೊಳಗೆ ಒದಗಿಸುವ ವಾಗ್ದಾನ ನೀಡಿದರು.

    ಕನ್ನಲ್ಲಿ ಗ್ರಾಮದ ಸರ್ವೆ ನಂ. 100/1, 64/2 ಹಾಗೂ 67/1 ಮತ್ತು ಕೆಂಚನಪುರ ಗ್ರಾಮದ ಸರ್ವೆ ನಂ.17/1, 2, 3, 4 ಮತ್ತು 16/1ರ ಒಟ್ಟು 17 ಎಕರೆ ಜಮೀನು ಎಂಎಆರ್ ನಿರ್ಮಾಣಕ್ಕೆ ಭೂಮಾಲೀಕರು ಅಡ್ಡಿಪಡಿಸಿದ್ದರು. ಇದರಿಂದಾಗಿ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ವಿಚಾರವಾಗಿ ಇತ್ತೀಚಿಗೆ ಪ್ರಾಧಿಕಾರದ ಕಚೇರಿಯಲ್ಲಿ ರೈತರು ಆಯುಕ್ತರನರನು ಭೇಟಿಯಾಗಿ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಖುದ್ದು ಬಡಾವಣೆಗೆ ಭೇಟಿ ನೀಡಿ ಜಮೀನು ವ್ಯಾಜ್ಯವನ್ನು ಪರಿಹರಿಸುವಲ್ಲಿ ಯಶಸ್ವಿಯಾದರು.

    ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್ ಆಹ್ವಾನ:

    ಕೆಂಪೇಗೌಡ ಬಡಾವಣೆಯ 5, 6, 7ನೇ ಬ್ಲಾಕ್‌ಗಳಲ್ಲಿ 9 ಮೀ., 12 ಮೀ. ಹಾಗೂ 15 ಮೀ. ಅಗಲದ ರಸ್ತೆಗಳ ಡಾಂಬರೀಕರಣ ಮಾಡಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್ ಪ್ರಕ್ರಿಯೆ ಅನ್ವಯ ಶೀಘ್ರವಾಗಿ ಕಾಮಗಾರಿಗಳನ್ನು ಪ್ರಾರಂಭಿಸಿ ನಿವೇಶನದಾರರಿಗೆ ಅನುಕೂಲವಾಗುವಂತೆ ಎಲ್ಲ ಮೂಲಸೌಕರ್ಯ ಒದಗಿಸಲು ಅಧಿಕಾರಿ ವರ್ಗಕ್ಕೆ ಆಯುಕ್ತರು ಸೂಚಿಸಿದರು.

    ಈ ಸಂದರ್ಭದಲ್ಲಿ ಪ್ರಾಧಿಕಾರದ ಅಭಿಯಂತರ ಸದಸ್ಯ ಡಾ. ಶಾಂತರಾಜಣ್ಣ ಎಚ್.ಆರ್, ನಗರ ಯೋಜನೆ ಸದಸ್ಯ ಎಲ್. ಶಶಿಕುಮಾರ್, ಉಪ ಆಯುಕ್ತರಾದ ಡಾ. ಸೌಜನ್ಯ ಎ., ಆರಕ್ಷಕ ಅಧೀಕ್ಷಕ ನಂಜುಂಡೇಗೌಡ ಹಾಗೂ ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts