More

    ರೈತರ ಉದ್ಧಾರವೇ ಸರ್ಕಾರದ ಧ್ಯೇಯ

    ಬೆಳಗಾವಿ: ರೈತರನ್ನು ದಲ್ಲಾಳಿಗಳ ಕಪಿಮುಷ್ಠಿಯಿಂದ ಮುಕ್ತಗೊಳಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಿಸುವುದು ಮತ್ತು ಬೆಳೆಗಳಿಗೆ ನ್ಯಾಯಯುತ ಬೆಲೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿದೆ. ವದಂತಿಗೆ ಕಿವಿಗೊಟ್ಟು ಅನ್ನದಾತರು ಆತಂಕಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ತಾಲೂಕಿನ ಮಾರಿಹಾಳ ಗ್ರಾಮದ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬೆಳೆ ಬೆಳೆಯಲು ರೈತರು ಹಾಕಿದ ಶ್ರಮ ದಲ್ಲಾಳಿಗಳ ಪಾಲಾಗುತ್ತಿದೆ. ಎಪಿಎಂಸಿಗಳಲ್ಲಿ ರೈತರು ತಮ್ಮ ಬೆಳೆಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಬೆಲೆ ಇಲ್ಲದೆ ರೈತರು ಮೋಸ ಹೋಗಿದ್ದಾರೆ. ಆ ಪದ್ಧತಿ ತೆಗೆದು ಹಾಕಿ ರೈತರು ಬೆಳೆಗಳನ್ನು ಎಲ್ಲಿ ಬೇಕಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅವಕಾಶವನ್ನು ನೂತನ ಕೃಷಿ ಕಾಯ್ದೆಯಲ್ಲಿ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ರೈತನ ಆಸ್ತಿಯನ್ನು ಕಬಳಿಸುವ ಯಾವುದೇ ಅಂಶ ಕಾಯ್ದೆಯಲ್ಲಿ ಇಲ್ಲ. ಈ ಬಗ್ಗೆ ರೈತರಿಗೆ ತಪ್ಪು ಕಲ್ಪನೆ ಮೂಡಿಸುತ್ತಿರುವುದು ಸರಿಯಲ್ಲ. ಎಪಿಎಂಸಿಗಳನ್ನು ಮುಚ್ಚುವುದು ಮತ್ತು ಎಂಎಸ್‌ಪಿ ರದ್ದು ಮಾಡುವ ಯಾವುದೇ ಅಂಶಗಳು ಈ ಕಾನೂನಿನಲ್ಲಿ ಇಲ್ಲ. ಆದರೆ, ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ದೇಶ ಕಂಡ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಸತ್ಯದ ದಾರಿಯಲ್ಲಿ ಸಾಗಿಬಂದರು. ವಾಜಪೇಯಿ ಅವರ ಕಾಯಕಮಯ ಜೀವನ ನಮಗೆ ಆದರ್ಶವಾಗಿದೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಬೆಳಗಾವಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ರೈತರ ಸಂಕಷ್ಟಕ್ಕೆ ಸಹಕಾರಿಯಾಗಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 7ನೇ ಕಂತು ರೈತರ ಖಾತೆಗಳಿಗೆ ಜಮೆ ಆಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ರಾಜು ಚಿಕ್ಕನಗೌಡರ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಎಫ್.ಎಸ್.ಸಿದ್ದನಗೌಡರ, ಉಪಾಧ್ಯಕ್ಷ ಯುವರಾಜ ಜಾಧವ, ಡಾ.ಗುರು ಕೋತಿನ, ರಾಜು ದೇಸಾಯಿ, ಶಂಕರ ಜತ್ರಾಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts