More

    ನೆರೆ ಮಾಸುವ ಮುನ್ನವೇ ಮತ್ತೊಂದು ಆಘಾತ!

    ವಿಜಯವಾಣಿ ಸುದ್ದಿಜಾಲ ಸವಣೂರ

    ನಿರಂತರ ಮಳೆಯಿಂದ ರೈತರ ಹೊಲದಲ್ಲಿನ ಬೆಳೆ ಜಲಾವೃತವಾಗಿದ್ದು, ನೆರೆ ಹಾವಳಿಯಿಂದ ನಲುಗಿದ ರೈತರಿಗೆ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ ಎದುರಾದಂತಾಗಿದೆ.

    ತಾಲೂಕಿನ ಸವಣೂರ ಹಾಗೂ ಹತ್ತಿಮತ್ತೂರ ಹೋಬಳಿ ಪ್ರದೇಶಗಳಲ್ಲಿ ವಾಡಿಕೆಗಿಂತ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಫಸಲು ನೀಡುವ ಹಂತದಲ್ಲಿರುವ ಬೆಳೆಗಳು ಮೊಳಕೆಯೊಡೆಯಲಾರಂಭಿಸಿವೆ.

    ತಾಲೂಕಿನ ಜೆಕೀನಕಟ್ಟಿ, ಕಾರಡಗಿ, ಮಾದಾಪೂರ, ತವರಮೆಳ್ಳಿಹಳ್ಳಿ, ಹುರಳೀಕುಪ್ಪಿ, ಹತ್ತಿಮತ್ತೂರ, ಮಣ್ಣೂರ, ತೆಗ್ಗಿಹಳ್ಳಿ, ಗುಂಡೂರ, ಜಲ್ಲಾಪೂರ, ಕಡಕೋಳ, ಮೆಳ್ಳಾಗಟ್ಟಿ, ಮನ್ನಂಗಿ, ಹುರಳೀಕುಪ್ಪಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿವೆ.

    ತಾಲೂಕಿನಲ್ಲಿ ಒಟ್ಟು 42,873 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕೈಗೊಳ್ಳಲಾಗಿತ್ತು. ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ 160 ಹೆಕ್ಟೇರ್ ಗೋವಿನಜೋಳ, 1,161 ಹೆಕ್ಟೇರ್ ಶೇಂಗಾ, 108 ಹೆಕ್ಟೇರ್ ಸೋಯಾಬೀನ್, 3,890 ಹೆಕ್ಟೇರ್ ಹತ್ತಿ ಹಾಗೂ ಇತರ ಬೆಳೆಗಳು ಸೇರಿದಂತೆ ಅಂದಾಜು 5,319 ಹೆಕ್ಟೇರ್ ಭೂಮಿಯಲ್ಲಿನ ಬೆಳೆಗಳು ಸಂಪೂರ್ಣ ನಾಶವಾಗಿವೆ.

    ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಬೆಳೆ ಹಾನಿ ಸಮೀಕ್ಷೆ ಮುಂದುವರಿದಿದ್ದು, ಅಂತಿಮ ವರದಿಯಲ್ಲಿ ಹಾನಿ ಪ್ರಮಾಣ ತಿಳಿಯಲಿದೆ.

    ಇಲ್ಲಿಯವರೆಗೆ ಸವಣೂರ 153.90 ಮಿ.ಮೀ., ಯಲವಿಗಿ 107.80, ಕುಣಿಮೆಳ್ಳಿಹಳ್ಳಿ 93.60, ಹತ್ತಿಮತ್ತೂರ ಭಾಗದಲ್ಲಿ 48.20 ಮಳೆಯಾಗಿದೆ. ತಾಲೂಕಿನಲ್ಲಿ ವಾಡಿಕೆ ಮಳೆ 703 ಮಿ.ಮೀ. ಆದರೆ, ಇದುವರೆಗೆ 764.90 ಮಿ.ಮೀ. ಮಳೆಯಾಗಿದೆ.

    ಬಾಯಿಗೆ ಬಾರದ ತುತ್ತು: ಶೇಂಗಾ ಬೆಳೆಯನ್ನು ರೈತರು ಕಿತ್ತು ಹಾಕಿದ್ದರು. ಬಿಸಿಲಿದ್ದರೆ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಿದ್ದರು. ಆದರೆ, ನಿರಂತರ ಮಳೆಯಿಂದ ಹೊಲದಲ್ಲಿ ಕಿತ್ತು ಹಾಕಿರುವ ಶೇಂಗಾ ನೀರು ಪಾಲಾಗಿ ಕೊಳೆಯಲಾರಂಭಿಸಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನು ಹತ್ತಿ ಬೆಳೆ ನಿರಂತರ ಮಳೆಗೆ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಮಳೆ ಹೀಗೆ ಮುಂದುವರಿದರೆ ರೈತರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಲಿದೆ.

    2.14 ಎಕರೆ ಶೇಂಗಾ ಬೆಳೆಯಲು 50 ಸಾವಿರ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿತ್ತು. ಕಿತ್ತು ಹಾಕಿರುವ ಶೇಂಗಾ ಕೊಳೆತು ಹೋಗುತ್ತಿದೆ. ಪರಿಹಾರಕ್ಕೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಬೇಕು.

    | ಮುದಕನಗೌಡ ನಿಂಗನಗೌಡ್ರ, ಅರಳಿಹಳ್ಳಿ ರೈತ

    ಬೆಳೆ ಹಾನಿ ಕುರಿತು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮುಂದುವರಿದಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಂದ ಬೆಳೆ ಹಾನಿ ಕುರಿತ ಅರ್ಜಿ ಸ್ವೀಕರಿಸಲಾಗುತ್ತಿದೆ. ಅಕ್ಟೋಬರ್ 24ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ರೈತರು ಮುಂಜಾಗ್ರತೆ ವಹಿಸಬೇಕು.

    | ಬಸವನಗೌಡ ಪಾಟೀಲ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts