More

    ಖರೀದಿ ವಿಳಂಬಕ್ಕೆ ರೈತರು ಹೈರಾಣ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ನಗರದ ಎಪಿಎಂಸಿಯಲ್ಲಿ ಧಾರವಾಡ ಎಡಿಎಂ ಅಗ್ರೋ ಇಂಡಸ್ಟ್ರೀಜ್ ಇಂಡಿಯಾ ಲಿ. ಕಂಪನಿ ಆರಂಭಿಸಿರುವ ಖರೀದಿ ಕೇಂದ್ರದಲ್ಲಿ ಸೋಯಾಬೀನ್ ಖರೀದಿಗೆ ಹಿಂದೇಟು ಹಾಕಿದ್ದರಿಂದ ರೈತರು ಪರದಾಡುವಂತಾಯಿತು.

    ಕಳೆದ ಮೂರ್ನಾಲ್ಕು ದಿನಗಳಿಂದ ಸೋಯಾಬೀನ್ ದರದಲ್ಲಿ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ರೈತರು ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಅನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ, ಎಡಿಎಂ ಖರೀದಿ ಕೇಂದ್ರದ ಸಿಬ್ಬಂದಿ ಲಾರಿಗಳ ಕೊರತೆಯ ನೆಪ ಹೇಳಿ ಖರೀದಿಗೆ ಮುಂದಾಗಿಲ್ಲ. ಇದರಿಂದ ಟ್ರ್ಯಾಕ್ಟರ್​ಗಳನ್ನು ಬಾಡಿಗೆ ಮಾಡಿಕೊಂಡು ಫಸಲು ತಂದಿದ್ದ ರೈತರು ಕಂಗಾಲಾದರು.

    ಕೆಲ ರೈತರು ಫಸಲಿನೊಂದಿಗೆ ಮನೆಗೆ ಮರಳಿದರು. ಇನ್ನೂ ಕೆಲವರು ಟ್ರ್ಯಾಕ್ಟರ್​ಗಳಿಗೆ ದಿನದ ಬಾಡಿಗೆ ನೀಡಿ ಖರೀದಿ ಮಾಡಬಹುದು ಎಂಬ ಆಸೆಯಿಂದ ಅಲ್ಲೇ ನಿಂತರು. ‘ಸೋಮವಾರವೇ ಬಂದಿದ್ದೇವೆ. ಇಂದಾದರೂ ಖರೀದಿ ಮಾಡಿ ನಮ್ಮ ಚೀಲಗಳನ್ನು ಇಳಿಸಿಕೊಳ್ಳಿ’ ಎಂದು ರೈತರು ಅಂಗಲಾಚಿದರೂ ಖರೀದಿ ಕೇಂದ್ರದ ಸಿಬ್ಬಂದಿ ಕ್ಯಾರೇ ಎನ್ನಲಿಲ್ಲ. ‘ಲಾರಿ ಬಂದ ನಂತರವಷ್ಟೆ ಖರೀದಿ ಮಾಡುತ್ತೇವೆ’ ಸಬೂಬು ಹೇಳಿ ರೈತರನ್ನೇ ದಬಾಯಿಸಿದರು. ಇದರಿಂದ ಕಂಗಾಲಾದ ರೈತರು ‘ಮರಳಿ ಊರಿಗೆ ಒಯ್ದರೂ ನಷ್ಟ, ಇಲ್ಲಿಯೇ ಇದ್ದರೂ ನಷ್ಟ ನಮ್ಮ ಗೋಳು ಕೇಳುವವರು ಯಾರು’ ಎಂದು ಅಳಲು ತೋಡಿಕೊಂಡು ಸುಮ್ಮನೇ ಖರೀದಿ ಕೇಂದ್ರದ ಎದುರು ಕುಳಿತುಕೊಳ್ಳುವಂತಾಯಿತು.

    ಎಪಿಎಂಸಿ ನಿರ್ಲಕ್ಷ್ಯ ಎಡಿಎಂ ಖರೀದಿ ಕೇಂದ್ರದ ಕೂಗಳತೆಯ ದೂರದಲ್ಲಿಯೇ ಎಪಿಎಂಸಿ ಕಚೇರಿ ಇದೆ. ಆದರೆ, ಅಲ್ಲಿನ ಯಾವೊಬ್ಬ ಸಿಬ್ಬಂದಿಗೂ ರೈತರ ಗೋಳು ಕೇಳಲಿಲ್ಲ. ಎರಡು ದಿನಗಳಲ್ಲಿ ಹತ್ತಾರು ಟ್ರ್ಯಾಕ್ಟರ್​ಗಳು ಸೋಯಾಬೀನ್ ಚೀಲಗಳನ್ನು ಹೇರಿಕೊಂಡು ನಿಂತಿದ್ದರೂ ಇತ್ತ ಕಡೆ ಬಂದಿಲ್ಲ. ಇದರಿಂದ ನೊಂದ ಕೆಲ ರೈತರು ಮಾಧ್ಯಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಮಾಧ್ಯಮದವರು ಹೋಗಿ ರೈತರ ಸಮಸ್ಯೆ ವಿಚಾರಿಸಿದಾಗ ಖರೀದಿ ಕೇಂದ್ರದ ಸಿಬ್ಬಂದಿ ಪ್ರದೀಪ, ‘ನಾವು ಹಲವು ವರ್ಷದಿಂದ ಇಲ್ಲಿ ಖರೀದಿ ಮಾಡುತ್ತಿದ್ದೇವೆ. ಸೋಮವಾರ ಜಾತ್ರೆಯಿದ್ದುದರಿಂದ ಲಾರಿಗಳು ಸಿಕ್ಕಿಲ್ಲ. ಲಾರಿಗಳು ಸಿಕ್ಕ ನಂತರ ಖರೀದಿ ಮಾಡುತ್ತೇವೆ’ ಎಂದರು. ಆಗ ರೈತರು ‘ನಿಮ್ಮ ಲಾರಿ ಬರುವವರೆಗೆ ನಾವು ತಂದ ಟ್ರ್ಯಾಕ್ಟರ್​ಗಳ ಬಾಡಿಗೆ ಯಾರು ಕೊಡಬೇಕು? ಮೊದಲೇ ದರವೂ ಕುಸಿದಿದೆ. ಅದರ ಜೊತೆಗೆ ಇದೊಂದು ನಷ್ಟ ನಮಗೆ ಬೀಳಲಿದೆ. ಕೂಡಲೆ ಖರೀದಿ ಮಾಡಿ ಗೋದಾಮುಗಳಲ್ಲಿ ಇಳಿಸಿಕೊಳ್ಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಸಿಬ್ಬಂದಿ ಕ್ಯಾರೇ ಎನ್ನಲಿಲ್ಲ.

    ನಂತರ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಸಿಬ್ಬಂದಿ ಛತ್ರದಮಠ, ‘ಕೂಡಲೆ ಲಾರಿ ತರಿಸಿ ರೈತರ ಉತ್ಪನ್ನ ಖರೀದಿಸಬೇಕು. ಇನ್ನೊಮ್ಮೆ ಈ ರೀತಿಯ ಘಟನೆಗಳು ನಡೆಯಬಾರದು’ ಎಂದು ಎಚ್ಚರಿಕೆ ಕೊಟ್ಟರು. ನಂತರ ಲಾರಿಯನ್ನು ಕರೆಸಿ ಸೋಯಾಬೀನ್ ಖರೀದಿ ಆರಂಭಿಸಲಾಯಿತು.

    ಹಮಾಲಿ ಉಳಿಸಲು ಈ ಐಡಿಯಾ: ಎಡಿಎಂ ಖರೀದಿ ಕೇಂದ್ರದವರಿಗೆ ಎಪಿಎಂಸಿಯಿಂದ ಖರೀದಿಸಿದ ಉತ್ಪನ್ನ ಸಂಗ್ರಹಕ್ಕೆ ಗೋದಾಮುಗಳನ್ನು ನೀಡಲಾಗುತ್ತಿದೆ. ಗೋದಾಮುಗಳಲ್ಲಿ ಇಳಿಸಿ ಮತ್ತೆ ಲಾರಿಗಳಿಗೆ ಲೋಡ್ ಮಾಡಲು ಡಬಲ್ ಹಮಾಲಿ ಕೊಡಬೇಕಾಗುವುದು ಎಂಬ ಉದ್ದೇಶದಿಂದ ಈ ರೀತಿ ನಾಟಕವಾಡಲಾಗುತ್ತಿದೆ. ರೈತರ ನೆರವಿಗೆ ಬರಬೇಕಿದ್ದ ಎಪಿಎಂಸಿ ಆಡಳಿತ ಮಂಡಳಿ ಇಲ್ಲಿ ಇದ್ದು ಸತ್ತಂತಿದೆ ಎಂದು ರೈತರು ದೂರಿದರು.

    ನಾನು ಇಂದು ಅನ್ಯ ಕಾರ್ಯದಲ್ಲಿದ್ದೇನೆ. ಕಚೇರಿಗೆ ಬಂದಿಲ್ಲ. ನಮ್ಮ ಸಿಬ್ಬಂದಿ ಕಳಿಸಿ ಖರೀದಿ ಕೇಂದ್ರದವರಿಗೆ ಇಂದೇ ಖರೀದಿಸಲು ತಾಕೀತು ಮಾಡಿಸಿದ್ದೇನೆ. ರೈತರ ಉತ್ಪನ್ನವನ್ನು ಸಂಗ್ರಹಿಸಲು ಗೋದಾಮುಗಳ ಸೌಲಭ್ಯ ನಮ್ಮಲ್ಲಿದ್ದು, ಅವುಗಳನ್ನು ಒದಗಿಸುತ್ತೇವೆ. ಇನ್ನೊಮ್ಮೆ ಈ ರೀತಿಯ ಸಮಸ್ಯೆಯಾಗದಂತೆ ಖರೀದಿ ಕೇಂದ್ರದವರನ್ನು ಎಚ್ಚರಿಸುತ್ತೇವೆ.

    | ಮನೋಹರ ರ್ಬಾ ಎಪಿಎಂಸಿ ಉಪಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts