More

    ಕೃಷಿ ಇಲಾಖೆಗೆ ರೈತರ ಮುತ್ತಿಗೆ

    ಶಿಗ್ಗಾಂವಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಂಕಾಪುರ ಹೋಬಳಿಯ ರೈತರು ಸೋಮವಾರ ಶಿಗ್ಗಾಂವಿಯ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಬಂಕಾಪುರ ರೈತ ಸಂಪರ್ಕ ಕೇಂದ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ರೈತರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕೇಂದ್ರದಲ್ಲಿ ಕೆಲಸ ಮಾಡುವ ಅನುವುಗಾರರನ್ನು ಕೆಲಸದಿಂದ ವಜಾಗೊಳಿಸಿ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕು. ಶಿಗ್ಗಾಂವಿ ರೈತ ಸಂಪರ್ಕ ಕೇಂದ್ರಕ್ಕೆ ನೇಮಕವಾದ ಸಹಾಯಕ ಅಧಿಕಾರಿ ಅರುಣಕುಮಾರ್ ಅವರನ್ನು ಮತ್ತೆ ಬಂಕಾಪುರ ಕೇಂದ್ರಕ್ಕೆ ನೇಮಕ ಮಾಡಬೇಕು. ಬೆಳೆ ಹಾನಿಯ ಪರಿಹಾರ ಹಣವನ್ನು ಮಂಜೂರು ಮಾಡಬೇಕು. ಬೆಳೆ ವಿಮೆ ಹಣವನ್ನು ವಿತರಿಸಬೇಕು. ಕೃಷಿ ಇಲಾಖೆಯ ರೈತ ಪರ ಯೋಜನೆಗಳನ್ನು ಅನುವುಗಾರರ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಸಭೆ ಮೂಲಕ ಮಾಹಿತಿ ನೀಡಬೇಕು. ಸಬ್ಸಿಡಿ ದರದಲ್ಲಿ ರೈತರಿಗೆ ಗುಣಮಟ್ಟದ ತುಂತುರು ನೀರಾವರಿಯ ಸ್ಪಿಂಕ್ಲರ್ ಸೆಟ್, ತಾಡಪತ್ರಿ ಮತ್ತು ಔಷಧ ಸಿಂಪರಣೆಯ ಪವರ್ ಸ್ಪ್ರೇ ಪಂಪುಗಳನ್ನು ವಿತರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ನಿರ್ದೇಶಕ ಮಂಜುನಾಥ ಹಾವೇರಿ, ಜಿಲ್ಲೆಗೆ ಸುಮಾರು 12 ಕೋಟಿ ರೂ. ಗಳ ಬೆಳೆ ಪರಿಹಾರ ಹಣ ಮಂಜೂರಾಗಿದೆ. ಜುಲೈ ತಿಂಗಳಿನಿಂದ ಆಗಸ್ಟ್ 12ರವರೆಗೆ ಮೊದಲನೇ ಹಂತದ ಸರ್ವೆಯಲ್ಲಿ 60,122 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದ್ದು, ಈಗಾಗಲೇ 42 ಸಾವಿರ ಹೆಕ್ಟೇರ್ ಭೂಮಿ ಪರಿಹಾರಕ್ಕೆ ದಾಖಲಾಗಿದೆ. ಉಳಿದ 18 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಹಾನಿಗೊಳಗಾದ ಭೂಮಿಯನ್ನು ದಾಖಲು ಮಾಡುವ ಕೆಲಸ ಪೂರ್ಣಗೊಳಿಸಿ, ಎರಡು-ಮೂರು ದಿನಗಳಲ್ಲಿ ಮೊದಲ ಕಂತಿನ ಬೆಳೆ ಹಾನಿಯ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ಹಾನಿಯಾದ 33 ಸಾವಿರ ಹೆಕ್ಟೇರ್ ಕೃಷಿ ಭೂಮಿಯ ಡೇಟಾ ಎಂಟ್ರಿ ಮಾಡುವ ಕಾರ್ಯ ನಡೆದಿದೆ ಎಂದರು.

    ಸಮರ್ಪಕ ಸೇವೆಗೆ ತುರ್ತು ಕ್ರಮ

    ಕೇಂದ್ರ ಸರ್ಕಾರದಿಂದ ನೀಡುತ್ತಿದ್ದ ಮಳೆಯಾಶ್ರಿತ ಬೆಳೆ ಪರಿಹಾರ ಧನ ಪ್ರತಿ ಹೆಕ್ಟೇರ್​ಗೆ 6,800 ರೂ. ಬದಲಾಗಿ 13,600 ರೂ., ನೀರಾವರಿ ಬೆಳೆ ಪರಿಹಾರ ಧನ 13,500 ರೂ ಬದಲಾಗಿ 25 ಸಾವಿರ ರೂ. ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿಸಿದ್ದಾರೆ. ಅತಿ ಶೀಘ್ರದಲ್ಲಿಯೇ ಹಂತ ಹಂತವಾಗಿ ರೈತರ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಲಾಗುವುದು. ಉಳಿದಂತೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ರೈತರಿಗೆ ಸಮರ್ಪಕ ಸೇವೆ ನೀಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ನಿರ್ದೇಶಕ ಮಂಜುನಾಥ ಹಾವೇರಿ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts