More

    ರೈತರಿಗೆ ದರ ಏರಿಕೆ ಹೊರೆ

    ಬೆಳಗಾವಿ: ಕರೊನಾ ಮಹಾಮಾರಿ ತಂದಿಟ್ಟ ಸಮಸ್ಯೆಗಳನ್ನು ಎದುರಿಸಲಾಗದೆ ಏದುಸಿರು ಬಿಡುತ್ತಿರುವ ರೈತ ಸಮುದಾಯ ಈಗ ಬಿತ್ತನೆ ಬೀಜದ ದರ ಏರಿಕೆಯಿಂದ ಮತ್ತಷ್ಟು ಚಿಂತೆಗೀಡಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಅಕ್ಷರಶಃ ನಲುಗಿ ಹೋಗಿರುವ ರೈತರು, ಮುಂಗಾರು ಹಂಗಾಮು ಆರಂಭಿಸುವ ಹುರುಪಿನಲ್ಲಿರುವಾಗ ಬಿತ್ತನೆ ಬೀಜಗಳ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ದಿಢೀರ್ ಏರಿಕೆ: ಮುಂಗಾರು ಹಂಗಾಮಿನ ಪೂರ್ವದಲ್ಲಿ ಮಳೆ ಆಗುತ್ತಿದ್ದಂತೆ ರೈತರು ಬಿತ್ತನೆಗೆ ಭೂಮಿ ಹದಗೊಳಿಸುತ್ತಿದ್ದಾರೆ. ಲಾಕ್‌ಡೌನ್ ಇದ್ದರೂ ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಗ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಇನ್ನಷ್ಟು ವೇಗ ಪಡೆದುಕೊಂಡಿವೆ.

    ಈ ಮಧ್ಯೆ ಬಿತ್ತನೆಗಾಗಿ ಬೀಜ ಖರೀದಿಸಲು ಹೋದರೆ ದಿಢೀರ್ ಏರಿಕೆಯಾಗಿರುವ ಬೆಲೆ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೆ, ಸರ್ಕಾರ ಸಬ್ಸಿಡಿ ದರದಲ್ಲಿ ನೀಡುವ ಸೂರ್ಯಕಾಂತಿ ಬೀಜಕ್ಕೆ ಕೆಜಿಗೆ 393 ರೂ.,( ಮೂಲ ದರ 475), ಸಜ್ಜೆ ಕೆಜಿಗೆ 220 ರೂ., (ಮೂಲ ದರ 275) ಮೆಕ್ಕೆಜೋಳ ಕೆಜಿಗೆ 245 ರೂ. (ಮೂಲ ದರ 255) ಏರಿಕೆ ಕಂಡಿದೆ. ಬೇಡಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ದರದಲ್ಲಿ ಶೇಂಗಾ ಬಿತ್ತನೆ ಬೀಜ ಸಿಗುತ್ತಿಲ್ಲ. ಸರ್ಕಾರ ಸಬ್ಸಿಡಿಯಡಿ ನೀಡುವ ಬೀಜಗಳ ದರವೇ ಹೆಚ್ಚಾಗಿರುವುದು ಸಣ್ಣ ಮತ್ತು ಮಧ್ಯಮ ರೈತರಿಗೆ ಸಮಸ್ಯೆ ತಂದಿಟ್ಟಿದ್ದು, ಖರೀದಿಸಲು ಯೋಚಿಸುವಂತಾಗಿದೆ.

    6.88ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ

    ಮುಂಗಾರು ಹಂಗಾಮಿನ ಬಿತ್ತನೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ನೀರಾವರಿ-319435 ಹೆಕ್ಟೇರ್, ಮಳೆ ಆಶ್ರಿತ -363565 ಹೆಕ್ಟೇರ್ ಸೇರಿ ಒಟ್ಟು 6.88ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಈ ಪೈಕಿ 52 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 31.40 ಹೆಕ್ಟೇರ್‌ನಲ್ಲಿ ಹೆಸರು, 34.07ಹೆಕ್ಟೇರ್ ನಲ್ಲಿ ಶೇಂಗಾ, 36.25 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 94 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 50 ಸಾವಿರ ಹೆಕ್ಟೇರ್ ಸಜ್ಜೆ , ಹಾಗೂ 98.99 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ ಸೇರಿ ಇನ್ನುಳಿದ ಪ್ರದೇಶಗಳಲ್ಲಿ ವಿವಿಧ ಬೀಜ ಬಿತ್ತನೆಯಾಗಲಿದೆ. ಈ ಭಾರಿ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭತ್ತ, ರಾಗಿ, ಸಜ್ಜೆ, ತೃಣ ಧಾನ್ಯಗಳು, ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಸುಮಾರು 80,225 ಕ್ವಿಂಟಾಲ್ ಬಿತ್ತನೆ ಬೀಜಗಳ
    ಅವಶ್ಯಕತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮುಂಗಾರು ಹಂಗಾಮಿನ ಬಿತ್ತನೆಗೆ ಬೇಡಿಕೆ ತಕ್ಕಂತೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಸಾಮಾನ್ಯ ರೈತರಿಗೆ ಶೇ.50ರಷ್ಟು ರಿಯಾಯಿತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ ಶೇ.75ರಷ್ಟು ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. ಶೇಂಗಾ ಬಿತ್ತನೆ ಬೀಜಕ್ಕೆ ಬೇಡಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಂಗ್ರಹ ಮಾಡಿಕೊಂಡಿಲ್ಲ. ಅಗತ್ಯ ಬಿದ್ದರೆ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲಾಗುವುದು.
    | ಜೆಲಾನಿ ಎಚ್. ಮೊಖಾಶಿ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts