More

    ಅಧಿವೇಶನದಲ್ಲಿ ರೈತರ ಸಮಸ್ಯೆ ಚರ್ಚೆ

    ರಟ್ಟಿಹಳ್ಳಿ: ಶಿಕಾರಿಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೈತರ ವಿರೋಧವಿಲ್ಲ. ಆದರೆ, ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡಬೇಕು. ಈ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಅಧಿವೇಶನದಲ್ಲಿ ಗಂಭೀರವಾಗಿ ರ್ಚಚಿಸಿ, ರೈತರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.

    ಪಟ್ಟಣದ ಭಗತ್​ಸಿಂಗ್ ವೃತ್ತದಲ್ಲಿ ಶಿಕಾರಿಪುರ ನೀರಾವರಿ ಯೋಜನೆ ವಿರೋಧಿಸಿ ಮತ್ತು ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹಿರಿಯ ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಕೈಗೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

    ಶಿಕಾರಿಪುರ ತಾಲೂಕಿನಲ್ಲಿ ಈ ನೀರಾವರಿ ಯೋಜನೆಗೆ ಹೇಗೆ ರಸ್ತೆ ಬದಿಯಲ್ಲಿ ಪೈಪ್​ಲೈನ್ ಕಾಮಗಾರಿ ಮಾಡಲಾಗುತ್ತಿದೆಯೋ, ಅದೇ ರೀತಿ ರಟ್ಟಿಹಳ್ಳಿ ತಾಲೂಕಿನಲ್ಲಿ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳದೇ ರಸ್ತೆಯ ಬದಿ ಪೈಪ್​ಲೈನ್ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೆ ನೀಡಬೇಕಾದ ಪರಿಹಾರ ಹಣವು ಸರ್ಕಾರಕ್ಕೆ ಉಳಿತಾಯವಾಗುತ್ತದೆ. ರೈತರಿಗೂ ಅನ್ಯಾಯವಾಗುವುದಿಲ್ಲ. ರೈತರಿಗೆ ಭೂಮಿ ಎಂಬುವುದು ತಾಯಿ ಇದ್ದಂತೆ. ಈ ಭೂಮಿಯನ್ನು ಸರ್ಕಾರ ಕಸಿದುಕೊಳ್ಳಬಾರದು. ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

    ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ

    ರೈತರ ಭೂಮಿಯನ್ನು ಅಕ್ರಮವಾಗಿ, ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ದಾಖಲಿಸುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

    ಈ ಕುರಿತು ಪ್ರತಿಕ್ರಿಯಿಸಿದ ಎಸ್.ಆರ್. ಪಾಟೀಲ, ರೈತರು ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದರೆ ತಕ್ಷಣವೇ ದಾಖಲಿಸಿಕೊಂಡು, ಸಮಗ್ರ ತನಿಖೆ ನಡೆಸಬೇಕು. ಯಾವುದೇ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬಾರದು. ಜನಸಾಮಾನ್ಯರಿಗೆ ಮೊದಲು ರಕ್ಷಣೆ ನೀಡುವುದು ನಿಮ್ಮ ಕರ್ತವ್ಯ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದರೆ, ನಾಳೆ ನೀವು ಮನೆಗೆ ಹೋಗಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದರು. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರವಾಣಿಯಲ್ಲಿ ಮಾತನಾಡಿದರು. ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಈ ಕುರಿತು ಸದನದಲ್ಲಿ ರ್ಚಚಿಸುವೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

    ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಯೂನಸ್ ಸವಣೂರ, ಎಸ್.ಕೆ. ಕರಿಯಣ್ಣವರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ವಿನಯ ಪಾಟೀಲ, ವೀರನಗೌಡ ಪ್ಯಾಟಿಗೌಡ್ರ, ಮಾಲತೇಶಯ್ಯ ಪಾಟೀಲ, ಕಪಿಲದೇವ ಪೂಜಾರ, ಉಜಿನೆಪ್ಪ ಕೋಡಿಹಳ್ಳಿ ಇತರರಿದ್ದರು.

    ಹಿರೇಮಠ ಆರೋಗ್ಯದಲ್ಲಿ ವ್ಯತ್ಯಾಸ

    13 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರ ಆರೋಗ್ಯದಲ್ಲಿ ದಿನೇ ದಿನೆ ವ್ಯತ್ಯಾಸ ಕಂಡುಬರುತ್ತಿದೆ. ತಾಲೂಕು ವೈದ್ಯಾಧಿಕಾರಿ ಜೆಡ್.ಆರ್. ಮಕಾಂದರ ಅವರು, ಬಿ.ಡಿ. ಹಿರೇಮಠ ಅವರ ರಕ್ತ ಪರೀಕ್ಷೆ ಮತ್ತು ಆರೋಗ್ಯ ತಪಾಸಣೆ ಮಾಡಿದ್ದಾರೆ. ಬಿ.ಡಿ. ಹಿರೇಮಠ ಅವರಿಗೆ ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ. ಆದರೆ, ಅವರು ಈ ಸಲಹೆ ನಿರಾಕರಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಜೆಡ್.ಆರ್. ಮಕಾಂದರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts