More

    ಫಸಲ್ ಬಿಮಾದತ್ತ ರೈತರ ಚಿತ್ತ

    ಕುಮಟಾ: ಭತ್ತ ಬೆಳೆಯುವ ರೈತರಿಗಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಲ್ಲಿದ್ದರೂ ತಾಲೂಕಿನ ರೈತರು ಬಹು ವಿಧದ ಬೆಳೆ ಬೆಳೆದು ಹಾನಿ ಅನುಭವಿಸುತ್ತಿರುವುದರಿಂದ ವಿಮೆ ಮಾಡಿಸುವ ವಿಷಯದಲ್ಲಿ ಈಗೀಗ ಆಸಕ್ತಿ ತೋರುತ್ತಿದ್ದಾರೆ.

    ತಾಲೂಕಿನಲ್ಲಿ 5400 ಹೆಕ್ಟೇರ್​ಗೂ ಹೆಚ್ಚು ಭತ್ತ ಬೇಸಾಯವಿದೆ. ಇದರಲ್ಲಿ 60 ಹೆಕ್ಟೇರ್​ನಷ್ಟು ಮುಂಗಾರು ನೇರ ಬಿತ್ತನೆಯಾದರೆ ಉಳಿದಿದ್ದೆಲ್ಲವೂ ನಾಟಿ ಮೂಲಕ. ಗಜನಿ ಹಾಗೂ ಹಿನ್ನೀರು ಪ್ರದೇಶದಲ್ಲಿ 200 ಹೆಕ್ಟೇರ್​ನಷ್ಟು ಕಗ್ಗ ಬೇಸಾಯವಿದೆಯಾದರೂ ಲಾಭದ ಲೆಕ್ಕಾಚಾರದಲ್ಲಿ ನಡೆಯುವಂಥದ್ದಲ್ಲ. ಕಳೆದ ಕೆಲ ವರ್ಷಗಳಿಂದ ತಾಲೂಕಿನಲ್ಲಿ ಭತ್ತ ಬೆಳೆಗೆ ರೋಗಬಾಧೆ ತೀರ ಕಡಿಮೆ. ಆದರೆ, ಪ್ರತಿವರ್ಷ ಸರಾಸರಿ 1000 ಹೆಕ್ಟೇರ್​ಗೂ ಹೆಚ್ಚು ಭತ್ತದ ಗದ್ದೆಗಳು ಅತಿವೃಷ್ಟಿ-ಪ್ರವಾಹ ಹಾಗೂ ಸೂಕ್ತ ಸಮಯದಲ್ಲಿ ಮಳೆಯ ಅಭಾವದಿಂದಲೋ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆ ರೈತರ ಪಾಲಿಗೆ ಆಪದ್ಬಾಂಧವನಂತಾದರೂ ಚಿಕ್ಕ ಹಿಡುವಳಿದಾರರಾದ ಇಲ್ಲಿನ ರೈತ ಸಮುದಾಯದಲ್ಲಿ ಇನ್ನಷ್ಟೇ ಜಾಗೃತಿ ಮೂಡಬೇಕಾಗಿದೆ. ಆದರೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಪಡೆದವರಿಗೆ ಬೆಳೆ ಹಾನಿಗೆ ಸ್ವಲ್ಪವಾದರೂ ಸಮಾಧಾನಕರ ಮೊತ್ತ ಕೈಗೆಟುಕಿದೆ. ಕಳೆದ ವರ್ಷ ವಿಮೆ ಮಾಡಿಸಿದ ತಾಲೂಕಿನ ಕಾಗಾಲ, ಹೊಲನಗದ್ದೆ, ದಿವಗಿ, ಬಾಡ, ಕಲಭಾಗ, ಕಲ್ಲಬ್ಬೆ, ಮಿರ್ಜಾನ ಹಾಗೂ ಮೂರೂರು ಹೀಗೆ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭತ್ತ ಬೆಳೆದ ರೈತರಿಗೆ ಒಟ್ಟು 3,17,427 ರೂ. ಹಾನಿ ಪರಿಹಾರ ದೊರೆತಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಭತ್ತ ಬೆಳೆಯುವ ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಪ್ರಾರಂಭವಾಗಿದೆ. ಬಜಾಜ್ ಅಲಯನ್ಸ್ ಕಂಪನಿಯು ಹಿಂದಿನ ಬಾರಿಯಂತೆ ಈ ಬಾರಿಯು ಉತ್ತರಕನ್ನಡದಲ್ಲಿ ಈ ವಿಮೆಯ ಜವಾಬ್ದಾರಿ ಹೊತ್ತಿದ್ದು ಆಗಸ್ಟ್ 14 ಕೊನೆಯ ದಿನಾಂಕವಾಗಿದೆ. ಈಗಾಗಲೇ ಸಾಕಷ್ಟು ರೈತರು ವಿಮೆ ಪಡೆದುಕೊಳ್ಳುತ್ತಿದ್ದಾರೆ ಎಂದು ವಿಮಾ ಕಂಪನಿ ಮೂಲಗಳು ತಿಳಿಸಿವೆ.

    ಕರಾವಳಿ ಭಾಗದಲ್ಲಿ ಪ್ರತಿ ವರ್ಷ ಭತ್ತ ಬೆಳೆ ಹಾನಿ ಸಹಜ ಎಂಬಂತಾಗಿದ್ದರಿಂದ ರೈತರಲ್ಲೂ ವಿಮೆಯ ಮಹತ್ವದ ಅರಿವು ನಿಧಾನವಾಗಿ ಉಂಟಾಗುತ್ತಿದೆ. ಆದರೆ, ಬೆಳೆ ಹಾನಿ ಸಮೀಕ್ಷೆಯ ವಿಧಾನ ಇನ್ನಷ್ಟು ಸರಳೀಕರಣವಾಗಿ ರೈತರಿಗೆ ನ್ಯಾಯ ದೊರಕುವಂತಾಗಬೇಕು.

    | ಜಿ.ಕೆ. ಪಟಗಾರ ಕಾಗಾಲ, ಕಗ್ಗ ಭತ್ತದ ರೈತ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts