More

    ವರುಣನ ನಿರೀಕ್ಷೆಯಲ್ಲಿ ನೇಗಿಲಯೋಗಿ

    ಸಂತೋಷ ಮುರಡಿ ಮುಂಡರಗಿ

    ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಬೀಳದ ಕಾರಣ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಮೇ ತಿಂಗಳ ಕೊನೆಯ ವಾರದಲ್ಲಿ ಕೆಲವೆಡೆ ಉತ್ತಮ ಮಳೆ ಸುರಿದಿದ್ದರಿಂದ ರೈತರು ಹೆಸರು, ಶೇಂಗಾ, ತೊಗರಿ ಮೊದಲಾದವುಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ, ನಂತರ ಉತ್ತಮವಾಗಿ ಮಳೆಯಾಗದೆ ಇರುವುದರಿಂದ ಈವರೆಗೆ ಶೇ. 30ರಷ್ಟು ಮಾತ್ರ ಬಿತ್ತನೆಯಾಗಿದೆ. ಉಳಿದ ರೈತರು ಬಿತ್ತನೆಗಾಗಿ ಭೂಮಿ ಹದಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ.

    ಜೂ. 15ರೊಳಗೆ ಹೆಸರು ಬಿತ್ತನೆ ಕಾರ್ಯ ಪೂರ್ಣವಾಗಬೇಕಿತ್ತು. ಆದರೆ, ಮಳೆ ಇಲ್ಲದ್ದರಿಂದ ಬಹುತೇಕ ಕಡೆ ಇನ್ನೂ ಹೆಸರು ಬಿತ್ತಿಲ್ಲ. ಜೂ. 15ರ ನಂತರ ಹೆಸರು ಬಿತ್ತಿದರೆ ಕೀಟ ಬಾಧೆ, ರೋಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಕಳೆದ ವಾರ ನಾಲ್ಕೈದು ದಿನ ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಆಗಾಗ ಜಿಟಿಜಿಟಿ ಮಳೆಯೊಂದಿಗೆ ಅಲ್ಪಮಟ್ಟಿಗೆ ಸಾಧಾರಣ ಮಳೆಯಾಯಿತು. ಆದರೆ, ಬಿತ್ತನೆ ಮಾಡುವಷ್ಟು ಭೂಮಿ ಹಸಿಯಾಗಿಲ್ಲ. ನಿರಂತರ ಸುರಿದ ಜಿಟಿಜಿಟಿ ಮಳೆಯಿಂದ ಕೆಲವೆಡೆ ಬಿತ್ತಿದ್ದ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿದೆ.

    ಬಿತ್ತನೆ ಗುರಿ: ತಾಲೂಕಿನಲ್ಲಿ 61,317 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ ನೀರಾವರಿ ಹಾಗೂ ಖುಷ್ಕಿ ಭೂಮಿ ಸೇರಿ 48,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಭತ್ತ 2,700 ಹೆಕ್ಟೇರ್, ಹೈಬ್ರೀಡ್ ಜೋಳ 600 ಹೆಕ್ಟೇರ್, ಗೋವಿನಜೋಳ 17,600 ಹೆಕ್ಟೇರ್, ಸಜ್ಜೆ 500 ಹೆಕ್ಟೇರ್, ತೊಗರಿ 100 ಹೆಕ್ಟೇರ್, ಹೆಸರು 12,000 ಹೆಕ್ಟೇರ್, ಸೂರ್ಯಕಾಂತಿ 6,000 ಹೆಕ್ಟೇರ್, ಬಿ.ಟಿ. ಹತ್ತಿ 2,000 ಹೆಕ್ಟೇರ್, ಕಬ್ಬು 1000 ಹೆಕ್ಟೇರ್ ಹಾಗೂ 6,000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ.

    ಬೀಜ ದಾಸ್ತಾನು, ಮಾರಾಟ: ತಾಲೂಕಿನ ಮುಂಡರಗಿ ಮತ್ತು ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 38 ಕ್ವಿಂಟಾಲ್ ಹೆಸರು ಬೀಜ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 32 ಕ್ವಿಂಟಾಲ್ ಮಾರಾಟವಾಗಿದೆ. 14 ಕ್ವಿಂಟಾಲ್ ಹೈಬ್ರೀಡ್ ಜೋಳ ದಾಸ್ತಾನು ಪೈಕಿ 13 ಕ್ವಿಂಟಾಲ್ ಮಾರಾಟವಾಗಿದೆ. 493 ಕ್ವಿಂಟಾಲ್ ಗೋವಿನಜೋಳ ಬೀಜದಲ್ಲಿ 241 ಕ್ವಿಂಟಾಲ್ ಮಾರಾಟವಾಗಿದೆ. 67 ಕ್ವಿಂಟಾಲ್ ಶೇಂಗಾದಲ್ಲಿ 3 ಕ್ವಿಂಟಾಲ್ ಮಾರಾಟವಾಗಿದೆ. ದಾಸ್ತಾನು ಮಾಡಿದ್ದ 41 ಕ್ವಿಂಟಾಲ್ ತೊಗರಿ ಪೂರ್ಣ ಮಾರಾಟಗೊಂಡಿದೆ. 6 ಕ್ವಿಂಟಾಲ್ ಸಜ್ಜೆಯಲ್ಲಿ 1 ಕ್ವಿಂಟಾಲ್ ಮಾರಾಟವಾಗಿದೆ. ರೈತರು ಬಿತ್ತನೆ ಬೀಜ ಖರೀದಿಸಿಟ್ಟುಕೊಂಡಿದ್ದಾರೆ. ಸದ್ಯ ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂರ್ಯಕಾಂತಿ, ತೊಗರಿ ಬೀಜ ಲಭ್ಯವಿಲ್ಲ.

    ವಾಡಿಕೆ ಮಳೆ: ತಾಲೂಕಿನಲ್ಲಿ ಮೇ ತಿಂಗಳಲ್ಲಿ ವಾಡಿಕೆ ಮಳೆ 65 ಮಿಮೀ ಇದೆ. ಆದರೆ, ಸುರಿದಿದ್ದು 81.5 ಮಿಮೀ. ಜೂ. 1ರಿಂದ 22ರವರೆಗೆ ವಾಡಿಕೆ ಮಳೆ 48.1 ಮಿಮೀ ಇದೆ. ಆಗಿದ್ದು 58.1 ಮಿಮೀ ಮಾತ್ರ. ಆದರೆ, ತಾಲೂಕಿನೆಲ್ಲೆಡೆ ಭೂಮಿ ಹಸಿಯಾಗುವಷ್ಟು ಸಮರ್ಪಕವಾಗಿ ಮಳೆಯಾಗಿಲ್ಲ. ಹೀಗಾಗಿ, ತಾಲೂಕಿನ ಹಲವೆಡೆ ಬಿತ್ತನೆ ಕಾರ್ಯ ಬಾಕಿಯಿದೆ.

    ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು, ಮೆಣಸಿನಕಾಯಿ, ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಆದರೆ, ಮಳೆ ಸುರಿಯದೆ ಬೆಳೆಗೆ ತೇವಾಂಶ ಕೊರತೆಯಾಗುತ್ತಿದೆ. ಮಳೆಯನ್ನೇ ನಂಬಿಕೊಂಡು ಬಿತ್ತನೆ ಮಾಡಿದ ರೈತರು ತೊಂದರೆ ಅನುಭವಿಸುವಂತಾಗಿದೆ. ಸದ್ಯ ಮಳೆ ಬೇಕಿದೆ. ಉತ್ತಮವಾಗಿ ಸುರಿದರೆ ಮಾತ್ರ ಬೆಳೆಗೆ ಮತ್ತು ನಮ್ಮ ಬದುಕಿಗೆ ಅನುಕೂಲವಾಗಲಿದೆ.

    | ಕಳಕಪ್ಪ ತುಪ್ಪದ ವೆಂಕಟಾಪುರ ರೈತ

    ಸಾವಿರಾರು ರೂಪಾಯಿ ಖರ್ಚು ಮಾಡಿ ಭೂಮಿಯನ್ನು ಹದಗೊಳಿಸುವ ಮೂಲಕ ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಟಿಜಿಟಿ ಮಳೆ ಬಂದು ಹೋಯ್ತು ಹೊರತು ಸಮರ್ಪಕ ಮಳೆ ಇಲ್ಲದೆ ಈವರೆಗೂ ಬಿತ್ತನೆ ಮಾಡಿಲ್ಲ. ಈಗಾಗಲೇ ಹೆಸರು ಬಿತ್ತನೆ ಮಾಡುವ ಸಮಯವೂ ಮುಗಿದು ಹೋಗಿದೆ. ರೈತರೆಲ್ಲ ಬಿತ್ತನೆ ಮಾಡುವುದಕ್ಕೆ ಉತ್ತಮ ಮಳೆಗಾಗಿ ಕಾದು ಕುಳಿತಿದ್ದಾರೆ. ಈ ತಿಂಗಳು ಕಳೆದರೆ ಮುಂಗಾರು ಬಿತ್ತನೆ ಸಮಯ ಮುಗಿಯಲಿದೆ.

    | ಮಹೇಶ ಹೆಬ್ಬಾಳ ತಿಪ್ಪಾಪುರ ರೈತ

    ಬಿತ್ತನೆಗಾಗಿ ಬೀಜ, ಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ. ರೈತರು ಬೀಜ ಸಂಗ್ರಹಿಸಿಟ್ಟುಕೊಂಡಿದ್ದು, ತಾಲೂಕಿನಲ್ಲಿ ಮಳೆ ಪ್ರಮಾಣ ಕುಂಠಿತವಾಗಿದ್ದರಿಂದ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಉತ್ತಮ ಮಳೆಯಾದರೆ ಬಿತ್ತನೆ ಕಾರ್ಯ ಚುರುಕಾಗಲಿದೆ. ವಿವಿಧ ಬೆಳೆಗಳ ಕೀಟನಾಶಕ, ಔಷಧ ಲಭ್ಯವಿದೆ. ಇಲಾಖೆ ಸಲಹೆ ಮೇರೆಗೆ ಔಷಧ ಸಿಂಪಡಿಸಿ ಬೆಳೆಗೆ ರೋಗ ತಗುಲದಂತೆ ನೋಡಿಕೊಳ್ಳಬೇಕು.

    | ವೆಂಕಟೇಶಮೂರ್ತಿ ಟಿ.ಸಿ. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts