More

    ಬೆಳೆ ವಿಮೆ ಅವಧಿ ವಿಸ್ತರಣೆಗೆ ಒತ್ತಾಯ

    ವಿಜಯವಾಣಿ ಸುದ್ದಿಜಾಲ ಶಿರಸಿ

    ಕೋವಿಡ್- 19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ತೋಟಿಗರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ವಿಮಾ ಕಂತು ಪಾವತಿಸುವ ಬಗ್ಗೆ ಈಗಷ್ಟೇ ಮಾಹಿತಿ ಹೊರಬಿದ್ದಿದ್ದು, ಜೂ. 30 ಅಂತಿಮ ದಿನವಾಗಿದೆ. ಹೀಗಾಗಿ ಅವಧಿ ವಿಸ್ತರಣೆ ಮಾಡಬೇಕೆಂಬ ಆಗ್ರಹ ಬಲವಾಗಿ ಕೇಳಿ ಬಂದಿದೆ.

    ವಾಣಿಜ್ಯ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ನಾಲ್ಕು ವರ್ಷಗಳ ಈಚೆಗೆ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ರಾಜ್ಯದ ಆಯಾ ಪ್ರದೇಶದ ಅತಿವೃಷ್ಟಿ, ಅನಾವೃಷ್ಟಿ ವಿವರಗಳನ್ನು ದಾಖಲಿಸಿ ಅದರ ಆಧಾರದ ಮೇಲೆ ಬೆಳೆಗಳಿಗೆ ವಿಮಾ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ ಮತ್ತು ವಿಮಾ ಏಜೆನ್ಸಿ ಪಡೆದ ಕಂಪನಿಗಳು ಅದನ್ನು ರೈತರ ಖಾತೆಗೆ ಸಂದಾಯ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಯೋಜನೆಯ ವಿಮಾ ಕಂತು ಪಾವತಿಸುವ ಬಗ್ಗೆ ಸಾಕಷ್ಟು ಸಮಯಾವಕಾಶ ನೀಡಿ ಸಂಬಂಧಪಟ್ಟ ಆರ್ಥಿಕ ಸಂಸ್ಥೆಗಳಿಗೆ, ತೋಟಗಾರಿಕೆ ಇಲಾಖೆಗೆ ಸರ್ಕಾರ ಆದೇಶಿಸುತ್ತದೆ. ಆದರೆ, ಈ ಬಾರಿ ಮಾತ್ರ ಜೂ. 25ರ ನಂತರ ಜೂ. 30ಕಂತು ತುಂಬಲು ಕೊನೆಯ ದಿನ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದು ವಿಮಾ ಕಂತು ತುಂಬುವ ರೈತರಿಗೆ ಸಂಕಷ್ಟ ತಂದೊಡ್ಡಿದೆ.

    ಸರ್ವರ್ ಸಮಸ್ಯೆ: ವಿಮಾ ಕಂತು ತುಂಬಲು 10ಕ್ಕೂ ಹೆಚ್ಚು ದಾಖಲೆಗಳನ್ನು ಬೆಳೆಗಾರರು ಸಂಬಂಧಪಟ್ಟ ಆರ್ಥಿಕ ಸಂಸ್ಥೆಗೆ ಸಲ್ಲಿಸಬೇಕು. ಇವೆಲ್ಲವೂ ವಿಮಾ ಕಂಪನಿ ನಿಗದಿಪಡಿಸಿದ ಪೋರ್ಟ್​ಲ್ಗೆ ಜೋಡಿಸಬೇಕು. ಸರ್ವರ್ ಸಮಸ್ಯೆ ನಡುವೆ ಒಬ್ಬ ರೈತನ ದಾಖಲೆ ಸೇರಿಸಲು ಕನಿಷ್ಠ 15 ರಿಂದ 20 ನಿಮಿಷ ಬೇಕು. ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಮೇಲ್ಪಟ್ಟು ರೈತರು ವಿಮಾ ವ್ಯಾಪ್ತಿಗೆ ಒಳಗಾಗಲಿದ್ದು, ಕಡಿಮೆ ಅವಧಿಯಲ್ಲಿ ಎಲ್ಲ ರೈತರ ದಾಖಲೆಯನ್ನು ಸಮರ್ಪಕವಾಗಿ ಜೋಡಿಸುವುಸು ಅಸಾಧ್ಯದ ಮಾತಾಗಿದೆ. ಹೀಗಾಗಿ ಅವಧಿ ವಿಸ್ತರಣೆ ಅನಿವಾರ್ಯ ಎಂಬುದು ಸಹಕಾರಿ ಹಾಗೂ ತೋಟಗಾರಿಕೆ ಕ್ಷೇತ್ರದ ತಜ್ಞರ ಅಭಿಪ್ರಾಯ.

    ಹಣವಿಲ್ಲ, ಸಾರಿಗೆಯಿಲ್ಲ: ಕೋವಿಡ್- 19 ಕಾರಣ ಹಳ್ಳಿಗಳಿಂದ ನಗರಕ್ಕೆ ಬರಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಇನ್ನೊಂದು ದಿನದಲ್ಲಿ ಸಾವಿರಾರು ರೈತರು ಮೊತ್ತ ತುಂಬುವುದಾದರೂ ಎಲ್ಲಿ? ಜತೆಗೆ ಮಳೆಗಾಲಪೂರ್ವ ಖರೀದಿಯಿಂದ ರೈತರ ಬಳಿ ಹಣವೂ ಹೆಚ್ಚಿಲ್ಲ. ಈ ಮೊದಲಾಗಿದ್ದರೆ ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯ ಮಾಡಲಾಗಿತ್ತು. ಆದರೆ, ಈ ಬಾರಿ ಅದನ್ನು ರೈತರ ಆಯ್ಕೆಗೆ ಬಿಡಲಾಗಿದೆ. ಹೀಗಾಗಿ ಸಾಲದ ಹಣವನ್ನೂ ವಿನಿಯೋಗಿಸಿದ್ದೇವೆ. ತಿಂಗಳ ಮೊದಲೇ ತಿಳಿಸಿದ್ದರೆ ವಿಮಾ ಕಂತಿನ ಮೊತ್ತವನ್ನಾದರೂ ಇಟ್ಟುಕೊಳ್ಳುತ್ತಿದ್ದೆವು. ಆದರೆ, ಈಗ ಕಂತು ತುಂಬುವ ಮನಸ್ಸಿದ್ದರೂ ಆಗದ ಸ್ಥಿತಿಯಿದೆ ಎನ್ನುತ್ತಾರೆ ರೈತರು.

    ಮುಂದುವರಿದ ಗೊಂದಲ: ರೈತರಿಗೆ ಪರಿಹಾರ ನೀಡುವುದಕ್ಕೆ ಜಾರಿಗೆ ತಂದಿರುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದಂತೆ ಕಳೆದ ವರ್ಷಗಳಲ್ಲಿ ಯುನಿವರ್ಸಲ್ ಸೋಂಪ್, ರಿಲಾಯನ್ಸ್, ಎಸ್​ಬಿಐ ಕಂಪನಿಗಳಿಗೆ ಏಜೆನ್ಸಿ ನೀಡಲಾಗಿತ್ತು. ಆದರೆ, ಈ ಬಾರಿ ವಿಮಾ ಏಜೆನ್ಸಿ ಯಾವುದು ಎನ್ನುವುದು ನಿಗದಿಯಾಗಿಲ್ಲ. ಹೀಗಾಗಿ ಸಹಕಾರಿ ಸಂಸ್ಥೆ ಹಾಗೂ ನಿಗದಿತ ಬ್ಯಾಂಕ್​ಗಳು ರೈತರಿಂದ ಸಂಗ್ರಹಿಸಿದ ವಿಮಾ ಕಂತನ್ನು ಯಾವ ಕಂಪನಿಗೆ ಪಾವತಿಸಬೇಕೆಂಬ ಗೊಂದಲದಲ್ಲಿವೆ.

    ಪ್ರತಿ ವರ್ಷ ಬೆಳೆಸಾಲ ಬಿಡುಗಡೆಗೂ ಮುನ್ನ ಕಂತು ತುಂಬಲು ಹಾಗೂ ಅಂತಿಮ ದಿನದ ಆದೇಶ ಬರುತ್ತಿತ್ತು. ಅಂದಾಜು 15ರಿಂದ 20 ದಿನಗಳ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ತುಂಬಾ ತಡವಾಗಿದ್ದು, ನಾಲ್ಕೈದು ದಿನಗಳ ಅವಕಾಶ ನೀಡಲಾಗಿದೆ. ಇದು ವಿಮಾ ಕಂತು ಪಾವತಿ, ದಾಖಲೆ ಪರಿಶೀಲನೆ, ತಾಂತ್ರಿಕ ಹಾಗೂ ವ್ಯಾವಹಾರಿಕವಾಗಿ ಸಮಸ್ಯೆ ಆಗುತ್ತದೆ. ಹಾಗಾಗಿ ಅವಧಿ ವಿಸ್ತರಣೆ ಅನಿವಾರ್ಯ.

    | ಭಾಸ್ಕರ ಹೆಗಡೆ ಕಾಗೇರಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

    ಬೆಳೆಗಾರರ ಮಾಹಿತಿಗಳನ್ನು ಅಪ್​ಲೋಡ್ ಮಾಡಲು 15 ದಿನ ಸಮಯವಿದೆ. ಆದರೆ, ಹಣವನ್ನು ಜೂ. 30ರೊಳಗೇ ಭರಣ ಮಾಡಬೇಕು. ಜುಲೈ 1ರಿಂದ ವಿಮಾ ಯೋಜನೆ ಆರಂಭಗೊಳ್ಳಲಿದ್ದು, ಈ ಕುರಿತು ಅಧಿಕಾರಿಗಳ ಜತೆಗೆ ರ್ಚಚಿಸಲಾಗಿದೆ. ಅವಧಿ ವಿಸ್ತರಣೆಗೆ ಸಾಕಷ್ಟು ತಾಂತ್ರಿಕ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ವಿಸ್ತರಣೆ ಕಷ್ಟಸಾಧ್ಯ.

    | ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts