More

    ಹಗಲಿನಲ್ಲಿಯೇ 7 ಗಂಟೆ ವಿದ್ಯುತ್ ನೀಡಲು ರೈತರ ಆಗ್ರಹ; ರೈತ ಸಂಘದಿಂದ ಮನವಿ ಸಲ್ಲಿಕೆ

    ರಾಣೆಬೆನ್ನೂರ: ರೈತರಿಗೆ ಹಗಲು ಹೊತ್ತಿನಲ್ಲಿಯೇ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಹೆಸ್ಕಾಂ ವಿಭಾಗಾಧಿಕಾರಿ ಎನ್.ಸಿ. ಬೆಳಕೇರಿ ಅವರಿಗೆ ಮನವಿ ಸಲ್ಲಿಸಿದರು.
    ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದೆ. ಸರ್ಕಾರ ಕೂಡ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ರೈತರು ಕೃಷಿ ಕಾರ್ಯಗಳಿಗಾಗಿ ಪಂಪ್‌ಸೆಟ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.
    ಸರ್ಕಾರ ರಾತ್ರಿ ಸಮಯದಲ್ಲಿ ಐದು ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸುವುದಾಗಿ ಘೋಷಣೆ ಮಾಡಿದೆ. ಆದರೆ ತಾಲೂಕಿನಲ್ಲಿ ರಾತ್ರಿ ಸಮಯ ಎರಡ್ಮೂರು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದಲ್ಲದೆ ರೈತರು ನಿದ್ದೆಗೆಟ್ಟು ತಮ್ಮ ಹೊಲಗಳಿಗೆ ನೀರು ಹರಿಸಲು ತೆರಳುವಾಗ ವನ್ಯ ಮೃಗಗಳು ಮತ್ತು ಇತರ ವಿಷ ಜಂತುಗಳಿಂದ ತೊಂದರೆ ಎದುರಿಸಬೇಕಾಗುತ್ತದೆ.
    ಆದ್ದರಿಂದ ಹೆಸ್ಕಾಂ ಅಧಿಕಾರಿಗಳು ಕೂಡಲೇ ಕನಿಷ್ಠ ಏಳು ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಪ್ರಮುಖರಾದ ಚಂ.ಸು. ಪಾಟೀಲ, ರಾಜು ಹರಿಹರ, ಶಿವಕುಮಾರ ಜಾಧವ, ಅಣ್ಣಪ್ಪ ಅಜ್ಜೇರ, ರವಿಕುಮಾರ ಮೂಲಿಕೇರಿ, ಮಹದೇವಪ್ಪ ಬಣಕಾರ, ದೇವರೆಡ್ಡಿ ಯೋಗಿ, ಮಂಜಣ್ಣ ಸಂಬೋಜಿ, ಗಂಗಾಧರ ಕೂಗನೂರ, ಬರಮಪ್ಪ ತಳವಾರ, ಮಂಜುನಾಥ ಅಣಜಿ, ಕಿರಣ ಅಣಜಿ, ಪರಮೇಶ್ವರಪ್ಪ ಕೂರಗುಂದ, ವೀರೇಶ ಬಣಕಾರ, ಸಂತೋಷ ಅಣಜಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts