More

    ಅಥಣಿ: ರೈತರಿಂದ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಗತಿ

    ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬುಧವಾರ ಕಾರ್ಮಿಕರ ಯುನಿಯನ್, ಎಂಪ್ಲಾಯೀಸ್ ಸೊಸೈಟಿ ಆಶ್ರಯದಲ್ಲಿ ಸಿಬ್ಬಂದಿ, ಕಾರ್ಮಿಕರು ಸೇರಿ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿಯವರ 62ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

    ಕಾರ್ಮಿಕರ ಸತ್ಕಾರ ಸ್ವೀಕರಿಸಿ ಮಾತನಾಡಿದ ಪರಪ್ಪ ಸವದಿ, ಕಾರ್ಮಿಕರ ಮತ್ತು ರೈತರ ಹಿತ ಕಾಪಾಡುವುದು ನನ್ನ ಮೊದಲ ಕರ್ತವ್ಯವಾಗಿದೆ. ಕಾರ್ಖಾನೆ ಆರಂಭದಿಂದ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂ ಮಾಡುವುದು ಮತ್ತು ವೇತನ ಶ್ರೇಣಿ ಹೆಚ್ಚಳ ಮಾಡುವುದು ಬಾಕಿ ಇದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಾರ್ಮಿಕರು, ಸಿಬ್ಬಂದಿ ನನಗೆ ನೀಡಿರುವ ಸಹಕಾರ, ಪ್ರೀತಿ, ವಿಶ್ವಾಸಕ್ಕೆ ಚಿರ ಋಣಿಯಾಗಿರುವೆ.

    ಇದೇ ರೀತಿ ಬಾಂಧವ್ಯ ಇರಲಿ ಎಂದರು. ಕಾರ್ಖಾನೆಯು ಈ ಭಾಗದ ಜನರ ಜೀವನಾಡಿಯಾಗಿದೆ. ಸಹಕಾರ ತತ್ತ್ವದಡಿಯಲ್ಲಿ ಕೆಲಸ ಮಾಡುವ ಜತೆಗೆ ರಾಜ್ಯದಲ್ಲಿ ಉತ್ತಮ ದರ ನೀಡಿದ ಹೆಗ್ಗಳಿಕೆಗೆ ಕಾರ್ಖಾನೆ ಪಾತ್ರವಾಗಲು ಕಾರ್ಮಿಕರು, ರೈತರೇ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೆರೆ ಹಾವಳಿ ಬಂದಾಗ ಕಾರ್ಖಾನೆ ಆವರಣದಲ್ಲಿ ನಿರಾಶ್ರಿತರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿತ್ತು ಎಂದು ಹೇಳಿದರು. ಒಳ್ಳೆಯ ರಿಕವರಿ ಕಬ್ಬು ಪೂರೈಸುವ ರೈತರು, ಕಾರ್ಮಿಕ ವರ್ಗ, ಉತ್ತಮ ಆಡಳಿತ ನಿರ್ವಹಣೆ ಮಾಡುವ ಅಧಿಕಾರಿಗಳು, ಸದಾ ಮಾರ್ಗದರ್ಶಿಯಾಗಿರುವ ಡಿಸಿಎಂ ಲಕ್ಷ್ಮಣ ಸವದಿಯವರು ಹಾಗೂ ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವೆಯಿಂದ ಕೃಷ್ಣಾ ಕಾರ್ಖಾನೆ ಅಭಿವೃದ್ಧಿಯೊಂದಿಗೆ ಸಾಗಲು ಸಾಧ್ಯವಾಗಿದೆ. ರೈತರ ಮತ್ತು ಸಿಬ್ಬಂದಿ ಮಕ್ಕಳಿಗಾಗಿ ವಿಶೇಷ ಸಿಬಿಎಸ್‌ಸಿ ಶಾಲೆ ನಿರ್ಮಿಸುವುದು, ಕಬ್ಬು ಬೆಳೆ ಸಂಶೋಧನಾ ಕೇಂದ್ರ, ಮಣ್ಣು ಪರೀಕ್ಷಾ ಘಟಕ ಹಾಗೂ ವಿವಿಧ ಕೃಷಿ ತಜ್ಞರಿಂದ ವಿಚಾರ ಸಂಕಿರಣ ಏರ್ಪಡಿಸುವ ಉದ್ದೇಶ ಇದೆ ಎಂದರು. ಎಂಪ್ಲಾಯೀಸ್ ಸೊಸೈಟಿ ಅಧ್ಯಕ್ಷ ಪಿ.ಎಸ್. ಪಾಟೀಲ ಮತ್ತು ಯುನಿಯನ್ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಆರ್. ಖೋತ ಮಾತನಾಡಿ, ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕು ಮತ್ತು ನೌಕರಿ ಕಾಯಂ ಮಾಡುವಂತೆ ಮನವಿ ಮಾಡಿದರು.

    ನೂತನ ವರ್ಷದ ದಿನದರ್ಶಿಕೆಯನ್ನು ಪರಪ್ಪ ಸವದಿಯವರು ಬಿಡುಗಡೆ ಮಾಡಿದರು. ನಿರ್ದೇಶಕ ಜಿ.ಎಂ. ತೆವರಮನಿ, ಕಾರ್ಖಾನೆ ಅಧಿಕಾರಿಗಳಾದ ಎ.ಕೆ. ಬಾಷಾ, ರವಿ ಕುಂಬಾರ, ವಿನಾಯಕ ಮನಗೂಳಿ, ಎಂಪ್ಲಾಯೀಸ್ ಸೊಸೈಟಿಯ ಉಪಾಧ್ಯಕ್ಷ ಎಸ್.ಎ. ದಡ್ಡಿಮನಿ, ನಿರ್ದೇಶಕರಾದ ಎಸ್.ಐ. ನಾಯಿಕ, ಟಿ.ಬಿ. ಚೌಗಲಾ, ವಿ.ಜಿ. ಬಿರಾದಾರ, ವೈ.ಎಸ್. ತೇಲಿ, ಎಸ್.ಡಿ. ಚೌಗಲಾ, ಎನ್.ಎಸ್. ತೇಜುಮಾಳಿ, ಸಿ.ಎಸ್. ಕಾಂಬಳೆ, ಆರ್.ಎಸ್. ಬಿಸಲನಾಯಕ, ಎಂ.ಕೆ. ಪಾಟೀಲ, ಎ.ಎಸ್. ದೊಡಮನಿ ಹಾಗೂ ಕಾರ್ಮಿಕರು, ರೈತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts