More

    ಬಿಜೆಪಿಗೆ ಅಧಿಕಾರ ಹಿಡಿಯಲು ರೈತರು ಏಣಿ ಇದ್ದಂತೆ

    ಶಿಕಾರಿಪುರ: ಸರ್ಕಾರದಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಹಣವಿಲ್ಲ. ಆದರೆ ಜಾತಿಗಳ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ರೂ. ನೀಡಲು ಹಣವಿದೆ. ಇವರಿಗೆ ರೈತರು ಕೇವಲ ಅಧಿಕಾರ ಹಿಡಿಯಲು ಏಣಿ ಅಷ್ಟೇ. ರೈತರ ಬಗ್ಗೆ ನಿಜವಾದ ಕಾಳಜಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ. ತೀ.ನ.ಶ್ರೀನಿವಾಸ್ ದೂರಿದರು.

    ದೇಶಾದ್ಯಂತ ರೈತರ ಚಳವಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತ ಚಳವಳಿ ಹತ್ತಿಕ್ಕುತ್ತಿರುವುದು ಸರಿಯಲ್ಲ. ಶಿಕಾರಿಪುರ ತಾಲೂಕಿನಿಂದ ಯಡಿಯೂರಪ್ಪ ಅವರು 8 ಬಾರಿ ಆಯ್ಕೆಯಾಗಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾದರೂ ತಾಲೂಕಿನ ಬಗರ್​ಹುಕುಂ ಸಾಗುವಳಿ ರೈತರ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    11 ಸಾವಿರ ಅರ್ಜಿಗಳು ಅರಣ್ಯಹಕ್ಕು ಕಾಯ್ದೆಯಡಿ ಸಕ್ರಮಗೊಳಿಸಲು ಬಾಕಿಯಿವೆ. 600 ಎಸ್ಟಿಯವರಿಗೆ ಮತ್ತು 6 ಸಾಮಾನ್ಯ ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ. ಬಗರ್​ಹುಕುಂ ಕಮಿಟಿ ಅಧ್ಯಕ್ಷರಾಗಿರುವ ಬಿ.ವೈ.ರಾಘವೇಂದ್ರ ಇದುವರೆಗೂ ಒಂದು ಸಭೆ ಮಾಡಿಲ್ಲ. ಹೀಗೇ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

    ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ 1978ರ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿದ ಬಡವರು, ಭೂ ರಹಿತರು, ಸಣ್ಣ ಹಿಡುವಳಿದಾರರಿಗೆ ಜಮೀನು ನೀಡಬೇಕು. ಆದರೆ ಶಿಕಾರಿಪುರ ತಾಲೂಕಿನಲ್ಲಿ 1978ರ ಹಿಂದೆ ಸಾಗುವಳಿ ಮಾಡಿದವರು ಸಾವಿರಾರು ಜನರಿದ್ದಾರೆ. ತಾವು ಬಗರ್​ಹುಕುಂ ಸಾಗುವಳಿಗೆ ಹೋರಾಡಿದ್ದೇವೆ ಎಂದು ಹೇಳುವ ನಿಮಗೆ ಈ ಸಮಸ್ಯೆಗಳು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

    ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ರೈತ ಸಂಕಷ್ಟದಲ್ಲಿದ್ದಾನೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 1,800 ರೂ. ಘೊಷಿಸಿದರೂ ಕೆಎಂಎಫ್​ನಲ್ಲಿ 1,500 ರೂ.ಗೆ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಮಾಡಿದ ಖರ್ಚಿನ ಅರ್ಧಭಾಗ ಕೂಡ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಯುವಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್, ಬಡಗಿ ಪಾಲಾಕ್ಷಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts