More

    ರೈತರಿಗೆ ಮೋಸ ಮಾಡಲು ಸಂಚು: ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಭೂಮಾಲೀಕರು

    ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಮೈಸೂರಿನಲ್ಲಿರುವ ಕೋಟ್ಯಂತರ ರೂ ಮೌಲ್ಯದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮಗೆ ಮೋಸ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆಂದು ರೈತರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
    ಡಿ.22ರಂದು ಮೈಸೂರಿನಿಂದ ಆಗಮಿಸಿದ ರೈತರು, ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ನ್ಯಾಯ ಕೊಡಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಮಾಡಿದ್ದಾರೆ.
    ರೈತರ ದೂರಿನಲ್ಲೇನಿದೆ?: ಕೆಲ ರಿಯಲ್ ಎಸ್ಟೇಟ್ ದಲ್ಲಾಳಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ರೈತರಿಗೆ ಮೋಸ ಮಾಡಲು ಕಾರ್ಯಪ್ರೌವೃತ್ತರಾಗಿದ್ದಾರೆ. ಅದರಂತೆ ಈಶ ಮುರುಳಿ, ಬಸರಾಳು ರವಿಕುಮಾರ್ ಮತ್ತು ಮೈಸೂರಿನ ಟೋನಿ ಜಾನ್‌ಸನ್ ಎಂಬುವರು ಸುಳ್ಳು ದೂರು ದಾಖಲಿಸಿ ಸಾರ್ವಜನಿಕರು ಹಾಗೂ ಚೆಲುವನಾರಾಯಣಸ್ವಾಮಿಯ ಭಕ್ತರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
    ಈ ಭೂಮಿ ಸ್ವಾತಂತ್ರೃ ಪೂರ್ವದಿಂದಲೂ ಖಾಸಗಿ ಮಾಲೀಕತ್ವದ ಹಿಡುವಳಿ ಜಮೀನಾಗಿದೆಯೇ ವಿನಃ ದೂರಿನಲ್ಲಿ ತಿಳಿಸಿರುವಂತೆ ಮೈಸೂರು ಮಹಾರಾಜದಿಂದ ಬಂದ ಬಳುವಳಿಯಾಗಿಲ್ಲ. ಮೂಲ ಭೂಮಾಲೀಕರು ಈ ಜಮೀನನ್ನು ಹನುಮಯ್ಯ ಉರುಫ್ ಚೀಯಪ್ಪ ಮತ್ತು ಸಹೋದರರಿಗೆ ಗುತ್ತಿಗೆ ಕೊಟ್ಟು ಅದರಿಂದ ಬಂದ ಆದಾಯದಲ್ಲಿ ಪ್ರತಿ ವರ್ಷ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ದೇಣಿಗೆ ನೀಡಲು ತಿಳಿಸಿದ್ದಾರೆ. ಆದರೆ ಜಮೀನು ದೇವಾಲಯಕ್ಕೆ ಸೇರಿದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
    ಪ್ರಮುಖವಾಗಿ ಹನುಮಯ್ಯ ಉರುಫ್ ಚೀಯಪ್ಪ ಮತ್ತು ಸಹೋದರರು 1946ರಲ್ಲಿ ಗುತ್ತಿಗೆ ಪಡೆದಿದ್ದಾರೆ. ಅಂದಿನಿಂದ ಇಂದಿನವರೆಗೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. 1974ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಮಂಜೂರಾತಿಗಾಗಿ ಫಾರಂ ನಂ.7 ಸಲ್ಲಿಸಲಾಗಿದೆ. ಅದರಂತೆ ಮೈಸೂರು ತಾಲೂಕು ಭೂ ನ್ಯಾಯ ಮಂಡಳಿ 1976ರಲ್ಲಿ ಗೇಣಿ ಹಕ್ಕಿನಂತೆ ಜಮೀನು ಮಂಜೂರಾಗಿದೆ. ಅಂತೆಯೇ ಮೈಸೂರು ತಾಲೂಕು ತಹಸೀಲ್ದಾರ್ ಫಾರಂ ನಂ.10 ಅನ್ನು ನೀಡಿದ್ದು, ಎಂ.ಆರ್ ಆಗಿ ಹನುಮಯ್ಯ, ಕೆಂಪಯ್ಯ, ಪುಟ್ಟಸ್ವಾಮಿ ಹಾಗೂ ರಾಮಯ್ಯ ಅವರಿಗೆ ಖಾತೆ ಆಗಿದೆ. ಬಳಿಕ ಅವರ ವಂಶವೃಕ್ಷದಂತೆ ವಾರಸುದಾರರಿಗೆ ಪೌತಿ ಖಾತೆಯಾಗಿದೆಂದು ತಿಳಿಸಿದ್ದಾರೆ.
    ವಾಸ್ತವಾಂಶ ಹೀಗಿರುವಾಗ ಈಶ ಮುರುಳಿ, ಬಸರಾಳು ರವಿಕುಮಾರ್, ಮೈಸೂರಿನ ಟೋನಿ ಜಾನ್‌ಸನ್ ಸುಳ್ಳು ದೂರು ನೀಡಿದ್ದಾರೆ. ಈ ಪೈಕಿ ಟೋನಿ ಜಾನ್‌ಸನ್ ರಿಯಲ್ ಎಸ್ಟೇಟ್ ದಲ್ಲಾಳಿಯಾಗಿದ್ದು, ಈತನ ಪತ್ನಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಟೋನಿ ಜಾನ್‌ಸನ್ ಜಮೀನು ಮಾಲೀಕರಲ್ಲೊಬ್ಬರಾದ ನಾಗೇಶ್ ಅವರಿಗೆ ಕಳೆದ ಆರು ತಿಂಗಳಿಂದ ಪೀಡಿಸುತ್ತಿದ್ದಾರೆ. ಯಾವಾಗ ಜಮೀನು ಸಿಗುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ನಕಲಿ ಕ್ರಯದ ಕರಾರು ಪತ್ರ ತಯಾರಿಸಿಕೊಂಡು ಮೈಸೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಬಳಿಕ ರೈತರು ಹಾಗೂ ಗ್ರಾಮಸ್ಥರ ಒತ್ತಾಯಕ್ಕೆ ಹೆದರಿ ಹತ್ತೇ ದಿನದಲ್ಲಿ ದಾವೆಯನ್ನು ಹಿಂಪಡೆದಿದ್ದಾರೆಂದು ವಿವರಿಸಿದ್ದಾರೆ.
    ಈ ಹಿನ್ನೆಲೆಯಲ್ಲಿ ಹೋರಾಟಗಾರರ ಹೆಸರಲ್ಲಿ ಸುಳ್ಳು ದೂರು ದಾಖಲಿಸಿ ಜಮೀನು ಮಾಲೀಕರಿಗೆ ಹಣದ ಸುಲಿಗೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಜಮೀನು ಮಾಲೀಕರ ತೇಜೋವಧೆಗೆ ಮುಂದಾಗಿದ್ದಾರೆ. ಆದ್ದರಿಂದ ಅವರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

    ರೈತರಿಗೆ ಮೋಸ ಮಾಡಲು ಸಂಚು: ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಭೂಮಾಲೀಕರು

    ಏನಿದು ಜಮೀನು ವಿವಾದ?: ಮೈಸೂರು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೇ ನಂ.396ರಲ್ಲಿ 3.07ಎಕರೆ, ಸರ್ವೇ ನಂ.397ರಲ್ಲಿ 5 ಗುಂಟೆ, ಸರ್ವೇ ನಂ. 398ರಲ್ಲಿ 1.18 ಎಕರೆ, ಸರ್ವೇ ನಂ.399ರಲ್ಲಿ 4.19 ಎಕರೆ ಸೇರಿ ಒಟ್ಟು 9 ಎಕರೆ 9 ಗುಂಟೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನಿನ ಖಾತೆಯನ್ನು ಎರಡು ತಿಂಗಳ ಹಿಂದೆ ಅಧಿಕಾರಿಗಳ ಕೈವಾಡದಿಂದ ಸರ್ಕಾರ ಎಂದು ಅಕ್ರಮವಾಗಿ ಬದಲಿಸಿ, ಖಾಸಗಿಯವರಿಗೆ ಮಾಡಿಕೊಡಲು ಹುನ್ನಾರ ಮಾಡಲಾಗಿದೆ. ಹಿಂದೆಯೂ 10 ಎಕರೆಯನ್ನು ಖಾಸಗಿಯವರಿಗೆ ಖಾತೆ ಮಾಡಲಾಗಿದೆ. ಕೋಟ್ಯಂತರ ರೂ ಮೌಲ್ಯದ ಜಮೀನನ್ನು ದೇವಾಲಯಕ್ಕೆ ಮರಳಿ ಪಡೆಯಬೇಕು ಮತ್ತು ಈ ಅಕ್ರಮದಲ್ಲಿ ಖಾಸಗಿಯವರೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಸರಾಳು ರವಿ, ಮೇಲುಕೋಟೆ ಈಶಮುರುಳಿ ಮತ್ತು ಮೈಸೂರಿನ ಟೋನಿ ಜಾನ್ಸನ್ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ನ.6ರಂದು ಮೈಸೂರು ಡಿಸಿಗೆ ಪತ್ರ ಬರೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts