More

    ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1972 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮೇ 5ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

    ನಗರದ ಡಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ಲೋಕಸಭಾ ವ್ಯಾಪ್ತಿಯಲ್ಲಿ 18,84,040 ಮತದಾರರಿದ್ದಾರೆ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು. ಮೇ 5ರ ಸಂಜೆ 6 ರಿಂದ ಮೇ 8ರ ಸಂಜೆ 6ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಲಿದ್ದು, 5ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚಿಸಲಾಗಿದೆ. ಪಾರದರ್ಶಕ ಚುನಾವಣೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಮತದಾನ ದಿನವಾದ ಮೇ 7ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1219 ಮತಗಟ್ಟೆಗಳ ಪೈಕಿ 299 ಸೂಕ್ಷ್ಮ ಹಾಗೂ 69 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 610 ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದು, ಸಿಸಿ ಕ್ಯಾಮರಾ ಮೂಲಕ ನೇರವಾಗಿ ಮತಗಟ್ಟೆಗಳನ್ನು ನೋಡಬಹುದು. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ 330 ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ 1,395 ಮತಗಟ್ಟೆ ಅಧಿಕಾರಿಗಳು, 1,395 ಸಹಾಯಕ ಅಧಿಕಾರಿಗಳು, 2,790 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 5,952 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ 863 ಮತದಾರರು ಮತ ಚಲಾಯಿಸಲು ಫಾರ್ಮ್ 12ಡಿ ಅಂಚೆ ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಡಿಸಿ ಕಚೇರಿ ಗಾಂಧಿ ಭವನದಲ್ಲಿ ಮೂರು ದಿನ ಏರ್ಪಡಿಸಿದ್ದ ಅಂಚೆ ಮತದಾನದಲ್ಲಿ 460 ಜನರು ಹಕ್ಕು ಚಲಾಯಿಸಿದ್ದಾರೆ. ಉಳಿದ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಫೆಸಿಲಿಟೇಷನ್ ಸೆಂಟರ್ ತೆರೆದಿದ್ದು, ಮೇ 6ರವರೆಗೆ ಅವಕಾಶ ನೀಡಲಾಗಿದೆ ಎಂದು ಡಿಸಿ ಪ್ರಶಾಂತ ಮಿಶ್ರಾ ತಿಳಿಸಿದರು.
    ಎಎಸ್ಪಿ ನವೀನ ಕುಮಾರ್ ಮಾತನಾಡಿ, ಚುನಾವಣೆ ನಿಮಿತ್ತ ಭದ್ರತೆಗೆ ಒಟ್ಟು 2,048 ಪೊಲೀಸರನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಯಿಂದ 850 ಪೊಲೀಸ್ ಸಿಬ್ಬಂದಿ ಬರಲಿದ್ದಾರೆ. ಈಗಾಗಲೇ ಸಿಆರ್‌ಪಿಎಫ್ ಪಡೆಯ ಮೂರು ತಂಡಗಳು ಆಗಮಿಸಲಿವೆ. ಜಿಲ್ಲೆಯಲ್ಲಿ 11 ರೌಡಿಶೀಟರ್‌ಗಳ ಪೈಕಿ ಒಂಬತ್ತು ಜನರನ್ನು ಗಡಿಪಾರು ಮಾಡಲಾಗಿದೆ. ಗೂಂಡಾ ಕಾಯ್ದೆಯಡಿ 1 ಪ್ರಕರಣ ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ 8.41 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts