More

    ರೈತರಿಂದ ಚಕ್ಕಡಿ, ಟ್ರ್ಯಾಕ್ಟರ್ ರ‍್ಯಾಲಿ

    ನರಗುಂದ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮಂಗಳವಾರ ಬೃಹತ್ ಚಕ್ಕಡಿ, ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೂತನ ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಮರಣ ಶಾಸನ ಬರೆದಿಡಲು ಮುಂದಾಗಿದೆ. ಈ ಕಾಯ್ದೆಗಳಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಈ ಬಗ್ಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಸ್ಪಂದಿಸಿಲ್ಲ ಎಂದರು.

    ಪ್ರವಾಹದಿಂದ ತಾಲೂಕಿನ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ತಕ್ಷಣ ಬೆಳೆಹಾನಿ ಪರಿಹಾರ ನೀಡಬೇಕು. ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಶೀಘ್ರ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

    ಪಟ್ಟಣದ ಪುರಸಭೆ ಆವರಣದಿಂದ ಮಾರುಕಟ್ಟೆ ಪ್ರದೇಶ, ಬಸವೇಶ್ವರ ವರ್ತಲದ ಮೂಲಕ ಶಿವಾಜಿ ಸರ್ಕಲ್​ವರೆಗೆ ರ‍್ಯಾಲಿ ನಡೆಸಲಾಯಿತು. ಕೆಲಕಾಲ ಶಿವಾಜಿಸರ್ಕಲ್​ನಲ್ಲಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರಿಗೆ ಮನವಿ ಸಲ್ಲಿಸಿದರು.

    ರೈತ ಸಂಘದ ತಾಲೂಕಾಧ್ಯಕ್ಷ ವಿಠ್ಠಲ ಜಾಧವ, ರಾಘವೇಂದ್ರ ಗುಜಮಾಗಡಿ, ಕರವೇ ತಾಲೂಕಾಧ್ಯಕ್ಷ ನಭಿಸಾಬ ಕಿಲ್ಲೇದಾರ, ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಬಸವರಾಜ ತಾವರೆ, ಚಂದ್ರಗೌಡ ಪಾಟೀಲ, ವಿಕಾಸ ಮುಧೋಳೆ, ಡಿ.ಎಂ. ನಾಯ್ಕರ, ಚನ್ನು ನಂದಿ, ಪರಶುರಾಮ ಜಂಬಗಿ, ಶ್ರೀಪಾದ ಆನೇಗುಂದಿ, ಮಹೀಮ್ ಚಂದೂನವರ, ವಿರೂಪಾಕ್ಷಪ್ಪ, ಉಪಸ್ಥಿತರಿದ್ದರು.

    ರೈತರ ಹೋರಾಟ ಬೆಂಬಲಿಸಿ ಟ್ರ್ಯಾಕ್ಟರ್ ಪರೇಡ್

    ಗದಗ: ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯ ವಿವಿಧೆಡೆ ಮಂಗಳವಾರ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿ ಪ್ರತಿಭಟಿಸಿದರು. ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಗದಗ ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನವರೆಗೆ 15ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳ ಮೂಲಕ ರೈತರು ಪರೇಡ್ ನಡೆಸಿದರು. ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗವಹಿಸುವ ಮೂಲಕ ಶಾಸಕ ಎಚ್.ಕೆ. ಪಾಟೀಲ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಂತರ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಎಂ.ಎಸ್. ಪರ್ವತಗೌಡ್ರ, ವಿಜಯಕುಮಾರ ಸುಂಕದ, ಬಸವರಾಜ ದೇಸಾಯಿ, ಬಿ.ವೈ. ಹರ್ಲಾಪುರ, ರಾಜು ಬಾಳಿಕಾಯಿ, ಪ್ರಕಾಶ ಲಕ್ಕುಂಡಿ, ಎಲ್. ನಾರಾಯಣಸ್ವಾಮಿ ಮತ್ತಿತರರು ಇದ್ದರು.

    ಬಿಜೆಪಿ ಸರ್ಕಾರ ರೈತ ವಿರೋಧಿಯಲ್ಲ

    ‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಪರ ಇದ್ದಾರೆ. ಬಿಜೆಪಿ ಸರ್ಕಾರ ಎಂದಿಗೂ ರೈತ ವಿರೋಧಿಯಲ್ಲ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಅನ್ನದಾತರನ್ನು ಗೌರವದಿಂದ ಕಾಣುವ ಸರ್ಕಾರ ನಮ್ಮದು ಎಂದರು. ಬೆಣ್ಣೆಹಳ್ಳ ಒತ್ತುವರಿ ತೆರವು ಮಾಡುವಂತೆ ನೀರಾವರಿ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ನೀರಾವರಿ ಸಚಿವರೊಂದಿಗೆ ರ್ಚಚಿಸಲಾಗುವುದು. ಶೀಘ್ರವೇ ಒತ್ತುವರಿ ಮಾಡಿದ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಹೋರಾಟ ಹತ್ತಿಕ್ಕುವುದು ಸರಿಯಲ್ಲ

    ಗದಗ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಬಿಜೆಪಿ ಸರ್ಕಾರದ ಕ್ರಮ ಘನಘೋರ ಅಪರಾಧ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ಅನ್ನದಾತನನ್ನು ಕಡೆಗಣಿಸಲಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹೋರಾಟ ನಡೆಸಿರುವ ರೈತರ ಮನವಿಯನ್ನು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸುತ್ತಿಲ್ಲ. ಮೊಂಡುತನ ಪ್ರದರ್ಶನದಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts